Airbus A380: ನಾಳೆಯೇ ಬೆಂಗಳೂರಿಗೆ ಬರಲಿದೆ ವಿಶ್ವದ ಅತಿ ದೊಡ್ಡ ವಿಮಾನ A380..!

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದೇ ಮೊದಲ ಬಾರಿಗೆ ನಾಳೆ ವಿಶ್ವದ ಅತಿ ದೊಡ್ಡ ವಾಣಿಜ್ಯ ವಿಮಾನ ಆಗಮಿಸಲಿದೆ.

Written by - Puttaraj K Alur | Last Updated : Oct 13, 2022, 02:20 PM IST
  • ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
  • ನಾಳೆ ಬೆಂಗಳೂರಿಗೆ ಆಗಮಿಸಲಿರುವ ವಿಶ್ವದ ಅತಿದೊಡ್ಡ ವಾಣಿಜ್ಯ ಮತ್ತು ಅತ್ಯಂತ ವಿಶಾಲ ಪ್ರಯಾಣಿಕ ವಿಮಾನ
  • Airbus A380 ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿರುವ ವಿಮಾನ ನಿಲ್ದಾಣದ ನಿರ್ವಾಹಕರು
Airbus A380: ನಾಳೆಯೇ ಬೆಂಗಳೂರಿಗೆ ಬರಲಿದೆ ವಿಶ್ವದ ಅತಿ ದೊಡ್ಡ ವಿಮಾನ A380..! title=
ನಾಳೆ ಬೆಂಗಳೂರಿಗೆ ವಿಶ್ವದ ಅತಿದೊಡ್ಡ ವಾಣಿಜ್ಯ ವಿಮಾನ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಳೆ(ಅ.14) ವಿಶ್ವದ ಅತಿ ದೊಡ್ಡ ವಾಣಿಜ್ಯ ಮತ್ತು ಅತ್ಯಂತ ವಿಶಾಲ ಪ್ರಯಾಣಿಕ ವಿಮಾನ ಬರಲಿದೆ. ಈ ಹಿಂದೆ ಘೋಷಿಸಿದ್ದಕ್ಕಿಂತ 2 ವಾರಗಳ ಮುಂಚಿತವಾಗಿಯೇ ಈ ವಿಮಾನವು ಬೆಂಗಳೂರಿಗೆ ಬರುತ್ತಿದೆ.

ಎಮಿರೇಟ್ಸ್ ಏರ್‌ಲೈನ್ಸ್‌ನ ವಿಮಾನ ಸಂಖ್ಯೆ EK562 ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅ.14ರಂದು ಬೆಳಗ್ಗೆ 10 ಗಂಟೆಗೆ (ಸ್ಥಳೀಯ ಕಾಲಮಾನ) ಟೇಕ್ ಆಫ್ ಆಗಲಿದ್ದು, ಮಧ್ಯಾಹ್ನ 3.40ಕ್ಕೆ (ಸ್ಥಳೀಯ ಕಾಲಮಾನ) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ.  ನಂತರ ಸಂಜೆ ಬೆಂಗಳೂರಿನಿಂದ ದುಬೈಗೆ ಹಿಂತಿರುಗಲಿದ್ದು, ಬೆಂಗಳೂರಿನಿಂದ ಈ ಐಷಾರಾಮಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ದೊರೆಯಲಿದೆ.

ಇದನ್ನೂ ಓದಿ: Viral Video: ಮುತ್ತು ಕೊಡಲು ಹೋದವನ ತುಟಿಗೆ ಕಚ್ಚಿದ ನಾಗರಹಾವು! ಭಯಾನಕ ವಿಡಿಯೋ ವೈರಲ್

ಬೆಂಗಳೂರಿನಿಂದ ಸಂಜೆ 6.40ಕ್ಕೆ ಟೇಕ್ ಆಫ್ ಆಗಲಿರುವ ಈ ಬೃಹತ್ ವಿಮಾನವು ರಾತ್ರಿ 9 ಗಂಟೆಗೆ ಸರಿಯಾಗಿ ದುಬೈ ತಲುಪಲಿದೆ. ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಈ ವಿಶ್ವದ ಅತಿದೊಡ್ಡ ವಾಣಿಜ್ಯ ವಿಮಾನವನ್ನು ಆತ್ಮೀಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದು, ಇದೊಂದು ಐತಿಹಾಸಿಕ ಕ್ಷಣವಾಗಲಿದೆ. ‘ನಮ್ಮ ಇಂಜಿನಿಯರ್‌ಗಳು ಮತ್ತು ಕಾರ್ಯಾಚರಣೆ ತಂಡವು ಮೂಲಸೌಕರ್ಯ ಮತ್ತು ಪ್ರಕ್ರಿಯೆಗಳನ್ನು ಪರೀಕ್ಷಿಸುತ್ತಿದೆ. ನಾವು ಕಾತುರತೆಯೊಂದಿಗೆ ಈ ವಿಶೇಷ ದಿನಕ್ಕಾಗಿ ಕಾಯುತ್ತಿದ್ದೇವೆ’ ಅಂತಾ ವಿಮಾನ ನಿಲ್ದಾಣದ ನಿರ್ವಾಹಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅ.31ಕ್ಕೆ ಬರಬೇಕಿದ್ದ ಜಂಬೋ ಜೆಟ್ ವಿಮಾನ

ಈ ಜಂಬೋ ಜೆಟ್‌ ವಿಮಾನದ ಮೊದಲ ಹಾರಾಟವು ಬೆಂಗಳೂರಿಗೆ ಅ.31ರಂದು ನಡೆಯಲಿದೆ ಎಂದು ಎಮಿರೇಟ್ಸ್ ಏರ್‌ಲೈನ್ಸ್ ಮೊದಲೇ ಘೋಷಿಸಿತ್ತು. ಅಕ್ಟೋಬರ್ 30ರಂದು ಸ್ಥಳೀಯ ಸಮಯ ರಾತ್ರಿ 9.25ಕ್ಕೆ ದುಬೈನಿಂದ ಹೊರಟು ಅ.31ರಂದು ಬೆಳಗ್ಗೆ 2.30ಕ್ಕೆ ಬೆಂಗಳೂರಿಗೆ ಇಳಿಯಬೇಕಿತ್ತು. ಆದರೆ ಇದೀಗ 2 ವಾರ ಮುಂಚಿತವಾಗಿಯೇ ವಿಶ್ವದ ಅತಿದೊಡ್ಡ ವಿಮಾನವು ಕರುನಾಡಿಗೆ ಆಗಮಿಸುತ್ತಿದೆ.

ಇದನ್ನೂ ಓದಿ: Viral News: ಕುಡುಕನಿಗೆ ಕಚ್ಚಿದ ಕೂಡಲೇ ಸಾವನ್ನಪ್ಪಿದ ನಾಗರಹಾವು..!

ಈ ಐತಿಹಾಸಿಕ ಕ್ಷಣಕ್ಕಾಗಿ ವಿಮಾನಯಾನ ಉತ್ಸಾಹಿಗಳು ಎದುರು ನೋಡುತ್ತಿದ್ದಾರೆ. A380 ಹಾರಾಟ ನಡೆಸುವ ಭಾರತದ 4 ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರು ಸಹ ಒಂದಾಗಿದೆ. ದೆಹಲಿ, ಮುಂಬೈ ಮತ್ತು ಹೈದರಾಬಾದ್ ಇತರ 3 ನಗರಗಳಾಗಿವೆ. ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರು ಜಂಬೋ ಜೆಟ್ ಹಾರಾಟ ನಡೆಯಲಿರುವ 3ನೇ ಭಾರತೀಯ ನಗರವಾಗಿದೆ.

ವರದಿಗಳ ಪ್ರಕಾರ A380 Airbus ಪೂರ್ಣ ಉದ್ದದ ಡಬಲ್ ಡೆಕ್ಕರ್ ವಿಮಾನವಾಗಿದ್ದು, 500ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ಬೆಂಗಳೂರು-ದುಬೈ ಮಾರ್ಗದಲ್ಲಿ ದೈನಂದಿನ A380 ವಿಮಾನಗಳು ಪ್ರಯಾಣಿಕರಿಗೆ 3 ವರ್ಗ ಅಂದರೆ ಬ್ಯುಸಿನೆಸ್‌, ಎಕಾನಮಿ ಮತ್ತು ಫಸ್ಟ್‌ ಕ್ಲಾಸ್‌ಗಳಲ್ಲಿ ಆಸನ ಸೌಲಭ್ಯಗಳನ್ನು ನೀಡುತ್ತವೆ. A380 ಆಸನಗಳು ಎಕಾನಮಿ ಕ್ಲಾಸ್‌ನಲ್ಲಿ ಹೆಚ್ಚುವರಿ ಲೆಗ್‌ರೂಮ್‌ನೊಂದಿಗೆ ವಿಶಾಲವಾಗಿರುತ್ತವೆ. ಬಿಸಿನೆಸ್ ಕ್ಲಾಸ್ ಸಂಪೂರ್ಣವಾಗಿ ಫ್ಲಾಟ್ ಸೀಟ್‌ ಹೊಂದಿರುತ್ತದೆ. Frist Classನಲ್ಲಿ ಖಾಸಗಿ ಸೂಟ್‌ಗಳು ಮತ್ತು ಶವರ್ ಸ್ಪಾ ಸೌಲಭ್ಯ ಇರುತ್ತದೆ ಎಂದು ಏರ್‌ಲೈನ್ಸ್ ಸಂಸ್ಥೆ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News