ನವದೆಹಲಿ: ಇಂದು ಸೆಂಟ್ರಲ್ ಟ್ರೇಡ್ ಯೂನಿಯನ್ ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದ ಎರಡನೇ ದಿನ. ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರದ ಮೊದಲ ದಿನದಂದು ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಹಲವು ಅಹಿತಕರ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಬಸ್ ಚಾಲಕರಿಗೆ ಹೆಲ್ಮೆಟ್ ಧರಿಸುವಂತೆ ಸೂಚನೆ ನೀಡಿದೆ. ಜಾದವ್ಪುರದಲ್ಲಿ ಬಸ್ ಚಾಲಕರು ಹೆಲ್ಮೆಟ್ಗಳನ್ನು ಧರಿಸಿ ಚಾಲನೆ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಬುಧವಾರ ಬೆಳಿಗ್ಗೆ, ಪಶ್ಚಿಮ ಬಂಗಾಳದಿಂದ ಮೊದಲ ಮುಷ್ಕರವನ್ನು ವರದಿ ಮಾಡಲಾಗಿತ್ತು, ಸೀಲ್ದಾ-ಲಕ್ಷ್ಮೀಕಾಂತ್ಪುರ ಮತ್ತು ಡೈಮಂಡ್ ಹಾರ್ಬರ್ ವಿಭಾಗದಲ್ಲಿ ರೈಲು ಸೇವೆಯ ಮೇಲೆ ಪರಿಣಾಮ ಬೀರಿತು. ಈ ಮಾರ್ಗದಲ್ಲಿ ರೈಲಿನ ಓವರ್ಹೆಡ್ ತಂತಿಯ ಮೇಲೆ ಪ್ರತಿಭಟನಾ ಕಾರರು ಬಾಳೆ ಎಲೆಗಳನ್ನು ಎಸೆದಿದ್ದಾರೆ ಎಂದು ಹೇಳಲಾಗಿದೆ.
ಮುಂಬೈನಲ್ಲಿ ಬುಧವಾರ ಕೂಡ ಬೆಸ್ಟ್ ಬಸ್ ಡಿಪೋದಲ್ಲಿ ಬಸ್ ಗಳು ನಿಂತಿರುವ ದೃಶ್ಯ ಕಂಡು ಬಂದಿದೆ.
ಮುಂಬೈಯಲ್ಲಿನ ಬೆಸ್ಟ್ ಸಾರ್ವಜನಿಕ ಸಾರಿಗೆ ಸೇವೆಗಳ 32,000 ಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳು ಮಂಗಳವಾರ ಏರಿಕೆಗೆ ಒತ್ತಾಯಿಸಿ ಅನಿರ್ದಿಷ್ಟ ಮುಷ್ಕರ ನಡೆಸಿದರು. ಕಾರ್ಮಿಕ ಸಂಘಗಳ ಮುಷ್ಕರದ ದಿನದಂದು ಅವರ ಮುಷ್ಕರ ಪ್ರಾರಂಭವಾಯಿತು. ಇದು ಸುಮಾರು 2.5 ಮಿಲಿಯನ್ ದೈನಂದಿನ ಪ್ರಯಾಣಿಕರ ಮೇಲೆ ಪರಿಣಾಮ ಬೀರಿತು. ಈ ಮಧ್ಯೆ, ಮುಷ್ಕರವನ್ನು ಬೆಂಬಲಿಸಿ ಕೆಲಸಕ್ಕೆ ಬರದಿದ್ದರೆ ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರಕಾರ ತನ್ನ ನೌಕರರಿಗೆ ಎಚ್ಚರಿಕೆ ನೀಡಿದೆ.
ಮಂಗಳವಾರ, ಮುಂಬೈಯಲ್ಲಿ ಸಾರ್ವಜನಿಕ ಸಾರಿಗೆ ಬಸ್ಸುಗಳು ಬೀದಿಗಿಳಿಯದೆ ಸಾರ್ವಜನಿಕರು ಪರದಾಡುವಂತಾಗಿತ್ತು. ಮತ್ತೊಂದೆಡೆ, ಬ್ಯಾಂಕುಗಳ ಕಾರ್ಯನಿರ್ವಹಣೆಯು ಭಾಗಶಃ ಪರಿಣಾಮ ಬೀರಿತು. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಈ ಪ್ರತಿಭಟನೆ ನಡೆಸಲಾಗುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ಜನರು ಇದರ ಪರಿಣಾಮ ಎದುರಿಸುತ್ತಿದ್ದಾರೆ. ಇನ್ನು ಕೆಲವು ಕಡೆ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದು ಜನಸಾಮಾನ್ಯರ ಸ್ಥಿತಿ ಎಂದಿನಂತೆ ಮುಂದುವರೆದಿದೆ.