ನವದೆಹಲಿ: ತೀವ್ರಗೊಳ್ಳುತ್ತಿರುವ ಕರೋನವೈರಸ್ (Coronavirus) ಸೋಂಕು ಹರಡುವಿಕೆ ಮತ್ತು ಲಾಕ್ ಡೌನ್ ಅನುಷ್ಠಾನಗಳ ಬಗ್ಗೆ ಇಂದು ಬೆಳಿಗ್ಗೆ 11ಗಂಟೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರ್ನಾಟಕವೂ ಸೇರಿದಂತೆ ಕೆಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಲಿದ್ದಾರೆ.
ಸಭೆ ವೇಳೆ ಮುಖ್ಯವಾಗಿ ರಾಜ್ಯಗಳಲ್ಲಿ ಕೊರೋನಾ ಸೋಂಕು ಹರಡುವಿಕೆ ಯಾವ ಪ್ರಮಾಣದಲ್ಲಿದೆ? ಸೋಂಕು ಹರಡುವಿಕೆ ತಡೆಯಲು ಏನೇನು ಕ್ರಮಕೈಗೊಳ್ಳಲಾಗುತ್ತಿದೆ? ಮುಂದೆ ಏನೇನು ಮಾಡಬೇಕಾಗುತ್ತದೆ? ಅದೇ ರೀತಿ ಲಾಕ್‌ಡೌನ್ (Lockdown) ಎಷ್ಟರಮಟ್ಟಿಗೆ ಅನುಷ್ಠಾನ ಆಗುತ್ತಿದೆ? ಅದರ ಪರಿಣಾಮಗಳು ಏನೇನು ಎಂಬ ಚರ್ಚೆಯಾಗಲಿದೆ. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿಗಳು, ಗೃಹ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ವಿನಿಮಯ ಆಗಲಿದೆ.
ಇದೇ ವೇಳೆ ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುವ ಸಾಧ್ಯತೆ ಇದೆ. ಈಗಾಗಲೇ ಕೆಲ ರಾಜ್ಯಗಳು, ಕೇಂದ್ರ ಸರ್ಕಾರ ಜಿಎಸ್ ಟಿ ಕಾಂಪನ್ಸೇಷನ್ ಸೇರಿದಂತೆ ವಿವಿಧ ಹೆಡ್ ಗಳಲ್ಲಿ ಉಳಿಸಿಕೊಂಡಿರುವ ಬಾಕಿ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿವೆ. ಇಂದಿನ ಸಭೆ ವೇಳೆ ವಿಶೇಷವಾಗಿ ಬಿಜೆಪಿಯೇತರ ಸರ್ಕಾರಗಳಿರುವ ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಬಾಕಿ ಹಣಕ್ಕಾಗಿ ಬೇಡಿಕೆ ಇಡುವ ಸಂಭವ ಇದೆ.
ಪ್ರಧಾನಿ ಮೋದಿ ಕಳೆದ ಬಾರಿ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾಗ 8 ಮಂದಿ ಮುಖ್ಯಮಂತ್ರಿಗಳಿಗೆ ಮಾತ್ರ ಚರ್ಚೆ ಮಾಡಲು ಅವಕಾಶ ನೀಡಲಾಗಿತ್ತು. ಈ ಬಾರಿಯಾದರೂ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yeddyurappa) ರಾಜ್ಯದ ಪರವಾಗಿ ದನಿ ಎತ್ತುತ್ತಾರಾ? ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಾಗಿರುವ ಬಾಕಿ ಹಣವನ್ನು ಬಿಡುಗಡೆ ಮಾಡಿ ಎಂದು ಕೇಳುತ್ತಾರಾ? ಎಂಬುದನ್ನು ಕಾದುನೋಡಬೇಕು.