ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಸರ್ವಪಕ್ಷಗಳ ನಾಯಕರು ರಾಜ್ಯಾದ್ಯಂತ ಪ್ರವಾಸ ಆರಂಭಿಸಿದ್ದಾರೆ. ಅಂತೆಯೇ, 2ನೇ ಹಂತದ ಜನಾಶಿರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಫೆ.24 ರಿಂದ ಫೆ.26ರವರೆಗೆ ನಡೆಯಲಿರುವ ಎರಡನೇ ಹಂತದ ಜನಾಶೀರ್ವಾದ ಯಾತ್ರೆಯಲ್ಲಿ ಮುಂಬೈ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ರಾಹುಲ್ 3 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ಫೆ.24(ಇಂದು)ರಂದು ಮಧ್ಯಾಹ್ನ 1 ಗಂಟೆಗೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗುವ ಮೂಲಕ ಎರಡನೇ ಹಂತದ ಜನಾರ್ಶೀವಾದ ಯಾತ್ರೆಗೆ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ವಿಜಯಪುರದ ತಿಕೋಟದ ಬಿಎಲ್ಡಿ ಶಾಲಾ ಆವರಣದಲ್ಲಿ ನಡೆಯಲಿರುವ ಸ್ತ್ರೀಶಕ್ತಿ ಸಮಾವೇಶದಲ್ಲಿ ಭಾಗವಹಿಸಲಿರುವ ರಾಹುಲ್, ನಂತರ ವಿಜಯಪುರದ ಗಾಂಧಿ ಚೌಕ ಹಾಗೂ ತೋರವಿಯಲ್ಲಿ ರೋಡ್ ಶೋ ನಡೆಸಿ, ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
ನಂತರ ಸಂಜೆ 6.30ಕ್ಕೆ ಚಿಕ್ಕೋಡಿಯ ಸರ್ಕಿಟ್ ಹೌಸ್ ನಲ್ಲಿ ಕಾಂಗ್ರೆಸ್ ಹಿರಿಯ ನಾಯಕರು, ಡಿಸಿಸಿ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಲಿದ್ದಾರೆ. ಸಭೆಯ ನಂತರ ವಿಜಯಪುರದ ಸರ್ಕಿಟ್ ಹೌಸ್ ನಲ್ಲಿ ರಾಹುಲ್ ವಾಸ್ತವ್ಯ ಹೂಡಲಿದ್ದಾರೆ. ಅಲ್ಲದೆ, ತಮ್ಮ 2ನೇ ಹಂತದ ಪ್ರವಾಸದಲ್ಲಿ ಸವದತ್ತಿ ಯಲ್ಲಮ್ಮ ಸೇರಿದಂತೆ ಇತರ ಪುರಾತನ ದೇವಾಲಯಗಳು ಹಾಗೂ ದರ್ಗಾಕ್ಕೆ ರಾಹುಲ್ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಫೆ.25ರಂದು ಬೆಳಿಗ್ಗೆ ಬಿಜಾಪುರದಲ್ಲಿ 'ವೃಕ್ಷೋತ್ಥಾನ್' ಹಾಫ್ ಮ್ಯಾರಥಾನ್'ಗೆ ಚಾಲನೆ ನೀಡಲಿದ್ದಾರೆ. ನಂತರ ಮುಳವಾಡದ ಮಲ್ಲಿಕಾರ್ಜುನ ಪ್ರೌಢಶಾಲೆ ಆವರಣ, ಬಾಗಲಕೋಟೆಯ ಬಿಳಗಿ, ಮುಧೋಳ ಮತ್ತು ಬಾಗಲಕೋಟೆ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಫೆ.26ರಂದು ಬೆಳಿಗ್ಗೆ ಬೆಳಗಾವಿಯ ರಾಮದುರ್ಗ ಜಿಲ್ಲೆಯ ಚಿಂಚೋಳಿ ಮೈದಾನ, ಸವದತ್ತಿಯ ಸರ್ಕಾರಿ ಶಾಲಾ ಮೈದಾನದಲ್ಲಿ ಸಭೆಯಲ್ಲಿ ಭಾಗವಹಿಸಲಿರುವ ರಾಹುಲ್ ಗಾಂಧಿ, ಹುಬ್ಬಳ್ಳಿ-ಧಾರವಾಡದ ನೆಹರು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಆಸ್ಕರ್ ಫರ್ನಾಂಡೀಸ್, ದಿನೇಶ್ ಗುಂಡೂರಾವ್, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯಿಲಿ, ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ ನ ಎಲ್ಲ ಹಿರಿಯ ನಾಯಕರು ರಾಹುಲ್ ಗಾಂಧಿಗೆ ಯಾತ್ರೆಯಲ್ಲಿ ಸಾಥ್ ನೀಡಲಿದ್ದಾರೆ.
Phase 2 of #JanaAashirwadaYatre of Congress President Shri Rahul Gandhi will begin tomorrow from Athani in Belagavi District. A Stree Shakti Samavesha will also be held at Tikota, Vijayapura. pic.twitter.com/tlXwtjwi5i
— Karnataka Congress (@INCKarnataka) February 23, 2018