ಬೆಂಗಳೂರು: ಸದಾ ಒಂದಿಲ್ಲೊಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗುವ ನಟ ಪ್ರಕಾಶ್ ರೈ, ಇದೀಗ ಶಬರಿಮಲೆ ಅಯ್ಯಪ್ಪ ಸ್ವಾಮಿ ಕುರಿತಾಗಿ ಹೇಳಿಕೆ ನೀಡಿದ್ದಾರೆ.
ಗಲ್ಫ್ನಲ್ಲಿ ನಡೆದ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಭಾಗಿಯಾಗಿ ಶಬರಿಮಲೆ ವಿಚಾರವಾಗಿ ಮಾತನಾಡಿದ ಅವರು, ಶಬರಿಮಲೆ ಅಯ್ಯಪ್ಪಸ್ವಾಮಿ ದೇವರೇ ಅಲ್ಲ. ಮಹಿಳೆಯರನ್ನು ನೋಡದ ದೇವರೆಂಥ ದೇವರು ಎಂದು ಹೇಳುವ ಮೂಲಕ ಮತ್ತಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.
ಹೆಣ್ಣನ್ನು ಭೂಮಿಗೆ ಹೋಲಿಸುತ್ತಾರೆ, ತಾಯಿಗೆ ಹೋಲಿಸುತ್ತಾರೆ. ಆದರೆ ಈಗ ಆ ಹೆಣ್ಣನ್ನೇ ಪೂಜೆಯಿಂದ ಹೊರಗಿಡುವುದು ಅದೆಷ್ಟು ಸರಿ? ಯಾವ ಭಕ್ತರು ಸ್ತ್ರೀಯರಿಗೆ ದೇವರ ದರ್ಶನಕ್ಕೆ ಅವಕಾಶ ಕೊಡುವುದಿಲ್ಲವೋ ಅವರು ಭಕ್ತರೇ ಅಲ್ಲ. ಯಾವ ದೇವರು ಮಹಿಳೆಯನ್ನು ನೋಡೋದಿಲ್ಲವೋ ಅದು ದೇವರೇ ಅಲ್ಲ. ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲೇಬೇಕು ಎಂದು ಪ್ರಕಾಶ್ ರೈ ಒತ್ತಾಯಿಸಿದ್ದಾರೆ.
ಶಬರಿಮಲೆ ದೇಗುಲ ದ್ವಾರ; ಮಹಿಳೆಯರಿಗೆ ಸಿಗಲಿದೆಯೇ ಅಯ್ಯಪ್ಪನ ದರ್ಶನ ಭಾಗ್ಯ?
ಇತ್ತೀಚೆಗಷ್ಟೇ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಅವಕಾಶ ನೀಡಿ, ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದ ಬೆನ್ನಲ್ಲೇ ಭಾರೀ ಕೋಲಾಹಲ ಉಂಟಾಗಿತ್ತು. ಸುಪ್ರೀಂ ತೀರ್ಪಿನ ಬಳಿಕ ಮೊದಲ ಬಾರಿಗೆ ಶಬರಿಮಲೆ ದೇಗುಲದ ಬಾಗಿಲು ಕಳೆದ ತಿಂಗಳ ಅಕ್ಟೋಬರ್ 17ರಂದು ತೆರೆದಿತ್ತು. ಈ ವೇಳೆ ಪತ್ರಕರ್ತೆ ಹಾಗೂ ಸಮಾಜ ಸೇವಕಿ ಸೇರಿದಂತೆ ಸುಮಾರು 12 ಜನ ಮಹಿಳೆಯರು ದೇಗುಲಕ್ಕೆ ಪ್ರವೇಶಿಸಲು ಮುಂದಾಗಿದ್ದರು. ಇದಕ್ಕೆ ಹಿಂದೂ ಸಂಘಟನೆಗಳು ಹಾಗೂ ದೇವಸ್ಥಾನದ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಹಿಂಸಾಚಾರ ಘಟನೆಗಳು ಸಂಭವಿಸಿದ್ದವು. ಇದಾದ ನಂತರ ಇಂದು ಸಂಜೆ 5 ಗಂಟೆಗೆ ಬಿಗಿ ಬಂದೋಬಸ್ತ್ ನಡುವೆ ದೇವಸ್ಥಾನದ ಬಾಗಿಲು ತೆರೆಯಲಿದೆ.