ಬೆಂಗಳೂರು: ವಿಧಾನಸಭೆಯಲ್ಲಿಂದು ವಿಶ್ವಾಸ ಮತಯಾಚನೆಗೂ ಮುನ್ನ ಭಾಷಣ ಮಾಡಿದ ಸಿದ್ದರಾಮಯ್ಯ ಅವರು ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
"ಇತಿಹಾಸ ಗೊತ್ತಿಲ್ಲದವರು ಇತಿಹಾಸ ರೂಪಿಸಲು ಸಾಧ್ಯವಿಲ್ಲ. ನಾವು ಇತಿಹಾಸ ತಿಳಿದುಕೊಳ್ಳಬೇಕಾಗುತ್ತದೆ. ರಾಜಕಾರಣಕ್ಕೆ ನಮ್ಮನ್ನು ಯಾರೂ ಕೂಡ ಆಹ್ವಾನ ಮಾಡಿಲ್ಲ. ನಾವು ಜನಸೇವೆ ಮಾಡಲು ಸ್ವಯಂ ಪ್ರೇರಣೆಯಿಂದ ಬಂದಿದ್ದೇವೇ. ನಮಗೆ ಇದು ವೃತ್ತಿಯಲ್ಲ, ಪ್ರವೃತ್ತಿ. ನಂದು ವಕೀಲಿಕೆ ವೃತ್ತಿ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಮುಂದುವರೆದು ಮಾತನಾಡಿದ ಸಿದ್ದರಾಮಯ್ಯ, ನನಗೆ ಜಾತ್ಯಾತೀತ ತತ್ವದಲ್ಲಿ ನಂಬಿದೆ ಇದೆ. ಸಂವಿಧಾನ ಜಾರಿಯಿಂದ ನಮ್ಮ ದೇಶದ ದುರ್ಬಲ ವರ್ಗದ ಜನರಿಗೆ ಮತ ಹಾಕುವ ಹಕ್ಕು ಸಿಕ್ಕರೆ ಸಾಲದು. ಅವರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಕ್ಕರೆ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದಕ್ಕೆ ಅರ್ಥ ಸಿಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ಹಾಗಾಗಿ ಮೊದಲು ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಳ್ಳಬೇಕು. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಸಿದ್ದಾಂತ ಇಲ್ಲದಿದ್ದರೆ ರಾಜಕೀಯದಲ್ಲಿದ್ದೂ ವ್ಯರ್ಥ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಪಕ್ಷಾಂತರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಹರಿಯಾಣದ ಕಾಂಗ್ರೆಸ್ ಶಾಸಕರಾಗಿದ್ದ ಗಯಾಲಾಲ್ ಅವರು ಒಂದೇ ದಿನ ಮೂರು ಬಾರಿ ಪಕ್ಷಾಂತರ ಮಾಡಿದ್ದರು. ಅಂದಿನಿಂದ ಆಯಾರಾಂ ಗಯಾರಾಂ ಎಂಬ ಗಾದೆ ಚಾಲ್ತಿಗೆ ಬಂತು. 1971ರ ಮಾರ್ಚ್ ನಲ್ಲಿ ದೇವರಾಜ್ ಅರಸು ಅವರು 'ನೋ ಹಾರ್ಸ್ ಟ್ರೇಡಿಂಗ್' ಎಂದು ಪದ ಬಳಸುತ್ತಾರೆ. ಈ ಪದ ಯುದ್ಧದ ಸಮಯದಲ್ಲಿ ಮಾತ್ರ ಬಳಸುವಂತದ್ದು. ಕರ್ನಾಟಕದಲ್ಲಿ ಮೊದಲ ಬಾರಿಗೆ ಬಳಸಿದವರು ಕುದುರೆ ವ್ಯಾಪಾರ ಪದ ಬಳಕೆ ಮಾಡಿದರು ಎಂದು ವಿವರಿಸಿದರು.