ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡ ಉದ್ದೇಶ ರಾಜ್ಯದ ಮಟ್ಟಿಗೆ ನಿರೀಕ್ಷಿತ ಫಲಿತಾಂಶವನ್ನು ನೀಡದಿರುವ ಹಿನ್ನೆಲೆಯಲ್ಲಿ ಕರ್ನಾಟಕವು ದ್ವಿಭಾಷೆಯ ಸೂತ್ರವನ್ನು ಅಳವಡಿಸಿಕೊಳ್ಳಲು ಇದು ಸಕಾಲವಾಗಿದೆಯೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಅಭಿಪ್ರಾಯಪಟ್ಟಿದ್ದಾರೆ.
ಅವರು ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಹಾಗೂ ಸರ್ಕಾರದ ಪ್ರಮುಖ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ನೆರೆಯ ರಾಜ್ಯ ತಮಿಳುನಾಡು ದ್ವಿಭಾಷಾ ಸೂತ್ರವನ್ನು ಅನುಸರಿಸಿ ತನ್ನ ಭಾಷಾ ಅಸ್ಮಿತೆಯನ್ನು ಬೇರೆಲ್ಲ ಭಾಷೆಗಳಿಗಿಂತ ಸಮರ್ಥವಾಗಿ ಕಾಪಾಡಿಕೊಂಡಿದೆ. ಆದರೆ ಕರ್ನಾಟಕವು ತ್ರಿಭಾಷಾ ಸೂತ್ರವನ್ನು ಅನುಸರಿಸಿದ ಹಿನ್ನೆಲೆಯ ಲಾಭ-ನಷ್ಟಗಳನ್ನು ಪರಿಶೀಲಿಸಿದಾಗ ನಮ್ಮ ರಾಜ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಹಾಗಾಗಿ ಕರ್ನಾಟಕವೂ ಕೂಡ ಕನ್ನಡದ ಭಾಷಾ ಬೆಳವಣಿಗೆ ಮತ್ತು ವಿಕಾಸದ ದೃಷ್ಟಿಯಿಂದ ದ್ವಿಭಾಷಾ ಸೂತ್ರವನ್ನೇ ಅನುಸರಿಸುವ ಅಗತ್ಯವಿದೆ ಎಂದರು.
ಕನ್ನಡ ಪೀಠಗಳಿಗೆ ತಲಾ ಹತ್ತು ಕೋಟಿ ಇಡುಗಂಟನ್ನು ಸರ್ಕಾರ ನೀಡಲಿ
ಹೊರರಾಜ್ಯದಲ್ಲಿರುವ ಕನ್ನಡಪೀಠಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಆಡಳಿತಾರೂಢ ರಾಜ್ಯ ಸರ್ಕಾರವು ಪ್ರತಿ ವಿಶ್ವವಿದ್ಯಾಲಯಕ್ಕೆ ಒಂದೇ ಬಾರಿಗೆ ಹತ್ತು ಕೋಟಿ ರೂ.ಗಳ ಇಡುಗಂಟನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದ ಬಿಳಿಮಲೆ, ಹೊರ ರಾಜ್ಯ ಮತ್ತು ದೇಶಗಳಲ್ಲಿ ಕನ್ನಡ ಪೀಠಗಳನ್ನು ತೆರೆಯಬೇಕು. ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ಬಜೆಟ್ನೊಳಗಾಗಿ ಕಾಯ್ದಿರಿಸುವ ವಿಶ್ವಾಸವಿರುವುದಾಗಿ ತಿಳಿಸಿದರು. ಅನ್ಯಭಾಷಿಕರು ಸರಳವಾಗಿ ಕನ್ನಡಭಾಷೆ ಕಲಿಯಲು ಅನುಕೂಲವಾಗುವಂತೆ 36 ಗಂಟೆಗಳ ಅವಧಿಯ ಪಠ್ಯಕ್ರಮವನ್ನು ಪ್ರಾಧಿಕಾರದ ವತಿಯಿಂದ ತಯಾರಿಸಲಾಗಿದ್ದು, ಬೆಂಗಳೂರಿನ 30 ಕಲಿಕಾ ಕೇಂದ್ರಗಳಲ್ಲಿ ಸುಮಾರು 600ಮಲೆಯಾಳಿಗಳು ಹಾಗೂ ಇತರೆ ಪ್ಲಾಟ್ಗಳಲ್ಲಿ ವಾಸವಾಗಿರುವ ಅಸಂಖ್ಯಾತ ಜನರಿಗೆ ಕನ್ನಡ ಕಲಿಕಾ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಕಲಿಕಾ ಕೇಂದ್ರಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸಹ್ಯಾದ್ರಿ ಉತ್ಸವ ಪುನಾರಂಭಿಸಿ
ಸ್ಥಳೀಯ ಜನರು ತಮ್ಮ ಭಾಷೆಯ ಸೊಗಡನ್ನು ಸಂಭ್ರಮಿಸುವಂತೆ ಹಾಗೂ ಇಲ್ಲಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದಂತೆ ಸ್ಥಗಿತಗೊಂಡಿರುವ ಸಹ್ಯಾದ್ರಿ ಉತ್ಸವವನ್ನು ಪುನರ್ ಆರಂಭಿಸಬೇಕು. ಅದಕ್ಕಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದ ಅವರು, ಈ ಕುರಿತಂತೆ ಪ್ರಾಧಿಕಾರ ಸರ್ಕಾರದಿಂದ ಅನುಮತಿ ಪಡೆಯುವಲ್ಲಿ ತನ್ನ ಸಹಕಾರವನ್ನು ವಿಸ್ತರಿಸಲಿದೆ ಎಂದರು.
ಹೊಸದಾಗಿ ಆರಂಭಗೊಳ್ಳುತ್ತಿರುವ ಕೈಗಾರಿಕಾ ಘಟಕಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ವಿಮಾನ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಕನ್ನಡ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕೇವಲ ಸರ್ಕಾರಿ ಆದೇಶಗಳಿಂದ ಕನ್ನಡದ ಉಳಿವು ಮತ್ತು ವಿಕಾಸ ಸಾದ್ಯವಿಲ್ಲ. ಕನ್ನಡವನ್ನು ಹೃದಯದ ಭಾಷೆಯಾಗಿ ಪರಿಗಣಿಸಿ, ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗುವಂತೆ ಇಲ್ಲಿನ ಜವಾಬ್ದಾರಿಯುತ ಅಧಿಕಾರಿಗಳು, ಜನಪ್ರತಿನಿಧಿಗಳು ಕನ್ನಡ ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಲೀಡ್ ಬ್ಯಾಂಕ್ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿ
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅನ್ಯಭಾಷಿಕ ನೌಕರರ ನೇಮಕಾತಿಯಿಂದಾಗಿ ಸಾಮಾಜಿಕ ಸಾಮರಸ್ಯ ಕದಡುತ್ತಿದೆ. ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳೂ ಕೂಡ ಆಂಗ್ಲ ಮತ್ತು ಹಿಂದಿ ಬಾಷೆಯಲ್ಲಿ ನಡೆಯುತ್ತಿರುವುದರಿಂದ ಕನ್ನಡಿಗರು ಬ್ಯಾಂಕುಗಳ ನೇಮಕಾತಿ ಪರೀಕ್ಷೆಯಿಂದ ಹೊರಗುಳಿಯುತ್ತಿದ್ದಾರೆ. ಈ ನ್ಯೂನತೆಯನ್ನು ಸರಿಪಡಿಸಲು ಲೀಡ್ ಬ್ಯಾಂಕ್ ಪ್ರತಿನಿಧಿಗಳು ಸೂಚನೆ ನೀಡಬೇಕಾದ ಅಗತ್ಯವಿದೆ ಎಂದರು.
ಇದನ್ನೂ ಓದಿ: ಅನ್ನ ಬಿಟ್ಟು ಚಪಾತಿ ತಿಂದ್ರೆ ಹೊಟ್ಟೆಯ ಬೊಜ್ಜು ಕರಗುತ್ತಾ? ತೂಕ ಇಳಿಸಲು ಈ ಟಿಪ್ಸ್ ಫಾಲೋ ಮಾಡ್ಲೇಬೇಕು!!
ಪತ್ರಿಕಾಗೋಷ್ಟಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್, ಸದಸ್ಯರಾದ ಡಾ.ರಾಮಚಂದ್ರಪ್ಪ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಫಣಿಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.