ನವದೆಹಲಿ: ಹಠಾತ್ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರವು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿ ರಾಕೇಶ್ ಅಸ್ತಾನಾ ಅವರನ್ನು ರಜೆಯಲ್ಲಿ ತೆರಳುವಂತೆ ಅದೇಶಿಸಿದೆ.
ಮಂಗಳವಾರ ರಾತ್ರಿ ಸಂಪುಟದ ನೇಮಕಾತಿ ಸಮಿತಿಯ ವಿಶೇಷ ಸಭೆ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಗೇಶ್ವರ್ ರಾವ್ ಅವರನ್ನು ಹುದ್ದೆಗೆ ನೇಮಕ ಮಾಡಿದ್ದಾರೆ.
ಸಿಬಿಐನ ಇಬ್ಬರು ಮುಖ್ಯ ಅಧಿಕಾರಿಗಳ ಹಗ್ಗ-ಜಗ್ಗಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಇತಿಹಾದಲ್ಲೇ ಮೊದಲ ಬಾರಿಗೆ ಎನ್ನುವ ಹಾಗೆ ಅತ್ಯುನ್ನತಾ ತನಿಖಾ ಸಂಸ್ಥೆಯ ಅಧಿಕಾರಿಗಳಿಗೆ ರಜೆ ನೀಡಲಾಗಿದೆ. ಸಿಬಿಐ ಕೇಂದ್ರದಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆಯುವ ಸಲುವಾಗಿ ಕೇಂದ್ರ ಸಚಿವಾಲಯ ನೇಮಕಾತಿ ಸಮಿತಿ ಸದ್ಯ ಇಲಾಖೆಯ ಜಂಟಿ ನಿರ್ದೇಶಕರಾಗಿರುವ ನಾಗೇಶ್ವರ್ ರಾವ್ ಅವರನ್ನು ನಿರ್ದೇಶಕರಾಗಿ ಅಧಿಕಾರವಹಿಸಿಕೊಳ್ಳುವಂತೆ ಆದೇಶ ಮಾಡಿದೆ.
ಕಳೆದ ಅಕ್ಟೋಬರ್ ನಲ್ಲಿಯೇ ಇಬ್ಬರ ನಡುವೆ ಜಗಳದ ಕಿಡಿ ಕಾಣಿಸಿಕೊಂಡಿತ್ತು. ರಾಕೇಶ್ ಅಸ್ತಾನಾ ಅವರಿಗೆ ವಿಶೇಷ ನಿರ್ದೇಶಕರಾಗಿ ಬಡ್ತಿ ನೀಡುವುದನ್ನು ಅಲೋಕ್ ವಿರೋಧಿಸಿದ್ದರು. ಅಸ್ತಾನಾ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳಿವೆ ಎಂದು ಕೇಂದ್ರ ಜಾಗೃತಿ ಆಯೋಗಕ್ಕೆ ಅಲೋಕ್ ವರ್ಮಾ ಪತ್ರ ಬರೆದಿದ್ದರು. ಆದರೂ ರಾಕೇಶ್ ಅಸ್ತಾನಾ ಅವರ ಬಡ್ತಿ ತಡೆಯಲು ಅಲೋಕ್ ಅವರಿಗೆ ಸಾಧ್ಯವಾಗಿರಲಿಲ್ಲ.
ವರದಿಗಳ ಪ್ರಕಾರ ಸದ್ಯ ಸಿಬಿಐ ಕಚೇರಿಯನ್ನು ಮುಚ್ಚಲಾಗಿದ್ದು, ಯಾರಿಗೂ ಪ್ರವೇಶ ನೀಡುತ್ತಿಲ್ಲ ಎನ್ನಲಾಗಿದೆ.