ರಾಜ್ಯದಲ್ಲಿ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ

ಗದಗ ಜಿಲ್ಲೆಯಲ್ಲಿ ನೆರೆಹಾನಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ಜಿಲ್ಲೆಯ ನರಗುಂದ ತಾಲ್ಲೂಕಿನ ಪ್ರದೇಶಗಳಿಗೆ ಮಂಗಳವಾರ (ಸೆ.8) ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲಿಸಿತು.

Last Updated : Sep 9, 2020, 03:39 PM IST
ರಾಜ್ಯದಲ್ಲಿ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ title=
Photo Courtsey : facebook

ಬೆಂಗಳೂರು: ಗದಗ ಜಿಲ್ಲೆಯಲ್ಲಿ ನೆರೆಹಾನಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ಜಿಲ್ಲೆಯ ನರಗುಂದ ತಾಲ್ಲೂಕಿನ ಪ್ರದೇಶಗಳಿಗೆ ಮಂಗಳವಾರ (ಸೆ.8) ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲಿಸಿತು.

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯ ಬೆಂಗಳೂರಿನ ಪ್ರಾದೇಶಿಕ ಕಚೇರಿ ಅಧೀಕ್ಷಕ ಅಭಿಯಂತರ ಸದಾನಂದ ಬಾಬು ಹಾಗೂ ಕೇಂದ್ರ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ಅಧೀನ ಕಾರ್ಯದರ್ಶಿ ವಿ.ಪಿ. ರಾಜವೇಧಿ ಅವರನ್ನೊಳಗೊಂಡ ತಂಡವು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದರು.

ಕೇಂದ್ರ ಅಧ್ಯಯನ ತಂಡವು ಮೊದಲಿಗೆ ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮಕ್ಕೆ ಭೇಟಿ ನೀಡಿ, ಪ್ರವಾಹದಿಂದಾದ ಹಾನಿಯಾದ ಕೊಣ್ಣೂರು ಸೇತುವೆ ರಸ್ತೆಯನ್ನು ಪರಿಶೀಲಿಸಿತು. ಸಂಬಂಧಿಸಿದ ಇಂಜನೀಯರಿಂದ ಮಾಹಿತಿ ಪಡೆದ ತಂಡವು ಈ ಸೇತುವೆ ಸುಗಮ ಸಂಚಾಯಕ್ಕೆ ಅಗತ್ಯವಿರುವ ಮಾರ್ಗೋಪಾಯಗಳೇನು ಎಂಬುದನ್ನು ಚರ್ಚಿಸಿ, ಹಾನಿ ಪ್ರಮಾಣ ಕುರಿತು ಮಾಹಿತಿ ಪಡೆದರು.

ನಂತರ ಅಧ್ಯಯನ ತಂಡವು ಬೇಳೆ ಕೊಣ್ಣೂರು ವಾಸನ ರಸ್ತೆಯಲ್ಲಿನ ಸರ್ವೇ ನಂ 17/3 ರ ಅಕ್ಕಮಹಾದೇವಿ ಬಂಡೋಜಿ ಅವರ 1.14 ಎಕರೆ ಜಮೀನಿನಲ್ಲಿ ಬೆಳೆಯದಾದ ಹೆಸರು, ಸರ್ವೇ ನಂ 17 ರಲ್ಲಿ ಆರ್.ಆರ್ ಸೋಮಾಪುರ ಅವರ 1.20 ಎಕರೆ ಜಮೀನಿನಲ್ಲಿ ಹತ್ತಿ ಬೆಳೆ ಹಾನಿಗೀಡಾದ ಪೇರಲ ತೋಟ, ಸರ್ವೇ ನಂ 18/1+2 ಬರತೇಶ ಬೂಗಾರ ಇವರ 4.10 ಎಕರೆ ಪ್ರದೇಶದಲ್ಲಿನ ಹತ್ತಿ ಹಾಗೂ ಸರ್ವೇ ನಂ 38 ರಲ್ಲಿನ ಹಾನಿಗೊಳಗಾದ ಗೋವಿನ ಜೋಳ ಬೆಳೆಗಳನ್ನು ವೀಕ್ಷಿಸಿದರು. ರೈತರ ಅಹವಾಲುಗಳನ್ನು ಆಲಿಸಿ, ಬೇಳೆಗೆ ವಿಮೆ ಮಾಡಿಸಲಾಗಿದೆಯೇ ಹೇಗೆ, ಹಾಗೂ ಈ ಜಮೀನಿನಲ್ಲಿ ಬೆಳೆದ ಹತಿ, ಹೆಸರ್ತು ಎಷ್ಟು ಪ್ರಮಾಣದಲ್ಲಿ ತಮಗೆ ಆದಾಯ ತರುತ್ತಿತ್ತು ಎಂಬಿತ್ಯಾದಿ ಮಾಹಿತಿ ಪಡೆದು, ಹಾನಿಗೀಡಾದ ಜಮೀನಿನ ರೈತನಿಗೆ ಪರಿಹಾರ ಕುರಿತು ಚರ್ಚೆ ನಡೆಸಿದರು.

ತದನಂತರ ಲಕಮಾಪುರ ಗ್ರಾಮಕ್ಕೆ ಬೇಟಿ ನೀಡಿ, ಪ್ರವಾಹದಿಂದ ಹಾನಿಗೊಳಗಾಗದ ಮನೆ ಹಾಗೂ ರೈತರ ಜಮೀನುಗಳಿಗೆ ಬೇಟಿ ನೀಡಿ ಪರಿಶೀಲಿಸಿದರು. ಗ್ರಾಮ ಸ್ಥಳಾಂತರಕ್ಕೆ ಸ್ಥಳ ಗುರುತಿಸಲಾಗಿದೆ ಗ್ರಾಮಸ್ಥರೆಲ್ಲರೂ ಒಪ್ಪಿದಲ್ಲಿ ಗ್ರಾಮ ಸ್ಥಳಾಂತಕ್ಕೆ ಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ ಸುಂದರೇಶ್ ಬಾಬು ತಿಳಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯರು ಮನೆ ಹಾಗೂ ರಸ್ತೆ ಸೇರಿದಂತೆ ಬಹುತೇಕ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಇದನ್ನು ಪರಿಗಣಿಸಿ ಹೆಚ್ಚಿನ ಪರಿಹಾರ ಒದಗಿಸಲು ಮನವಿ ಮಾಡಿದರು.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಜ.1 ರಿಂದ ಸೆ.7ರವರಗೆ ವಾಡಿಕೆ ಮಳೆ 363 ಮಿ.ಮಿ.ಗಿಂತ 462 ಮಿ.ಮಿ. ಮಳೆ ಸುರಿದಿದ್ದು, ಇದರಿಂದ ಶೆ.27ರಷ್ಟು ಹೆಚ್ಚುವರಿ ಮಳೆಯಾಗಿದೆ. ನವಿಲುತೀರ್ಥ ಜಲಾಶಯದ ಹೊರಹರಿವು ಗರಿಷ್ಠಮಟ್ಟ 26,864 ಕ್ಯೂಸೆಕ್ಸ್ ಇದೆ. ಬೆಣ್ಣೆಹಳ್ಳ ಪ್ರವಾಹದಿಂದಾಗಿ ನರಗುಂದ ತಾಲೂಕಿನ 7 ಹಾಗೂ ರೋಣ ತಾಲೂಕಿನ 7 ಸೇರಿ ಒಟ್ಟು 14 ಗ್ರಾಮಗಳು ನೆರೆಗೆ ತುತ್ತಾಗಿವೆ. ಸಿಡಿಲು ಬಡಿದು ಇಲ್ಲಿಯವರೆಗೆ 17 ಜಾನುವಾರುಗಳು ಸಾವನ್ನಪ್ಪಿದ್ದು, ಇದಕ್ಕಾಗಿ 64 ಸಾವಿರ ಪರಿಹಾರ ಮಂಜೂರು ಮಾಡಿದೆ. ಅತಿವೃಷ್ಠಿಯಿಂದಾಗಿ 283 ಮನೆಗಳು ಹಾನಿಗೊಳಗಾಗಿದ್ದು, ಸುಮಾರು 146.5 ಲಕ್ಷ ರೂ. ಹಾನಿ ಆಗಿದೆ. 1689.82 ಹೆಕ್ಟೆರ್ ತೋಟಗಾರಿಕೆ ಹಾಗೂ 5911 ಹೆಕ್ಟೆರ್ ಕೃಷಿ ಬೆಳೆ ನಾಶವಾಗಿದೆ. ಅಲ್ಲದೇ, ಬೆಳೆಗಳ ಜಂಟಿ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು, ಒಟ್ಟು 4589.9 ಲಕ್ಷ ರೂ.ನಷ್ಟು ಬೆಳೆ ಹಾನಿಯಾಗಿದೆ. ಸುಮಾರು 8496 ಲಕ್ಷ ರೂ.ನಷ್ಟು 631 ಕಿಮೀ ರಸ್ತೆ, 2531.6 ಲಕ್ಷ ರೂ.ನಷ್ಟು 51 ಸೇತುವೆಗಳು, 71 ಸಾವಿರ ರೂ.ನಷ್ಟು 12 ವಿದ್ಯುತ್ ಕಂಬಗಳು ಹಾಗೂ 31.6 ಲಕ್ಷ ರೂ.ನಷ್ಟು 7 ಕುಡಿಯುವ ನೀರಿನ ಕಾಮಗರಿಗಳಿಗೆ ಹಾನಿಯುಂಟಾಗಿದೆ. ಇದರಿಂದ ಜಿಲ್ಲೆಯಲ್ಲಿ ಪ್ರವಾಹ ಮತ್ತು ಮಳೆಯಿಂದ ಸುಮಾರು 15799.63 ಲಕ್ಷ ರೂ.ನಷ್ಟು ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಕೇಂದ್ರ ನೆರೆ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜುಗೌಡ್ ಕೆಂಚನಗೌಡ್ರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Trending News