ನಮ್ಮದು ಕಾಂಗ್ರೆಸ್ ಶೈಲಿಯ ಉಪವಾಸವಲ್ಲ : ಅನಂತ್ ಕುಮಾರ್

ರಾಷ್ಟ್ರಾದ್ಯಂತ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದ ಬಿಸಿ ರಾಜ್ಯಕ್ಕೂ ತಟ್ಟಿದೆ.

Last Updated : Apr 12, 2018, 03:31 PM IST
ನಮ್ಮದು ಕಾಂಗ್ರೆಸ್ ಶೈಲಿಯ ಉಪವಾಸವಲ್ಲ : ಅನಂತ್ ಕುಮಾರ್ title=
Pic : Twitter/ @AnanthKumar

ಬೆಂಗಳೂರು: ರಾಷ್ಟ್ರಾದ್ಯಂತ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದ ಬಿಸಿ ರಾಜ್ಯಕ್ಕೂ ತಟ್ಟಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಬಿಜೆಪಿ ಸಂಸದರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. 

ಬೆಂಗಳೂರು ನಗರದ ಮೌರ್ಯ ಸರ್ಕಲ್​ನಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್​, ಡಿ.ವಿ. ಸದಾನಂದಗೌಡ, ಪ್ರಕಾಶ್​ ಜಾವಡೇಕರ್, ಮುರಳೀಧರ ರಾವ್​, ಸಂಸದ ಪಿ.ಸಿ. ಮೋಹನ್​ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್, ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಹೊಟ್ಟೆ ತುಂಬಾ ಪೂರಿ ತಿಂದು ಉಪವಾಸ ಸತ್ಯಾಗ್ರಹ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಏನೂ ತಿನ್ನದೇ ಉಪವಾಸ ಮಾಡುತ್ತಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀನು ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಅನೈತಿಕ ನಾಯಕತ್ವ ಎಂದು ಟೀಕಿಸಿದರು.

ಮುಂದುವರೆದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ದಿಎ ಮತ್ತು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಡುವಿನ ಯುದ್ಧ ಪ್ರಜಾಪ್ರಭುತ್ವ ಮತ್ತು ವಂಶಾವಳಿ ನಡುವೆ ನಡೆಯುತ್ತಿರುವ ಯುದ್ಧ. ಆಡಳಿತ ಪಕ್ಷದ ಸಂಸದರು ಸಂಸತ್ತಿನ ಅಸಮರ್ಪಕ ಕಾರ್ಯಕ್ಕಾಗಿ ತಮ್ಮಗೆ ದೊರೆಯುವ ಸೌಲಭ್ಯ ಮತ್ತು ಭತ್ಯೆಗಳನ್ನು ತ್ಯಜಿಸಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದು ಅನಂತ್ ಕುಮಾರ್ ಹೇಳಿದರು.

ಬೆಂಗಳೂರಿನಲ್ಲಷ್ಟೇ ಅಲ್ಲದೆ, ಧಾರವಾಡದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ, ಬೆಳಗಾವಿಯಲ್ಲಿ ಸಂಸದ ಸುರೇಶ ಅಂಗಡಿ ಮತ್ತು ರಾಜ್ಯಸಭಾ ಸದಸ್ಯ ಪ್ರಭಾಕರ್​ ಕೋರೆ, ದಾವಣಗೆರೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ನೇತೃತ್ವದಲ್ಲಿ ಜಿಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದೆ.

Trending News