ರೆಬೆಲ್ ಸ್ಟಾರ್ 'ಅಂಬಿ' ಅಮರ

1972 ರಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ 'ನಾಗರಹಾವು' ಚಿತ್ರದ ಮೂಲಕ ಚಿತ್ರರಂಗಕ್ಕೆ 'ಅಂಬಿ' ಪದಾರ್ಪಣೆ ಮಾಡಿದರು.  

Last Updated : Nov 25, 2018, 10:31 AM IST
ರೆಬೆಲ್ ಸ್ಟಾರ್ 'ಅಂಬಿ' ಅಮರ title=

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ಮಳವಳ್ಳಿ ಹುಚ್ಚೇಗೌಡ ಅಮರನಾಥ್ (ಅಂಬರೀಶ್) 29 ಮೇ 1952 ಮಂಡ್ಯ ಜಿಲ್ಲೆಯ ದೊಡ್ದರಸನ ಕೆರೆಯಲ್ಲಿ ತಂದೆ ಹುಚ್ಚೇಗೌಡ ತಾಯಿ ಪದ್ಮಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಇವರ ಅಜ್ಜ ವಿದ್ವಾನ್ ಟಿ. ಚೌಡಯ್ಯ ಅವರು ಪಿಟೀಲು ಚೌಡಯ್ಯ ಎಂದೇ ಖ್ಯಾತಿ ಪಡೆದಿದ್ದರು. 

ಮಂಡ್ಯದಲ್ಲಿ ತಮ್ಮ ಬಾಲ್ಯದ ವಿದ್ಯಾಬ್ಯಾಸ ಮುಗಿಸಿದ ಅಂಬಿ ಮೈಸೂರಿನಲ್ಲಿ ಪದವಿ ಶಿಕ್ಷಣವನ್ನು ಪಡೆದುಕೊಂಡರು. 

1972 ರಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ 'ನಾಗರಹಾವು' ಚಿತ್ರದಲ್ಲಿ ಜಲೀಲನ(ಖಳನಾಯಕ) ಪಾತ್ರ ನಿರ್ವಹಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಮಸಣದ ಹೂವು, ಚಕ್ರವ್ಯೂಹ, ಏಳುಸುತ್ತಿನ ಕೋಟೆ, ಹೃದಯಹಾಡಿತು, ಸ್ನೇಹಸಂಬಂಧ, ಬ್ರಹ್ಮಾಸ್ತ್ರ, ಅಮರಜ್ಯೋತಿ ಮೊದಲಾದ ಅನೇಕ ಚಿತ್ರಗಳಲ್ಲಿ ಇವರು ನಟಿಸಿದ್ದರು. ಮಸಣದಹೂವು ಚಿತ್ರದಲ್ಲಿನ ಇವರ ಪಾತ್ರದ ಅಭಿನಯ ಅವಿಸ್ಮರಣೀಯವಾದದ್ದು. 'ಹೃದಯ ಹಾಡಿತು' ಚಿತ್ರ ಇವರ ಚಿತ್ರರಂಗದ ಇಮೇಜನ್ನು ಬದಲಾಯಿಸಿತು. ಚಕ್ರವ್ಯೂಹ ಹಾಗೂ ಮೌನರಾಗ ಚಿತ್ರಗಳು ಇವರಿಗೆ ಜನಪ್ರಿಯತೆ ತಂದುಕೊಟ್ಟವು

ಹಲವು ಪ್ರಸಿದ್ದ ಕನ್ನಡ ಚಿತ್ರಗಳಲ್ಲಿ ನಾಯಕನ ಪಾತ್ರದಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಅಂಬರೀಷ್​, ಕನ್ನಡ ಚಿತ್ರ ರಂಗದ ರೆಬೆಲ್ ಸ್ಟಾರ್. ಮಂಡ್ಯದ ಗಂಡು, ಕಲಿಯುಗದ ಕರ್ಣ ಎಂಬ ಉಪನಾಮವನ್ನು ಗಳಿಸಿದರು. 

1989ರಲ್ಲಿ ತೆರೆಕಂಡ  'ಹಾಂಕಾಂಗ್‍ನಲ್ಲಿ ಏಜೆಂಟ್ ಅಮರ್' ಅಂಬರೀಶ್ ಅಭಿನಯದ ನೂರನೇ ಚಿತ್ರ. 1991 ರಲ್ಲಿ ಕನ್ನಡದ ಖ್ಯಾತ ನಟಿ ಸುಮಲತಾ ಅವರನ್ನು ಅಂಬರೀಶ್ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದರು. ಅಭಿಷೇಕ್​ ಅಂಬರೀಷ್​ ಅವರ ಏಕೈಕ ಪುತ್ರ.

ಇಲ್ಲಿಯವರೆಗೂ ಅಂಬರೀಶ್ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಕನ್ನಡ ಸಿನಿಮಾರಂಗದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸಾಧನೆ ಮಾಡಿರುವ ಅಂಬರೀಶ್ ತಮ್ಮ ನಟನಾ ವೃತ್ತಿಜೀವನಕ್ಕಾಗಿ ಅನೇಕ ರಾಜ್ಯ ಸರ್ಕಾರ ಪ್ರಶಸ್ತಿಗಳನ್ನು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2013 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಅಂಬರೀಶ್ ಅವರ ರಾಜಕೀಯ ಜೀವನ:
ಕನ್ನಡ ಚಿತ್ರರಂಗದಲ್ಲಿ ಹಲವು ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ರೆಬೆಲ್ ಸ್ಟಾರ್ ಅಂಬರೀಶ್, ಜನತಾದಳದ ಮೂಲಕ ರಾಜಕೀಯ ಪ್ರವೇಶಿಸಿದರು. ನಂತರ ಅವರು ರಾಜಕೀಯ ಜೀವನ ಕಂಡುಕೊಂಡಿದ್ದು ಕಾಂಗ್ರೆಸ್ ಪಕ್ಷದಲ್ಲಿ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸಂಸತ್ ಸದಸ್ಯರಾಗಿದ್ದರು. 14 ನೇ ಲೋಕಸಭೆಯಲ್ಲಿ, ಅವರು ಮಾಹಿತಿ ಮತ್ತು ಪ್ರಸಾರ  ರಾಜ್ಯ ಸಚಿವರಾಗಿದ್ದರು . ಮಂಡ್ಯ ಸಂಸದರಾಗಿದ್ದ ಅಂಬರೀಶ್ ಕಾವೇರಿ ಚಳವಳಿಯ ಹಿನ್ನೆಲೆಯಲ್ಲಿ ಜನತೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಶಾಸಕ, ಸಂಸದ, ರಾಜ್ಯ, ಕೇಂದ್ರ ಸಚಿವರಾಗಿ ಅವರು ಸೇವೆ ಸಲ್ಲಿಸಿದ್ದಾರೆ. 2013 ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದ ಅಂಬಿ ಸಿದ್ಧರಾಮಯ್ಯನವರ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

1998-99: 12ನೇ ಲೋಕಸಭಾ ಸದಸ್ಯರು.
1999-04: 13ನೇ ಲೋಕಸಭಾ ಸದಸ್ಯರು.
2004-09: 14ನೇ ಲೋಕಸಭಾ ಸದಸ್ಯರು.
2006-08: ಕರ್ನಾಟಕ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು.
2008 ರಲ್ಲಿ ಕಾವೇರಿ ನೀರಿನ ವಿವಾದದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
2012: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು.
2013 ರ ಚುನಾವಣೆಯಲ್ಲಿ ಗೆದ್ದು ಕರ್ನಾಟಕ ರಾಜ್ಯ ವಸತಿ ಸಚಿವರು.

ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಪ್ರಭಾವವನ್ನು ಹೊಂದಿರುವ ಅವರಿಗೆ ಅಸಂಖ್ಯ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.

ಅಂಬಿಗೆ ಅರಸಿಬಂದ ಪ್ರಶಸ್ತಿಗಳು:

  • 1982ರಲ್ಲಿ 'ಅಂತ' ಚಿತ್ರದ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ.
  • 'ಮಸಣದ ಹೂವು' (1985-86) ಚಿತ್ರದ ನಟನೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ.
  • 'ಒಲವಿನ ಉಡುಗೊರೆ' ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿ.
  • 2005 ರಲ್ಲಿ ಎನ್ಟಿಆರ್ ರಾಷ್ಟ್ರೀಯ ಪ್ರಶಸ್ತಿ.
  • 2009 ರಲ್ಲಿ ಜೀವಮಾನ ಫಿಲ್ಮ್ ಫೇರ್ ಪ್ರಶಸ್ತಿ.
  • 2009 ರಲ್ಲಿ ಆಂಧ್ರ ಸರ್ಕಾರದಿಂದ ನಂದಿ ಪ್ರಶಸ್ತಿ.
  • 2011 ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ. ವಿಷ್ಣುವರ್ಧನ್ ಪ್ರಶಸ್ತಿ.
  • 2012 ರಲ್ಲಿ SIIMA ಜೀವಮಾನ ಸಾಧನೆ ಪ್ರಶಸ್ತಿ.
  • 2013 ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗೌರವಾನ್ವಿತ ಡಾಕ್ಟರೇಟ್.

Trending News