ಬೆಂಗಳೂರು: ಇವತ್ತು ಬಿಜೆಪಿ ಸರಕಾರ ನುಡಿದಂತೆ ನಡೆಯಿತಾ ಅಂತ ನೀವು ಶ್ರೀರಾಮುಲು ಅಣ್ಣ ಸಿಎಂ ಬೊಮ್ಮಾಯಿ ಅವರನ್ನ ಕೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ,ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.ಅವರು ಮೊಳಕಾಲ್ಮೂರು ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮೊಳಕಾಲ್ಮೂರು ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರ ಮಾತುಗಳು
ಇದೊಂದು ಐತಿಹಾಸಿಕ ಸ್ಥಳ. ರಾಹುಲ್ ಗಾಂಧಿ ಅವರು ಕೂಡ ಭಾರತ ಜೋಡೋ ಯಾತ್ರೆ ಸಮಯದಲ್ಲಿ ಇದೇ ಸಮಯದಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡಿದ್ದರು.
"ಕಮಲ ಕೆರೆಯ ಕೆಸರಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ." ಬದಲಾವಣೆಗಾಗಿ ಕೈ ಜೋಡಿಸಿ. ನಾನು ಅಧ್ಯಕ್ಷನಾಗಿ ಅಧಿಕಾರ ತೆಗೆದುಕೊಂಡ ದಿನ ಒಂದು ಮಾತು ಹೇಳಿದ್ದೆ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಈಗ ನಾವೆಲ್ಲರೂ ಸೇರಿ ಶ್ರೀರಾಮುಲು ಅವರನ್ನು ಸೋಲಿಸಬೇಕು.
ಇದನ್ನೂ ಓದಿ : PF Rules : ಪಿಎಫ್ ಖಾತೆದಾರರ ಗಮನಕ್ಕೆ : ಖಾತೆಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿ
ಇಲ್ಲಿ ವ್ಯಕ್ತಿ ಬಿಟ್ಟು ಪಕ್ಷದ ಪೂಜೆ ಮಾಡಬೇಕು. ನಾವು ಎಲ್ಲರಿಗೂ ಅಧಿಕಾರ ನೀಡುತ್ತೇವೆ. ಆದರೆ ಶಾಸಕ ಸ್ಥಾನ ಒಂದೇ ಇದೆ. ಇದರಲ್ಲಿ ಡಬಲ್ ರೈಡಿಂಗ್, ತ್ರಿಬಲ್ ರೈಡಿಂಗ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ನೀವು ಒಟ್ಟಾಗಿ ಶ್ರೀರಾಮುಲು ಸೋಲಿಸುವ ಕೆಲಸ ಮಾಡಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತ ನೀಡಿದ್ದಿರಿ. ಅದಕ್ಕೆ ಅಭಿನಂದಿಸುತ್ತೇನೆ. ರಾಮುಲು ಅವರು ಮಂತ್ರಿಯಾಗಿದ್ದಾರೆ. ಇಲ್ಲಿ ಆಸ್ಪತ್ರೆ, ಬಸ್ ವ್ಯವಸ್ಥೆ ಇಲ್ಲ.ಶ್ರೀರಾಮುಲು ನೀನು ಮಂತ್ರಿಯಾಗಿದ್ದೀಯ, ನೀನು ಆರೋಗ್ಯ ಸಚಿವನಾಗಿದ್ದೆ, ಈಗ ಸಾರಿಗೆ ಸಚಿವನಾಗಿದ್ದೀಯ.
ಬಳ್ಳಾರಿಯಿಂದ ಇಲ್ಲಿಗೆ ಬಂದ ಶ್ರೀರಾಮುಲು ಅವರನ್ನು ನೀವು ಗೆಲ್ಲಿಸಿ ಮಂತ್ರಿ ಮಾಡಿಸಿದ್ರಿ. ಆತ ನಿಮ್ಮ ಋಣ ತೀರಿಸಬೇಕಿತ್ತಲ್ಲವೇ? ನಿನ್ನ ಸರ್ಕಾರ ಇದ್ದಾಗ ನೀನು ಈ ಜನರ ಋಣ ತೀರಿಸದೇ ಅದ್ಯಾವುದೋ ಕೆನಾಲ್ ಪಕ್ಕ ಮಲಗಿದ್ರಲ್ಲ, ಅದೂ ಮಂತ್ರಿಯಾಗಿ. ಜನ ನಿನ್ನನ್ನು ವಿಧಾನಸೌಧಕ್ಕೆ ಆರಿಸಿ ಕಳುಹಿಸಿರುವಾಗ ಕೆನಾಲ್ ಪಕ್ಕಾ ಮಲಗಿದ್ದಾರೆ. ಅಲ್ಲಮ ಪ್ರಭುಗಳು ಹೇಳಿರುವಂತೆ, ಕೊಟ್ಟ ಕುದುರೆ ಏರಲಾಗದೆ, ಮತ್ತೊಂದು ಕುದುರೆ ಏರಬಯಸುವವನು ವೀರನೂ ಅಲ್ಲ ಶೂರನೂ ಅಲ್ಲ. ಅಧಿಕಾರ ಇದ್ದಾಗ ಕೆಲಸ ಮಾಡಲಾಗದವನು, ಅಧಿಕಾರ ಹೋಗುವಾಗ ಮಾಡುತ್ತೇನೆ ಎಂದರೆ ಹೇಗೆ? ಈ ನಾಟಕ ಜನಕ್ಕೆ ಅರ್ಥ ಆಗಲ್ವಾ? ಈ ಜನ ಪ್ರಜ್ಞಾವಂತರು. ಕಳೆದ ಲೋಕಸಭಾ ಚುನಾವಣೆಯಲ್ಲಿ ತೋರಿಸಿದ್ದಾರೆ. ಅವರನ್ನು ವಾಪಾಸ್ ಬಳ್ಳಾರಿಗೆ ಕಳುಹಿಸಿ. ಅಲ್ಲಿನ ಜನ ಅವರ ಹಣೆಬರಹ ಬರೆಯುತ್ತಾರೆ.
ನಿಮ್ಮ ಗಮನ ಏನಿದ್ದರು ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವ ನಂಬಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು. ಇವತ್ತು ಬಿಜೆಪಿ ಸರಕಾರ ನುಡಿದಂತೆ ನಡೆಯಿತಾ ಅಂತ ನೀವು ಶ್ರೀರಾಮುಲು ಅಣ್ಣ ಸಿಎಂ ಬೊಮ್ಮಾಯಿ ಅವರನ್ನ ಕೇಳಬೇಕು. ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ರೈತರ 1 ಲಕ್ಷದವರೆಗೂ ಸಾಲ ಮನ್ನಾ ಮಡುತ್ತೇವೆ ಎಂದರು, ಮಾಡಿದರಾ? ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು ಮಾಡಿದರಾ? ಇಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ನೀಡಿದರಾ? ಇಲ್ಲ.
ಇದನ್ನೂ ಓದಿ : DA Hike : ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಸಿಹಿ ಸುದ್ದಿ : ನಿಮ್ಮ ಡಿಎ ಹೆಚ್ಚಾಗಲಿದೆ!
ಉದ್ಯೋಗ ಇಲ್ಲ, ಆದಾಯ ಹೆಚ್ಚಾಗಲಿಲ್ಲ. ನೀವು ಬೆಳೆದ ಶೇಂಗಾ, ಹತ್ತಿ, ಸೂರ್ಯಕಾಂತಿಗೆ ಸರಿಯಾದ ಬೆಲೆ ಕೊಟ್ರಾ, ಇಲ್ಲ. ಜನಧನ್ ಅಕೌಂಟ್ ಗೆ 15 ಲಕ್ಷ ದುಡ್ಡು ಬಂತಾ, ಇಲ್ಲ. ಇನ್ನು ಶ್ರೀರಾಮುಲು ಅಣ್ಣ ಬಂದು ಹೆಂಗೆ ವೋಟ್ ಕೇಳ್ತಾರೆ? ಅವರನ್ನ ಉಪ ಮುಖ್ಯಮಂತ್ರಿ ಮಾಡ್ತೀವಿ, ಮಾಡ್ತೀವಿ ಅಂತ ಬಿಜೆಪಿಯವರು ಕೈ ಕೊಟ್ರು. ಅವರು ಮಾಜಿ ಮಂತ್ರಿ ಆಗ್ತಾರೆಯೇ ಹೊರತು ಇಲ್ಲಿ ಶಾಸಕರೂ ಆಗಲ್ಲ.
ಜನ ಬೆಲೆ ಏರಿಕೆಯಿಂದ ಬಳಲುತ್ತಿದ್ದಾರೆ. 400 ರೂ.ಇದ್ದ ಅಡುಗೆ ಅನಿಲ ಬೆಲೆ 1100 ಆಗಿದೆ. ಹಿಂದೆ 50 ರೂ ಗ್ಯಾಸ್ ಬೆಲೆ ಜಾಸ್ತಿ ಆದಾಗ ಪ್ರಧಾನಿ ಮೋದಿ ಅವರು ಈ ಬಗ್ಗೆ ಪ್ರಶ್ನೆ ಮಾಡಿ ಅಂತ ನಿಮಗೆ ಹೇಳಿದ್ರು. ಈಗ ಗ್ಯಾಸ್ ಬೆಲೆ 1000 ರೂ ದಾಟಿದೆಯಲ್ಲ ಈಗ ಯಾರನ್ನು ಕೇಳಬೇಕು ಮೋದಿ ಸಾಹೇಬ್ರೇ.. ಅಡುಗೆ ಅನಿಲ 90ರಿಂದ 250ಕ್ಕೆ ಏರಿದೆ. ಪೆಟ್ರೋಲ್ 70ರಿಂದ 100 ರೂ.ಗೆ ಏರಿಕೆಯಾಗಿದೆ. ಈ ಮಹಿಳೆಯರ ಕಣ್ಣೀರು ಒರೆಸುವ ಕೆಲಸ ಮಾಡಿದ್ದೀರಾ ಮೋದಿ ಅವರೇ? ಈ ಮಹಿಳೆಯರು ಸಂಸಾರ ಮಾಡುವುದು ಹೇಗೆ?
ಇದನ್ನೂ ಓದಿ: ಕಾಯಿ ಕೀಳಲು ತೆಂಗಿನ ಮರವೇರಿದ ವ್ಯಕ್ತಿಗೆ ಹೃದಯಾಘಾತ ! 50 ಅಡಿ ಎತ್ತರದ ಮರದಲ್ಲೇ ಸಾವು
ಹಿಂದೆ ನಾನು ಇಂಧನ ಸಚಿವನಾಗಿದ್ದಾಗ ವಿದ್ಯುತ್ ಉತ್ಪಾದನೆ ಡಬಲ್ ಮಾಡಿದ್ದೆ. ಸರಬರಾಜು ನಷ್ಟ ತಗ್ಗಿಸಿದ್ದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆರವಾಗಲು ಕಾಂಗ್ರೆಸ್ ಪಕ್ಷ 2 ಗ್ಯಾರೆಂಟಿ ಯೋಜನೆ ಘೋಷಣೆ ಮಾಡಿದ್ದೇವೆ. ಈಗ 200 ಯುನಿಟ್ ವಿದ್ಯುತ್ ಉಚಿತ, ಆಮೂಲಕ ಇನ್ನು ಮುಂದೆ ನೀವು 200 ಯುನಿಟ್ ಒಳಗೆ ವಿದ್ಯುತ್ ಬಳಸಿದರೆ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಪ್ರತಿ ಮನೆ ಯಜಮಾನಿಗೆ 2000 ರೂ. ಪ್ರತಿ ತಿಂಗಳು ಕೊಡ್ತೇವೆ. ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷ ಕೊಡ್ತೆವೆ. ಜತೆಗೆ 10 ಕೆಜಿ ಅಕ್ಕಿ. ನಾನು ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ನಿಮ್ಮ ಮನೆಗೆ ಬರ್ತದೆ.
ಇನ್ನು 50 ದಿನಗಳಲ್ಲಿ ಬಿಜೆಪಿ ಸರ್ಕಾರ ಹೋಗಲಿದೆ. ನಂತರ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅಧಿಕಾರಕ್ಕೆ ಬಂದ ಮರುತಿಂಗಳಿಂದ ನಿಮ್ಮ ಖಾತೆಗಳಿಗೆ ಹಣ ತಲುಪಲಿದೆ. ನಾವು ನುಡಿದಂತೆ ನಡೆಯುತ್ತೇವೆ. ನಾವು ಉಚಿತ ಅಕ್ಕಿ, ವಿದ್ಯಾರ್ಥಿ ವೇತನ, ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ಎಲ್ಲವನ್ನು ನೀಡಿದೆವು. ನಾವು ನುಡಿದಂತೆ ನಡೆಯುತ್ತೇವೆ. ನಮ್ಮ ಯೋಜನೆಗಳಿಗೆ ದುಡ್ಡು ಎಲ್ಲಿಂದ ಬರ್ತದೆ ಅಂತ ಅಶೋಕಣ್ಣ ಕೇಳ್ತಾ ಇದ್ದಾರೆ. 10 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆಯನ್ನು ನಾವು 20 ಸಾವಿರ ಮೆ.ವ್ಯಾ. ಮಾಡಿಲ್ವಾ? ಬಿಜೆಪಿಯವರ 40% ಕಮಿಷನ್ ನಿಲ್ಲಿಸಿದ್ರೆ ಹಣ ಹೊಂದಾಣಿಕೆ ಆಗ್ತದೆ ಅಣ್ಣ.
ಬಿಜೆಪಿ ಸರ್ಕಾರದ ಶಾಸಕ ಗೂಳಿಹಟ್ಟಿ ಶೇಖರ್ ನೀರಾವರಿ ಇಲಾಖೆಯ ಟೆಂಡರ್ ನಲ್ಲಿ 22 ಸಾವಿರ ಕೋಟಿ ಅಕ್ರಮ ನಡೆದಿದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಬಂದ ನಂತರ ಈ ಎಲ್ಲ ಟೆಂಡರ್ ರದ್ದು ಮಾಡುತ್ತೇವೆ.ಪ್ರಜಾಧ್ವನಿ ನಿಮ್ಮ ಧ್ವನಿ, ನೀವೆಲ್ಲರೂ ಒಗ್ಗಟ್ಟಿನಿಂದ ಹಸ್ತದ ಗುರುತಿಗೆ ಮತ ಹಾಕಿ ನಿಮ್ಮ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡುತ್ತೇನೆ ಎಂದು ಅವರು ವಿನಂತಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.