ಇದ್ದರಿರಲಿ ಅಹಮಿಕೆ ಅತಿಯಾಗದಿರಲಿ ಜೋಕೆ..?

ಅನಾಹುತಕಾರಿ ಅಹಂಕಾರದಿಂದ ಮುಕ್ತಿಹೊಂದಲು ಪ್ರಮುಖವಾಗಿ ಎರಡು ದಾರಿಗಳಿವೆ. ಒಂದು ಭಕ್ತಿಮಾರ್ಗ ಇನ್ನೊಂದು ಜ್ಞಾನಮಾರ್ಗ. ಅಂದರೆ ಭಗವಂತನಲ್ಲಿ ಸಂಪೂರ್ಣ ಶರಣಾಗತಿಯನ್ನು ಹೊಂದಿದರೆ ಅಹಂಕಾರದ ಮಮಕಾರದಿಂದ ದೂರಾಗಬಹುದು ಎನ್ನುತ್ತವೆ ವೈದಿಕಶಾಹಿ ಮೌಲ್ಯ ಪ್ರತಿಪಾದಕ ಶಾಸ್ತ್ರ ಗ್ರಂಥಗಳು.

Written by - Krishna N K | Last Updated : Nov 4, 2024, 06:47 AM IST
    • ಅಹಮಿಕೆ, ಅಹಂಕಾರ, ಪುರುಷಹಂಕಾರದ ಬಗ್ಗೆ ಚರ್ಚೆಗಳಿವೆ.
    • ಅಹಂಕಾರ ಕೆಟ್ಟದ್ದು, ಅದೊಂದು ಮನೋರೋಗ ಎಂಬ ಮಾತಿದೆ
    • ರಾಮಾಯಣದಲ್ಲಿಯೂ ಅಹಂಕಾರ ಕುರಿತು ರಾಮನ ಬಾಯಲ್ಲಿ ಹೇಳಿಸಲಾಗಿದೆ.
ಇದ್ದರಿರಲಿ ಅಹಮಿಕೆ ಅತಿಯಾಗದಿರಲಿ ಜೋಕೆ..? title=

ಅಹಮಿಕೆ, ಅಹಂಕಾರ, ಪುರುಷಹಂಕಾರದ ಬಗ್ಗೆ ಚರ್ಚೆಗಳಿವೆ. ಅಹಂಕಾರ ಕೆಟ್ಟದ್ದು, ಅದೊಂದು ಮನೋರೋಗ ಎಂದು ವೈದಿಕ ಪುರಾಣಗಳು, ಮಹಾಕಾವ್ಯಗಳು ಸಾರುತ್ತಲೇ ಬಂದಿವೆ. “ಅಹಂಕಾರವಶಾತ್ ಆಪತ್ ಅಹಂಕಾರ ಧುರಾದಯಃ | ಅಹಂಕಾರ ವಶಾತ್ ಈಹ ಅಹಂಕಾರೋ ಮಮಾಮಯಃ" ಎಂದು ರಾಮಾಯಣ ಮಹಾಕಾವ್ಯದಲ್ಲಿ ಅಹಂಕಾರ ಕುರಿತು ರಾಮನ ಬಾಯಲ್ಲಿ ಹೇಳಿಸಲಾಗಿದೆ. ಅಂದರೆ ಅಹಂಕಾರದಿಂದ ಆಪತ್ತುಗಳು ಬರುತ್ತವೆ. ರಾವಣನು ತನ್ನ ಅಹಂಕಾರದಿಂದ ಆಪತ್ತಗಳಿಸಿಕೊಂಡ. ಧುರ್ಯೋಧನನು ಅಹಂಕಾರದಿಂದ ಸೋತು ದಯನೀಯವಾಗಿ ಸತ್ತ. ಇದರರ್ಥ ಅಹಂಕಾರ ಪಟ್ಟವನಿಗೆ ವಿನಾಶ ಶತಸಿದ್ದ ಎನ್ನುವುದಾಗಿದೆ. 

ಇಂತಹ ಅನಾಹುತಕಾರಿ ಅಹಂಕಾರದಿಂದ ಮುಕ್ತಿಹೊಂದಲು ಪ್ರಮುಖವಾಗಿ ಎರಡು ದಾರಿಗಳಿವೆ. ಒಂದು ಭಕ್ತಿಮಾರ್ಗ, ಇನ್ನೊಂದು ಜ್ಞಾನಮಾರ್ಗ. ಅಂದರೆ ಭಗವಂತನಲ್ಲಿ ಸಂಪೂರ್ಣ ಶರಣಾಗತಿಯನ್ನು ಹೊಂದಿದರೆ ಅಹಂಕಾರದ ಮಮಕಾರದಿಂದ ದೂರಾಗಬಹುದು. ವೈದಿಕಶಾಹಿ ಮೌಲ್ಯ ಪ್ರತಿಪಾದಕ ಶಾಸ್ತ್ರ ಗ್ರಂಥಗಳು. ಆದರೆ ಅಹಂಕಾರ ಎಂದರೆ ಯಾವಾಗಲೂ ನಕಾರಾತ್ಮಕವಾಗಿಯೇ ಯಾಕೆ ಯೋಚಿಸಬೇಕು? ತನ್ನ ಸಾಧನೆಯ ಬಗ್ಗೆ ಹೆಮ್ಮೆ ಪಡುವುದು, ತನ್ನ ಜಾಣತನದ ಬಗ್ಗೆ ಮೆಚ್ಚುಗೆ ಪಡುವುದು.

ತನ್ನ ಮಕ್ಕಳ ಬಗ್ಗೆ ಅಭಿಮಾನ ವ್ಯಕ್ತಪಡಿಸುವುದನ್ನೆಲ್ಲಾ ಅಹಂಕಾರ ಎನ್ನಲಾದೀತೆ..? ಬೇರೆಯವರ ಮಾತು ಬಿಡಿ, ಸಾಧಕರಿಗೆ ಒಂದಿಷ್ಟು ತಮ್ಮ ಸಾಧನೆಯ ಬಗ್ಗೆ ಹೆಮ್ಮೆ ಇರುತ್ತದೆ, ಇರಬೇಕು. ಎಷ್ಟೋ ಸಲ ತನ್ನ ಬಗ್ಗೆ, ತನ್ನ ಕೆಲಸದ ಬಗ್ಗೆ, ತನ್ನ ಅಚೀವ್ಮೆಂಟ್ ಬಗ್ಗೆ ಪಡುವ ಅಹಮಿಕೆಯೇ ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರಕವಾಗಬಹುದಾಗಿದೆ.‌

ಇನ್ನು ಬಹುತೇಕ ಸ್ರ್ತೀವಾದಿಗಳು ಪುರುಷಹಂಕಾರದ ಬಗ್ಗೆ ಆರೋಪ ಮಾಡುತ್ತಲೇ ಇರುತ್ತಾರೆ. ಪುರುಷರು ಅಹಂಕಾರ ಪಡುವ ಮಹಿಳೆಯರ ಬಗ್ಗೆ ವಿಡಂಬನೆ ಮಾಡುತ್ತಲೇ ಇರುತ್ತಾರೆ. ಅಹಂಕಾರಕ್ಕೆ ಲಿಂಗ ಬೇಧ ಇಲ್ಲವೆನ್ನುವುದೇ ಸತ್ಯ. ಹೀಗೆ ಒಬ್ಬರ ಮೇಲೊಬ್ಬರು ಆರೋಪಿಸುತ್ತಾ ಇದ್ದಾಗಲೇ ಲಿಂಗಾಧಾರಿತ ಮನಸ್ತಾಪ ಅತಿಯಾಗುತ್ತದೆ. ಅವರವರ ಬಗ್ಗೆ ಅವರವರು ಹೆಮ್ಮೆ ಪಡುವುದು, ಸೌಂದರ್ಯದ ಬಗ್ಗೆ, ಬುದ್ದಿಶಕ್ತಿಯ ಬಗ್ಗೆ, ಶಕ್ತಿ ಸಾಮರ್ಥ್ಯಗಳ ಬಗ್ಗೆ ಅಹಮಿಕೆ ತೋರಿದರೆ ತಪ್ಪೇನೂ ಇಲ್ಲ. ಆದರೆ ಬೇರೆಯವರನ್ನು ಹೋಲಿಕೆ ಮಾಡಿ ನಾವೇ ಶ್ರೇಷ್ಠರು, ಅನ್ಯರು ತನಗಿಂತ ಕನಿಷ್ಟರು ಎಂದು ತಮ್ಮ ನಡೆ ನುಡಿಯಲ್ಲಿ ವ್ಯಕ್ತಪಡಿಸುತ್ತಾರೋ ಅದು ದುರಹಂಕಾರವಾಗುತ್ತದೆ. ಆಸೆ ತಪ್ಪಲ್ಲ, ಆಸೆಗಳಿಲ್ಲದ ಮನುಷ್ಯರಿಲ್ಲ. ಅಹಂಕಾರ ತಪ್ಪಲ್ಲ, ಅಹಂಕಾರ ಪಡದ ವ್ಯಕ್ತಿಗಳಿಲ್ಲ. ಆದರೆ ದುರಾಸೆ ಪಡುವುದು ಸರಿಯಲ್ಲ, ದುರಹಂಕಾರ ಒಳಿತು ಮಾಡುವುದಿಲ್ಲ. 

ಯಾರೇ ಆಗಲಿ ತನ್ನ ಬಗ್ಗೆ ತಾನೇ ಹೇಳಿಕೊಂಡರೆ ನೋಡಿ ಅವರ ಅಹಂಕಾರ ಎಂದು ಹೇಳಲಾಗುತ್ತದೆ. ಹೇಳಿಕೊಳ್ಳದೇ ಇದ್ದರೆ ಬೇರೆಯವರಿಗೆ ಹೇಗೆ ಗೊತ್ತಾಗುತ್ತದೆ. ಹೀಗಾಗಿ ಹೆಣ್ಣು ತನ್ನ ಬಗ್ಗೆ ತಾನು ಹೇಗೆ ಹೆಮ್ಮೆಯಿಂದ ಅಹಂಕಾರ ವ್ಯಕ್ತಪಡಿಸಲು ಸಾಧ್ಯವೋ ಹಾಗೆಯೇ ಗಂಡೂ ಸಹ ಅಹಂಕಾರಿಯಾಗಿರಲು ಸಾಧ್ಯ? ಅದಕ್ಕೆ ಹೇಳುವುದು ಆಸೆಗೂ ಅಹಂಕಾರಕ್ಕೂ ಲಿಂಗಬೇಧ ಇಲ್ಲಾ ಎಂದು. ಅದೇ ರೀತಿ ದುರಾಸೆಗೂ ದುರಹಂಕಾರಕ್ಕೂ ಸಹ ಲಿಂಗಬೇಧವೆಂಬುದಿಲ್ಲ. ಹೀಗಿರುವಾಗ ಪುರುಷಹಂಕಾರ ಎಂದು ಸ್ರ್ತೀಯರೂ, ಮಹಿಳಾ ಅಹಂಕಾರ ಎಂದು ಪುರುಷರು ಆಪಾದಿಸುವುದರಲ್ಲಿ ಅರ್ಥವಿಲ್ಲ.

ಗೊತ್ತಿದ್ದೋ ಗೊತ್ತಿಲ್ಲದೆಯೋ ಶ್ರೇಷ್ಠತೆಯ ವ್ಯಸನವೆನ್ನುವುದು ಪ್ರಕೃತಿದತ್ತವಾಗಿಯೇ ಮನುಷ್ಯರಿಗೆ ಬಂದಿರುತ್ತದೆ. ಅದು ಶಾಪವೋ ವರವೋ, ರೋಗವೋ ಔಷಧವೋ ಎಂಬುದು ಅವರವರ ಭಾವಕ್ಕೆ ಬಿಟ್ಟಿದ್ದು. ಆದರೆ ಈ ಮನೋಸಹಜ ಅಹಂಕಾರವನ್ನು ಮುಂದಿಟ್ಟುಕೊಂಡು ವೈದಿಕಶಾಹಿ ಪರಂಪರೆಯು ಶೂದ್ರ ದಲಿತ ವರ್ಗಗಳಿಗೆ ಶರಣಾಗತಿಯನ್ನು ಬೋಧಿಸುತ್ತವೆ. ಬ್ರಹ್ಮನ ಮುಖದಿಂದ ಹುಟ್ಟಿದ ಬ್ರಾಹ್ಮಣರು ಸರ್ವಶ್ರೇಷ್ಟರು ಹಾಗೂ ಬೇರೆ ಅಂಗಗಳಿಂದ ಜನಿಸಿದವರು. ತಮಗಿಂತಾ ಕನಿಷ್ಟರು, ಅದರಲ್ಲೂ ದಲಿತರು ನಿಕೃಷ್ಟರು ಎಂದು ಮನುವಾದಿ ಸನಾತನಿಗಳು ತಮ್ಮ ಜಾತಿ ಹುಟ್ಟು ಹಾಗೂ ಆಚರಣೆಗಳ ಬಗ್ಗೆ ಅಹಂಕಾರ ಪಡುತ್ತಲೇ ಬಂದಿದ್ದಾರೆ. ಆದರೆ ತಮ್ಮ ಶಾಸ್ತ್ರ ಪುರಾಣ ಪುಣ್ಯಕಥೆಗಳ ಸಂಕಥನಗಳ ಮೂಲಕ ಅಹಂಕಾರ ಎಂಬುದು ಆಪತ್ತಿಗೆ ಮೂಲ, ಅದೊಂದು ರೋಗ ಎಂದು ಬಹುಸಂಖ್ಯಾತ ದುಡಿಯುವ ವರ್ಗದವರನ್ನು ನಂಬಿಸುತ್ತಾ ಬಂದಿದ್ದಾರೆ. 

ಬ್ರಾಹ್ಮಣರು ಸೃಷ್ಟಿಸಿ ಆರಾಧಿಸುವ ವೆಜ್ ದೇವರುಗಳು ಶ್ರೇಷ್ಟ ಹಾಗೂ ದಲಿತರು ಪೂಜಿಸುವ ನಾನ್ವೆಜ್ ದೇವರುಗಳು ಕನಿಷ್ಟ ಎಂದು ದೇವರಲ್ಲೂ ಭಿನ್ನಬೇಧ ಮಾಡುತ್ತಲೇ ಬಂದಿದ್ದಾರೆ. ಎಲ್ಲಿ ದಲಿತ ಶೂದ್ರರು ತಾವೇ ಶ್ರೇಷ್ಟರೆಂದುಕೊಂಡು ವೈದಿಕರಿಗೆ ಸವಾಲು ಹಾಕುತ್ತಾರೋ, ಎಲ್ಲಿ ದಲಿತ ದೇವರುಗಳು ವೈದಿಕರ ದೇವರಿಗಿಂತ ಮೇಲು ಎಂದು ಅಹಂಕಾರ ಪಡುತ್ತಾರೋ ಎಂಬ ಭಯದಿಂದಲೇ ಪುರೋಹಿತಶಾಹಿ ಪಂಡಿತರುಗಳು ಅಹಂಕಾರವನ್ನು ಕೆಟ್ಟದ್ದು ಎಂದು ಉಲ್ಲೇಖಿಸಿ, ಬೇರೆ ವರ್ಣದವರಿಗೆ ನಿಷೇಧಿಸಿ ತಮ್ಮ ಶ್ರೇಷ್ಟತೆಯ ಅಹಂಕಾರವನ್ನು ಸರ್ವಮಾನ್ಯ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. 

ಪೌರಾಣಿಕ ಪರಿಕಲ್ಪನೆಯ ರಾಮನ ಮೂಲಕ, ಕೃಷ್ಣನ ಮೂಲಕ ಅಹಂಕಾರ ಕೆಡುಕನ್ನುಂಟು ಮಾಡುತ್ತದೆ ಎಂದು ಅನೇಕಾನೇಕ ದೃಷ್ಟಾಂತಗಳ ಸೃಷ್ಟಿ ಮಾಡುತ್ತಾ ಜನರನ್ನು ಅಹಂಕಾರದ ವ್ಯಾಪ್ತಿಯಿಂದ ಹೊರಗಿಟ್ಟು ಶರಣಾಗತಿಯ ಗುಲಾಮಗಿರಿಗೆ ಪ್ರೇರೇಪಿಸುತ್ತಾರೆ. ಅದಕ್ಕಾಗಿಯೇ ನಾರದ ಎನ್ನುವ ಋಷಿಯನ್ನು ಸೃಷ್ಟಿಸಿದ್ದಾರೆ. ದೇವಾನುದೇವತೆಗಳಿಗೂ ಅಹಂಕಾರ ಬಂದಾಗ ಅದನ್ನು ಹೇಗೆ ನಿವಾರಿಸಿ ಅಹಂಕಾರ ಪೀಡಿತರಿಗೆ ಬುದ್ದಿ ಕಲಿಸಬೇಕು ಎನ್ನುವುದಕ್ಕೆಂದೇ ನಾರದ ಪಾತ್ರ ಸೃಷ್ಟಿ ಮಾಡಲಾಗಿದೆ. ಅಹಂಕಾರ ಎನ್ನುವುದು ದೇವರಿಗೂ, ರಾಜರಿಗೂ ಬಿಟ್ಟಿದ್ದಲ್ಲಾ, ಅಹಂಕಾರ ಪಟ್ಟರೆ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಶೂದ್ರ ವರ್ಗದವರಿಗೆ ಮನದಟ್ಟು ಮಾಡಲೆಂದೇ ಈ ಸಂಕಥನಗಳು ಹಾಗೂ ಅದಕ್ಕೆ ಪೂರಕ ಪಾತ್ರಗಳು ಸೃಷ್ಟಿಯಾಗಿವೆ.

ಈ ಅಹಂಕಾರವನ್ನು ಬಹುಮಟ್ಟಿಗೆ ಒಡೆದು ಹಾಕಿದ ಕೀರ್ತಿ ಬಸವಾದಿ ಶಿವಶರಣರಿಗೆ ಸಲ್ಲಬೇಕಿದೆ. "ಎನಗಿಂತ ಕಿರಿಯರಿಲ್ಲ" ಎಂದು ಬಸವಣ್ಣ ಹೇಳಿದಾಗಲೇ ಶ್ರೇಷ್ಟತೆಯ ಅಹಂಕಾರ ಚಿದ್ರವಾಗಿದೆ. "ಎನ್ನ ನಡೆಯೊಂದು ಪರಿ, ನುಡಿಯೊಂದು ಪರಿ, ಎನ್ನೊಳಗೇನೂ ಶುದ್ದವಿಲ್ಲ" ಎನ್ನುವ ಬಸವಣ್ಣ ಸ್ವವಿಮರ್ಶೆಯ ಮೂಲಕವೇ ಶುದ್ದತೆ, ಪವಿತ್ರತೆ, ಶ್ರೇಷ್ಟತೆ ಎಂದು ದುರಹಂಕಾರ ಪಡುವ ವೈದಿಕರಿಗೆ ಮುಟ್ಟಿನೋಡಿಕೊಳ್ಳುವಂತೆ ಟಾಂಗ್ ಕೊಟ್ಟಿದ್ದಾರೆ.

ಎಂದೂ ಲಿಂಗಬೇಧ ಮಾಡದೇ ಸ್ರ್ತೀ ಸಮಾನತೆಯನ್ನು ಎತ್ತಿಹಿಡಿದ ಬಸವಣ್ಣನವರಲ್ಲೂ ಪುರುಷಹಂಕಾರ ಇತ್ತು ಎಂದು ಸ್ರ್ತೀವಾದಿ ನೆಲೆಯಲ್ಲಿ ಪ್ರಶ್ನಿಸಲಾಗುತ್ತಿದೆ. ಬಸವಣ್ಣನವರ ವಚನದ ಸಾಲುಗಳನ್ನೋ, ಪದಗಳನ್ನೋ ಉಲ್ಲೇಖಿಸಿ ಪುರುಷಹಂಕಾರವೆಂದು ಆರೋಪಿಸಲಾಗುತ್ತಿದೆ. " ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳದ ಚೆಲುವೆ. ಆಕೆಯನು ಸಂಗಮದೇವಾ, ನೀ ಜಂಗಮ ರೂಪಾಗಿ ಬಂದು, ಎನ್ನ ಮುಂದೆ ಸಂಗವ ಮಾಡುತಿರಲು, ಎನ್ನೊಡನಿದ್ದ ಸತಿ ಎಂದು ಮಾಯಕ್ಕೆ ಮರುಗಿದನಾದರೆ, ನಿಮ್ಮಾಣೆ ನಿಮ್ಮ ಪ್ರಮಥರಾಣೆ ಮನದೊಡೆಯ ನೀನೇ ಬಲ್ಲೆ" ಎಂಬುದು ಬಸವಣ್ಣನವರ ವಚನ. ಇದರಲ್ಲಿ ಪುರುಷಹಂಕಾರ ಇದೆ? ತನ್ನ ಸಂಗಾತಿಯನ್ನೇ ಸಂಗಮನ ಜಂಗಮ ರೂಪ ಎಂದುಕೊಂಡು ಸಂಗವ ಮಾಡುತ್ತಿದ್ದೇನೆನ್ನುವ ಬಸವಣ್ಣನವರು ಸತಿಯಲ್ಲೂ ಸಂಗಮದೇವನನ್ನು ಕಾಣುತ್ತಿದ್ದಾರೆ. ಇಲ್ಲಿ ಚೆಲುವೆ ಎನ್ನುವ ಪದ ಬಳಕೆಯನ್ನೇ ಎತ್ತಿಕೊಂಡು ಬಸವಣ್ಣ ಹೆಣ್ಣನ್ನು ದೇಹ ಕೇಂದ್ರಿತವಾಗಿ ನೋಡುವ ಪುರುಷಹಂಕಾರ ಹೊಂದಿದ್ದಾರೆ ಎಂದು ಆರೋಪಿಸಿದರೆ ಬಸವಣ್ಣ ಇರಲಿ, ಕೂಡಲಸಂಗಮನೂ ಇರಲಿ, ಬಸವಾನುಯಾಯಿಗಳಾದರೂ ಒಪ್ಪಿಕೊಳ್ಳಲು ಸಾಧ್ಯವೇ? ಹೆಣ್ಣು ಮಾಯೆಯೆಂದರೆ ಆ ಮಾಯೆಯನ್ನು ಬಿಟ್ಟಿರಲಾರೆ, ತಾಯಾಗಿ ಮಗಳಾಗಿ ಸಂಗಾತಿಯಾಗಿ ಆ ಮಾಯೆ ನನ್ನ ಜೊತೆಗಿರಲಿ ಎಂದವರು ಬಸವಣ್ಣ. 

ಇಷ್ಟಕ್ಕೂ ಬಸವಾದಿ ಶರಣರಿಗೆ ಪುರುಷಹಂಕಾರ ಇತ್ತು ಎನ್ನುವುದಾದರೆ ಇರಲಿ ಬಿಡಿ. ವೈದಿಕಶಾಹಿಗಳ ಶ್ರೇಷ್ಟತೆಯ ಅಹಂಕಾರ, ಸ್ತ್ರೀಕುಲವನ್ನೇ ತುಚ್ಚೀಕರಿಸಿ ಗಂಡಾಳ್ವಿಕೆಯನ್ನೇ ಸಮರ್ಥಿಸಿಕೊಳ್ಳುವ ಸನಾತನಿಗಳ ನಕಾರಾತ್ಮಕ ದುರಹಂಕಾರದ ಮುಂದೆ ಶರಣರ ಸಕಾರಾತ್ಮಕ ಅಹಂಕಾರ ಇದ್ದರಿರಲಿ. ಅಕ್ಕಮಹಾದೇವಿಯ ಹಲವಾರು ವಚನಗಳಲ್ಲಿ ಮಹಿಳಾ ಅಹಂಕಾರವನ್ನು ಗ್ರಹಿಸಬಹುದಾಗಿದೆ. ಪ್ರಕೃತಿದತ್ತ ಬಯಕೆಗಳನ್ನು ನಿರಾಕರಿಸಿ ಮನುಷ್ಯ ದೇಹವನ್ನೇ ಮೂತ್ರದ ಕುಡಿಕೆಯಂತೆ ನಿರಾಕರಣೆಗೆ ಯೋಗ್ಯವೆನ್ನುತ್ತಲೇ ಲೌಕಿಕವನ್ನು ಬಿಟ್ಟು ಕಣ್ಣಿಗೆ ಕಾಣದ ದೇವರ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವ ಮಹಾದೇವಿಯಕ್ಕಳಿಗಿಂತಲೂ ದೇಹವೇ ದೇಗುಲ ಎಂದ ಬಸವಣ್ಣ ವಾಸ್ತವದ ನಿಟ್ಟಿನಲ್ಲಿ ಗಟ್ಟಿಯಾಗಿ ನಿಲ್ಲುವ ಮೇರು ವ್ಯಕ್ತಿ. ಅಕ್ಕಮಹಾದೇವಿಯದು ಹಾರವರಂತೆಯೇ ವಿಭಿನ್ನ ಬಗೆಯ ಭಕ್ತಿಮಾರ್ಗವಾದರೆ ಬಸವಣ್ಣನವರದ್ದು ವಾಸ್ತವವಾದಿ ಕರ್ಮ ಮಾರ್ಗ. ಹಸಿವಾದರೆ ಭಿಕ್ಷಾನ್ನಗಳುಂಟು ಎಂದು ದುಡಿಯದೇ ತಿನ್ನುವ ಬೋಧನೆ ಅಕ್ಕಳದ್ದಾದರೆ, ಕಾಯಕ ಸಂಸ್ಕೃತಿ ಬಸವಣ್ಣನವರದ್ದಾಗಿದೆ.

ಹೀಗೆ ಶರಣರನ್ನು ಹೋಲಿಸುವುದು ಅಸಮಂಜಸವೆಂಬುದು ನಿಜ. ಅವರವರ ಅನುಭವ ಮತ್ತು ಅನುಭಾವದಂತೆ ಶಿವಶರಣರು ಮುನ್ನಡೆದರು. ಬಹುತೇಕ ವಚನಕಾರರಲ್ಲಿ ಇದ್ದದ್ದು ವೈದಿಕಶಾಹಿ ಪ್ರತಿಗಾಮಿ ಶಕ್ತಿಗಳ ವಿರುದ್ದದ ಪ್ರತಿರೋದ. ಆಗಿನಂತೆ ಈಗಲೂ ಮನುವಾದಿಗಳಿಗೆ ವಚನಗಳು ಹೇಳುವ ಸತ್ಯಗಳೇ ಶತ್ರುಗಳು. ಹೀಗಾಗಿ ಬಸವಾದಿ ಶರಣರಲ್ಲಿ ಇದ್ದದ್ದು ಶ್ರೇಷ್ಟತೆಯ ಅಹಂಕಾರವಲ್ಲ. ಅದು ನೈತಿಕವಾದ, ಆತ್ಮಸ್ಥೈರ್ಯದ, ಪ್ರತಿರೋಧದ ಅಹಂಕಾರ. ವಚನಕಾರರ ಹೆಮ್ಮೆಯ ಅಹಂಕಾರ ಇದ್ದರೆ ನಮಗದು ಇರಲಿ. ವೈದಿಕಶಾಹಿಗಳ ಶ್ರೇಷ್ಟತೆಯ ವ್ಯಸನ ಪೀಡಿತ ದುರಹಂಕಾರ ಖಂಡನೀಯವಾಗಲಿ.

ಅಂಕಣಕಾರರು : ಶಶಿಕಾಂತ ಯಡಹಳ್ಳಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News