ಬೆಂಗಳೂರು: 2017-2018ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಇದೇ ಮಾರ್ಚ್ 1 ರಿಂದ 17ರವರೆಗೆ ನಡೆಯಲಿದೆ. ಏಪ್ರಿಲ್ ತಿಂಗಳಾಂತ್ಯದಲ್ಲಿ ಪಿಯು ಫಲಿತಾಂಶ ಹೊರಬೀಳಲಿದೆ. ಪರೀಕ್ಷೆಗಾಗಿ ಪಿಯು ಬೋರ್ಡ್ ಸಕಲ ಸಿದ್ದತೆ ನಡೆಸಿದೆ ಹಾಗೂ ಅಕ್ರಮಗಳನ್ನು ತಡೆಗಟ್ಟಲು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಸಿ. ಶಿಖಾ ಹೇಳಿಕೆ ನೀಡಿದ್ದಾರೆ.
ಪ್ರಶ್ನೆ ಪತ್ರಿಕೆಗೆ ಜಿಪಿಎಸ್ ಕಣ್ಗಾವಲು
ಇದೇ ಮೊದಲ ಬಾರಿಗೆ ಪ್ರಶ್ನೆ ಪತ್ರಿಕೆ ರವಾನೆಗೆ ಜಿಪಿಎಸ್ ವ್ಯವಸ್ಥೆ ಮಾಡಲಾಗಿದ್ದು, ಪ್ರಶ್ನೆ ಪತ್ರಿಕೆ ಹೊತ್ತೊಯ್ಯುವ ಎಲ್ಲಾ ಟ್ರಕ್ ಗಳಿಗೂ ಜಿಪಿಎಸ್ ಕಣ್ಗಾವಲು ಆಯೋಜಿಸಲಾಗಿದೆ.
ಪರೀಕ್ಷಾ ಜವಾಬ್ದಾರಿ ಜಿಲ್ಲಾಧಿಕಾರಿಗಳ ಹೆಗಲಿಗೆ
ಎಕ್ಸಾಮ್ ಸೆಕ್ಯೂರ್ ಸಿಸ್ಟಮ್ ನಡಿ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು, ಆಯಾ ಜಿಲ್ಲಾ ಮಟ್ಟದ ಪರೀಕ್ಷಾ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ ಎಂದು ಪಿಯು ಬೋರ್ಡ್ ತಿಳಿಸಿದೆ. ಪರೀಕ್ಷೆಗಾಗಿ 1,004 ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಪಿಯು ಬೋರ್ಡ್ ಅದಕ್ಕಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಕೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ. ಜೊತೆಗೆ ಪರೀಕ್ಷಾ ಮೇಲ್ವಿಚಾರಕರು ಹೊರತುಪಡಿಸಿ ಯಾರೂ ಮೊಬೈಲ್ ಬಳವಡಿಸುವಂತಿಲ್ಲ ಎಂದೂ ಸಹ ಸೂಚನೆ ನೀಡಲಾಗಿದೆ.
ಈ ಬಾರಿಯ ಪರೀಕ್ಷೆಯಲ್ಲಿ 3,52.290 ವಿದ್ಯಾರ್ಥಿಗಳು, 3,37,860 ವಿದ್ಯಾರ್ಥಿನಿಯರು ಸೇರಿ ಒಟ್ಟು 6,90,150 ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ.