ಬೆಂಗಳೂರು: ವಿಶ್ವ ಪ್ರಖ್ಯಾತ ಹಂಪಿ ಉತ್ಸವ ಯಾವುದೇ ಕಾರಣಕ್ಕೂ ನಿಲ್ಲುವುದು ಬೇಡ. ಉತ್ಸವಕ್ಕೆ ಅಗತ್ಯವಾದ ಆರ್ಥಿಕ ಹಾಗೂ ಇತರ ನೆರವನ್ನು ತಾವೇ ನೀಡುವುದಾಗಿ ಗಣಿ ಧಣಿ, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜನಾರ್ಧನ ರೆಡ್ಡಿ, ನಾಡಿನಲ್ಲಿ ವಿವಿಧೆಡೆ ಉತ್ಸವಗಳನ್ನು ಆಚರಿಸಲು ಉತ್ಸುಕತೆ ತೋರುತ್ತಿರುವ ರಾಜ್ಯ ಸರ್ಕಾರ ಕೇವಲ 3 ದಿನ ನಡೆಯುವ ಹಂಪಿ ಉತ್ಸವ ನಡೆಸಲು ಬರದ ಕಾರಣ ಹೇಳುತ್ತಿರುವುದು ಸರಿಯಲ್ಲ. ಇದು ವ್ಯವಸ್ಥಿತವಾಗಿ ಸರ್ಕಾರದಿಂದ ಮತ್ತು ಕೆಲ ಸಚಿವರಿಂದ ಬಳ್ಳಾರಿಗರನ್ನು ಅದರಲ್ಲೂ ಉತ್ತರ ಕರ್ನಾಟಕದ ಜನರನ್ನು ಕಡೆಗಣಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ನವೆಂಬರ್ 3 ರಂದು ನಡೆದ ಲೋಕಸಭೆ ಉಪ ಚುನಾವಣೆಯಲ್ಲಿ ಅಕ್ರಮವಾಗಿ ಸಾಕಷ್ಟು ದುಡ್ಡು ಖರ್ಚು ಮಾಡಿರುವವರಿಗೆ ಮತ್ತು ಕೃತಜ್ಞತಾ ಸಮಾವೇಶ ನಡೆಸಿರುವವರಿಗೆ ಬರಗಾಲ ಕಾಣಿಸಲಿಲ್ಲವೇ? ಬಿಜೆಪಿ ಹಿರಿಯ ನಾಯಕ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರು ಕೃತಜ್ಞತಾ ಸಮಾವೇಶದ ಬದಲು ರೈತರಿಗೆ ನೆರವು ನೀಡಿ ಎಂದು ಬಿನ್ನವಿಸಿಕೊಂಡರೂ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೃತಜ್ಞತಾ ಸಮಾವೇಶ ನಡೆಸುವುದು ಅಗತ್ಯವಿತ್ತೇ? ಉಪ ಚುನಾವಣೆಗೆ ನೀರಿನಂತೆ ಹಣ ಖರ್ಚು ಮಾಡಲು ಮತ್ತು ಕೃತಜ್ಞತಾ ಸಮಾವೇಶ ನಡೆಸುವಲ್ಲಿ ಆಸಕ್ತಿ ತೋರುವವರು ಹಂಪಿ ಉತ್ಸವ ಆಚರಣೆಗೆ ಅಸಡ್ಡೆ ತೋರುವುದೇಕೆ? ಎಂದು ಜನಾರ್ಧನರೆಡ್ಡಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಹಂಪಿ ಉತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಎಂ.ಪಿ. ಪ್ರಕಾಶ್ ಅವರು ಹಂಪಿ ಉತ್ಸವವನ್ನು ಮೊಟ್ಟ ಮೊದಲ ಬಾರಿಗೆ 1988ರಲ್ಲಿ ಆಚರಿಸಲು ಅವಕಾಶ ನೀಡಿದ್ದರು. ಇದಕ್ಕೂ ಮುನ್ನ ದಾಸಶ್ರೇಷ್ಠರೂ, ಮನುಕುಲದ ಸಾಮಾಜಿಕ ಚಿಕಿತ್ಸಕರೂ ಆದ ಕನಕ-ಪುರಂದರರ ಉತ್ಸವ ನಡೆಯುತ್ತಿತ್ತು. ಹಂಪಿ ಉತ್ಸವ ದ ವ್ಯಾಪ್ತಿಯನ್ನು ದೇಶದುದ್ದಕ್ಕೂ ಪಸರಿಸುವಂತೆ ಮಾಡಿದ ಕೀರ್ತಿ ಎಂ.ಪಿ.ಪ್ರಕಾಶ್ ಅವರಿಗೆ ಸಲ್ಲುತ್ತದೆ. ಜನರ ಭಾವನೆಗಳನ್ನು ಪರಸ್ಪರ ಪ್ರೀತಿ, ಪ್ರೇಮ, ಸಾಮರಸ್ಯದೊಂದಿಗೆ ಸಮೀಕರಿಸುವ ಈ ಸಾಂಸ್ಕೃತಿಕ ಹಬ್ಬವನ್ನು ಕಡೆಗಣಿಸುವ ಮೂಲಕ ಸರ್ಕಾರ ಜನರ, ಕಲಾವಿದರ, ರೈತರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಜನಾರ್ಧನ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಸರ್ಕಾರದ ಈ ಕ್ರಮದಿಂದ ಬೇಸತ್ತಿರುವ ಮಠಾಧೀಶರೇ ಇಂದು ಬೀದಿಗೆ ಇಳಿದು ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾದ ಹಂಪಿ ಉತ್ಸವ ಆಚರಿಸಲು ಭಿಕ್ಷೆ ಯಾಚಿಸುತ್ತಿದ್ದಾರೆ. ಮಾಗಳ ಗ್ರಾಮದ ಶ್ರೀ ಮಳೆಯೋಗೀಶ್ವರ ಸ್ವಾಮಿಗಳು ಭಿಕ್ಷೆ ಬೇಡುವ ಮೂಲಕ ಕಲಾವಿದರ ಬೆನ್ನಿಗೆ ನಿಂತಿದ್ದಾರೆ. ಹಂಪಿ ಉತ್ಸವ ಆಚರಿಸಲು ಸ್ವಾಮೀಜಿಗಳು ಭಿಕ್ಷೆ ಬೇಡುತ್ತಿದ್ದಾರೆಂದರೆ ಏನು ಅರ್ಥ? ಈಗ ಬರಗಾಲದ ನೆಪ ಹೇಳಿ ಉತ್ಸವ ರದ್ದುಗೊಳಿಸುವುದು ಸರಿಯೇ? ಎಂ.ಪಿ.ಪ್ರಕಾಶರು 3 ದಿನ ನಡೆಸಿದ್ದ ಹಂಪಿ ಉತ್ಸವವನ್ನು ಎರಡು ದಿನ ಆಚರಿಸುವುದು ಸರಿಯೇ? ಕಾಟಾಚಾರಕ್ಕೆ ಹಂಪಿ ಉತ್ಸವ ನಡೆಸದೇ ಅದ್ದೂರಿಯಾಗಿ ಉತ್ಸವ ನಡೆಸಲಿ. ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನಾನು ನೀಡುತ್ತೇನೆ" ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.