ಬಿಜೆಪಿಯ ವಿಚಾರ ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಪಕ್ಷದ ಬದ್ದತೆ ಹಸಿವು ಮುಕ್ತ ಕರ್ನಾಟಕ-ಸಿಎಂ

ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಟ ಮಾಡುವುದೇ ಇಂದಿರಾಗಾಂಧಿ ಸಲ್ಲಿಸುವ ಗೌರವ-ಸಿದ್ದರಾಮಯ್ಯ  

Last Updated : Nov 20, 2017, 09:45 AM IST
ಬಿಜೆಪಿಯ ವಿಚಾರ ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಪಕ್ಷದ ಬದ್ದತೆ ಹಸಿವು ಮುಕ್ತ ಕರ್ನಾಟಕ-ಸಿಎಂ title=

ಬೆಂಗಳೂರು : ದೇಶದ ಏಕತೆ, ಸಮಗ್ರತೆ ಹಾಗೂ ಭಾವೈಕ್ಯತೆಗಾಗಿ ಹೋರಾಟ ಮಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಶ್ರೀಮತಿ ಇಂದಿರಾ ಗಾಂಧಿಯವರಿಗೆ ದೇಶದ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಟ ಮಾಡುವುದೇ ಅವರಿಗೆ ಅರ್ಪಿಸುವ ಗೌರವ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯ ವಿಚಾರ ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಪಕ್ಷದ ಬದ್ದತೆ ಹಸಿವು ಮುಕ್ತ ಕರ್ನಾಟಕ ಎಂದು ತಿಳಿಸಿದ್ದಾರೆ.

ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ  ಆಯೋಜಿಸಿದ್ದ ಇಂದಿರಾಗಾಂಧಿಯವರ ನೂರನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿಯವರು ಮಾತನಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮುಂದುವರೆದ ದೇಶವಾಗಿ ಸೇರ್ಪಡೆಗೊಳ್ಳಲು ಇಂದಿರಾಗಾಂಧಿಯವರೇ ಕಾರಣ. 'ಗರೀಬಿ ಹಠಾವೋ' ಘೋಷಣೆಯನ್ನು ದೇಶಕ್ಕೆ ಮೊದಲು ಕೊಟ್ಟ ನಾಯಕಿ. ಸಮಸಮಾಜದ ನಿರ್ಮಾಣದ ಕನಸು, ಅಲ್ಪಸಂಖ್ಯಾತರಿಗೆ 15 ಅಂಶದ ಕಾರ್ಯಕ್ರಮ ನೀಡಿದವರು ಅವರು. ನಮ್ಮ ಸರ್ಕಾರ ಕೂಡ ಇಂದಿರಾಗಾಂಧಿಯವರ ಗರೀಬಿ ಹಠಾವೋ ಘೋಷಣೆಯಿಂದ ಸ್ಫೂರ್ತಿ ಪಡೆದಿದೆ. ಇದು ಹಸಿವುಮುಕ್ತ ಕರ್ನಾಟಕ ಪರಿಕಲ್ಪನೆಗೆ ಸ್ಫೂರ್ತಿ.

ಬಾಂಗ್ಲಾ ವಿಭಜನೆ ವೇಳೆ ಇಂದಿರಾಗಾಂಧಿಯವರು ತೆಗೆದುಕೊಂಡ ತೀರ್ಮಾನ ಜಗತ್ತಿಗೆ ಮಾದರಿಯಾಗಿತ್ತು. ದುಷ್ಟಶಕ್ತಿಗಳ ನಿರ್ಮೂಲನಕ್ಕೆ ಅವರು ದುಡಿದಿದ್ದರು. ಬಡವರಿಗೆ ನ್ಯಾಯ, ದುರ್ಬಲ ವರ್ಗದವರಿಗೆ ಶಕ್ತಿ, ಅಲ್ಪಸಂಖ್ಯಾತರಿಗೆ ಇಂದಿರಾಗಾಂಧಿಯವರು ರಕ್ಷಣೆಯಾಗಿದ್ದರು.

ಈಗಾಗಲೇ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಗಳಲ್ಲಿ 1 ಕೋಟಿಗೂ ಹೆಚ್ಚು ಜನ ತಿಂಡಿ ಮತ್ತು ಊಟ ಮಾಡಿದ್ದಾರೆ. ಅನ್ನಭಾಗ್ಯ ಕಾರ್ಯಕ್ರಮಕ್ಕೂ ಇಂದಿರಾಜಿ ಪ್ರೇರಣೆ. ಜಿ.ಎಸ್.ಟಿ  ಯುಪಿಎ ಸರ್ಕಾರದ ಯೋಜನೆ. ಜಿಎಸ್ ಟಿ ದರ  ಕಡಿಮೆಯಾಗಲು ನಮ್ಮ ಹೋರಾಟವೂ ಇದೆ.

ಕೋಮುವಾದಿ ಪಕ್ಷ ಬಿಜೆಪಿಯನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರಬಾರದು‌. ಅವರ ಮಾತುಗಳನ್ನು ಕೇಳೋಕೆ ಆಗಲ್ಲ. ದೇಶ ಸಂಸ್ಕೃತಿ ಬಗ್ಗೆ ಅವರು ಮಾತನಾಡುತ್ತಾರೆ. ಆದರೆ ಇವರು ಮಾತುಗಳಲ್ಲಿ ಸಂಸ್ಕೃತಿ ಇಲ್ಲ. ಬಿಜೆಪಿಯವರದ್ದು ಪೈಶಾಚಿಕ ನಡವಳಿಕೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹೈದ ಸಿದ್ದರಾಮಯ್ಯ ಅನಂತಕುಮಾರ್ ಹೆಗಡೆ, ಈಶ್ವರಪ್ಪ, ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಇವರಿಗೆ ರಾಜಕೀಯದಲ್ಲಿ ಇರಲು ಅರ್ಹತೆಯಿಲ್ಲ. ಬಿಜೆಪಿಯವರು ಮನುಷ್ಯತ್ವ ಇಲ್ಲದವರು ಎಂದು ತೀವ್ರ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ನೋಟು ಅಮಾನ್ಯ ಮಾಡಿ ಬಡವರ ಪಾಲಿಗೆ ಬ್ಯಾಂಕ್ ಬಾಗಿಲು ಮುಚ್ಚಿದರು. ಆದರೆ ಶ್ರೀಮತಿ ಇಂದಿರಾ ಗಾಂಧಿಯವರು ದೇಶದಲ್ಲಿ ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡಿ ಬಡವರಿಗೆ ಬಾಗಿಲು ತೆರೆದರು.

ದೇಶಕ್ಕಾಗಿ ಪ್ರಾಣತೆತ್ತ ಇಂದಿರಾ ಗಾಂಧಿಯವರು ಮಹಾನ್ ನಾಯಕಿ. ಅವರ ಹೆಸರಿನಲ್ಲಿ ಅವರಿಗೆ ಪ್ರಿಯವಾದ ಬಡವರ ಹಸಿವು ನೀಗಿಸುವ ಹಸಿವು ಮುಕ್ತ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ 500 ಇಂದಿರಾ ಕ್ಯಾಂಟೀನ್ ಗಳನ್ನು ಜನವರಿ ಒಂದರಿಂದ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಕೋಮುವಾದಿ ಪಕ್ಷ ಬಿಜೆಪಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಇದಕ್ಕಾಗಿ ರಾಜ್ಯದಲ್ಲಿ ಕೋಮು ಗಲಭೆಗಳ  ಸೃಷ್ಟಿ  ಸೇರಿದಂತೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ನಾಯಕರಾದ ನೆಹರೂ, ರಾಜೀವ್ ಗಾಂಧಿ, ಶ್ರೀಮತಿ ಇಂದಿರಾ ಗಾಂಧಿ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಬುನಾದಿ ತ್ಯಾಗ, ಬಲಿದಾನದ ಮೇಲಿದೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎಂದು ಕಾಂಗ್ರೇಸ್ ಕಾರ್ಯಕರ್ತರಿಗೆ ಕರೆ ನೀಡಿದರು.

ರಾಜ್ಯ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಸರ್ವರಿಗೂ ಆರೋಗ್ಯ ಭಾಗ್ಯ ನೀಡಲಿದೆ. ಇದಕ್ಕಾಗಿ ಸಾರ್ವತ್ರಿಕ ಆರೋಗ್ಯ ಯೋಜನೆ ರೂಪುಗೊಂಡಿದೆ. ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಬಿಜೆಪಿ ಸುಳ್ಳು ಹೇಳಿ ತಿರುಗಿದರೆ ನಾವು ಜನರಿಗೆ ಸತ್ಯದ ಅರಿವು ಮೂಡಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಮುಂದುವರೆದು ಮಾತನಾಡಿದ ಮುಖ್ಯಮಂತ್ರಿ ಯವರು, ಇಂದಿರಾಗಾಂಧಿಯವರಿಗೆ ರಾಜಕಾರಣ ರಕ್ತಗತವಾಗಿ ಬಂದಿತ್ತು. ರಾಜಕಾರಣವನ್ನು ಬಹಳ ಹತ್ತಿರ‌ದಿಂದ ನೋಡಿ ಬೆಳೆದವರು ಅವರು. ಸ್ವಾತಂತ್ರ್ಯ ಯೋಧರ ಒಡನಾಟ ಇಂದಿರಾಗಾಂಧಿಯವರಿಗೆ ದೊರಕಿತ್ತು. ಇದೆಲ್ಲದರ ಅನುಭವದಿಂದ ದೇಶದ ಸುಭದ್ರತೆಗೆ ಇಂದಿರಾಗಾಂಧಿಯವರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಭಾರತದ ಉಕ್ಕಿನ ಮಹಿಳೆಯಾಗಿದ್ದ ಅವರು ಎಂಥದ್ದೇ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಗಟ್ಟಿ ತೀರ್ಮಾನ ಕೈಗೊಳ್ಳುತ್ತಿದ್ದರು ಎಂದು ಇಂದಿರಾ ಗಾಂಧಿ ಅವರ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು.

Trending News