ಇಟಾನಗರ: ಅರುಣಾಚಲ ಪ್ರದೇಶದ ಇಂಡೋ-ಚೀನಾ ಗಡಿಯ ಸಮೀಪ ಅಂಜಾವ ಜಿಲ್ಲೆಯ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯ ಶಂಕಿತ ಗೂಢಾಚಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನಿರ್ಮಲ್ ರಾಯ್ ಎಂದು ಗುರುತಿಸಲಾದ್ದು, ಆತ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಸಾಡಿಯಾ ನಿವಾಸಿಯಾಗಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.
ಬಂಧಿತ ಆರೋಪಿ ಸೈನ್ಯದಲ್ಲಿ ಕಿಬಿಟೂ ಮತ್ತು ಡಿಚು ಗಡಿ ಹುದ್ದೆಗಳಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ. ಈ ಎರಡೂ ಗಡಿರೇಖೆಗಳು ನೈಜ ನಿಯಂತ್ರಣದ ರೇಖೆಯಲ್ಲಿವೆ. ಜನವರಿ 6 ರಂದು ಸೇನಾ ಸಿಬ್ಬಂದಿ ಈತನನ್ನು ಬಂಧಿಸಿ, ಬಳಿಕ ಅರುಣಾಚಲಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಸ್.ಬಿ.ಕೆ ಸಿಂಗ್ ತಿಳಿಸಿದ್ದಾರೆ.
"ಬಂಧಿತ ರಾಯ್ ನೇಪಾಳಿ ಸಮುದಾಯಕ್ಕೆ ಸೇರಿದವನಾಗಿದ್ದು, ಕಿಬಿಟೂ ಪ್ರದೇಶಕ್ಕೆ ಬರುವ ಮೊದಲು 2016 ರಿಂದ 2018 ರವರೆಗೆ ದುಬೈನ ಬರ್ಗರ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಆದರೆ ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಚೀನಾ ಗಡಿಯಲ್ಲಿ ರಾಯ್ ಅನುಮಾನಾಸ್ಪದ ನಡವಳಿಕೆಯನ್ನು ಕಳೆದ ಒಂದು ತಿಂಗಳಿಂದ ಗಮನಿಸಲಾಗುತ್ತಿತ್ತು ಎಂದು ಸೇನಾ ಮೂಲಗಳು ತಿಳಿಸಿವೆ.
ರಾಯ್ ಬಳಿಯಿದ್ದ ಸ್ಮಾರ್ಟ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿದ್ದು, ಸರ್ಕಾರದ ರಹಸ್ಯ ವಿಷಯ ಕಾರ್ಯದ ನಿಬಂಧನೆಗಳ ಅಡಿಯಲ್ಲಿ ಆತನನ್ನು ಬಂಧಿಸಲಾಗಿದ್ದು ಪ್ರಕರಣ ದಾಖಲಿಸಲಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.