'ಎತ್ತಿನ ಹೊಳೆ' ಯೋಜನೆಯ ಮೊದಲ ಹಂತದ ಕಾಮಗಾರಿಗೆ NGT ಅಸ್ತು

ನಾಲ್ಕು ವರ್ಷಗಳ ಎತ್ತಿನಹೊಳೆ ವಿವಾದದ ಮೂರು ಅರ್ಜಿಗಳ ಪೈಕಿ ಒಂದನ್ನು ಇತ್ಯರ್ಥಪಡಿಸಿ ಆದೇಶ ಹೊರಡಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ.

Last Updated : Oct 6, 2017, 04:48 PM IST
'ಎತ್ತಿನ ಹೊಳೆ' ಯೋಜನೆಯ ಮೊದಲ ಹಂತದ ಕಾಮಗಾರಿಗೆ NGT ಅಸ್ತು  title=
Pic: Youtube

ನವದೆಹಲಿ: ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಆರಂಭಿಸಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಷರತ್ತುಬದ್ದ ಅನುಮತಿ ನೀಡಿದೆ.

ಯೋಜನೆ ಮುಂದುವರಿಸಿದರೆ ಪರಿಸರಕ್ಕೆ ಹಾನಿಯಾಗಲಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಕರಣಕ್ಕೆ ವಕೀಲರು ಮತ್ತು ಪರಿಸರವಾದಿಗಳೂ ಆದ ಕೆ.ಎನ್. ಸೋಮಶೇಖರ್, ಪುರುಷೋತ್ತಮ್ ಚಿತ್ರಾಪುರ ಮತ್ತು ಕಿಶೋರ್ ಕುಮಾರ್ ಎನ್ನುವವರು ಅರ್ಜಿ ಸಲ್ಲಿಸಿದ್ದರು. ಈ ಮೂರೂ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನ್ಯಾಯಮೂರ್ತಿ ಜಾವೇದ್ ರಹೀಮ್ ಮತ್ತು ನ್ಯಾಯಮೂರ್ತಿ ರಂಜನ್ ಚಟರ್ಜಿ ನೇತೃತ್ವದ ದ್ವಿಸದಸ್ಯ ಪೀಠ, ಈಗ ಸೋಮಶೇಖರ್ ಅವರ ಅರ್ಜಿಯನ್ನು ಇತ್ಯರ್ಥಪಡಿಸಿದ್ದು ಯೋಜನೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಇನ್ನೂ ಎರಡು ಅರ್ಜಿಗಳ ಕುರಿತಾದ ತೀರ್ಪು ಹೊರಬೀಳಬೇಕಾಗಿದೆ.

ಎತ್ತಿನ ಹೊಳೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯಾ ಹಸಿರು ನ್ಯಾಯಧೀಕರಣದಲ್ಲಿ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ವಿಚಾರಣೆ ಇದೇ ಸೆಪ್ಟೆಂಬರ್ 21ರಂದು ಅಂತ್ಯವಾಗಿತ್ತು.  ತೀರ್ಪನ್ನು ಕಾಯ್ದಿರಿಸಲಾಗಿತ್ತು. ಈ ಸಂದರ್ಭದಲ್ಲಿ 'ಪರಿಸರ ನಿಯಮಗಳನ್ನು ಉಲ್ಲಂಘಿಸಿ ಅರಣ್ಯ ಇಲಾಖೆ ಅನುಮತಿ ಪಡೆಯದೆ ಯೋಜನೆ ಪ್ರಾರಂಭಿಸಲಾಗಿದ್ದು, ಇದರಿಂದ ಪಶ್ಚಿಮ ಘಟ್ಟ ಹಾಗೂ ಅಲ್ಲಿನ ಪ್ರಾಣಿ ಸಂಕುಲ ಅವಸಾನವಾಗುತ್ತದೆ' ಎಂದು  ಸೋಮಶೇಖರ್ ಪರ ವಕೀಲರು ನ್ಯಾಯಧಿಕರಣಕ್ಕೆ ಹೇಳಿದ್ದರು.

ಅಲ್ಲದೆ ಎತ್ತಿನ ಹೊಳೆ ಯೋಜನೆಗೆ ಅರಣ್ಯ ಇಲಾಖೆಯ ಅನುಮತಿ ಪಡೆದಿಲ್ಲ. ಜೊತೆಗೆ ಕೇಂದ್ರ ಪರಿಸರ ಇಲಾಖೆಯ ಅನುಮತಿಯನ್ನೂ ಪಡೆದಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಅಧ್ಯಯನ ನಡೆಸದೇ ಕಾಮಗಾರಿ ನಡೆಸಿದರೆ ಪಶ್ಚಿಮಘಟ್ಟಕ್ಕೆ ಹಾನಿಯಾಗಲಿದೆ. ಯೋಜನೆಯಲ್ಲಿ ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಪರವಾನಿಗೆ ಇಲ್ಲದೇ ಮರಗಳ ಮಾರಣಹೋಮ ಮಾಡಲಾಗಿದೆ. ಎತ್ತಿನಹೊಳೆ ಭಾಗದಲ್ಲಿ ಕೇವಲ ಏಳು  ಟಿಎಂಸಿ ನೀರು ಸಿಗಬಹುದು. ಸರ್ಕಾರ 24 ಟಿಎಂಸಿ ನೀರು ಸಿಗಲಿದೆ ಎಂದು ಸುಳ್ಳು ಹೇಳದೆ. ಆದುದರಿಂದ ಯೋಜನೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದರು‌

ವಿಚಾರಣೆ ವೇಳೆ ಯೋಜನೆ ಕುರಿತು ಮಾಡಿರುವ ಡೀಟೈಲ್ ಪ್ರಾಜೆಕ್ಟ್ ರಿಪೋರ್ಟ್ ಬಗ್ಗೆಯೂ ಚರ್ಚೆಯಾಗಿತ್ತು. ಡಿಪಿಆರ್ ವರದಿ ಬದಲಾವಣೆಯಾಗಿದೆ. ಸರ್ಕಾರ ಅರ್ಜಿದಾರರಿಗೆ, ನ್ಯಾಯಧೀಕರಣಕ್ಕೆ ನೀಡಿದ ವರದಿ ಬೇರೆಯಾಗಿದೆ.  ವಾಸ್ತವದ ವರದಿ ಬೇರೆಯಿದೆ‌. 13.93 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಯೋಜನೆ ಪ್ರಾರಂಭಿಸಲು ಅನುಮತಿ ಪಡೆಯಲಾಗಿದೆ. ಆದರೆ ತುಮಕೂರು ಬಳಿ 28 ಹೆಕ್ಟೇರ್ ಅರಣ್ಯ ಭೂಮಿ ಬಳಕೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ಡಿಪಿಆರ್ ನಲ್ಲಿ ಉಲ್ಲೇಖವೇ ಮಾಡಿಲ್ಲ. 2 ಬೃಹತ್ 18 ಚೆಕ್ ಡ್ಯಾಂ ನಿರ್ಮಾಣಕ್ಕೆ ಪ್ಲಾನ್ ಮಾಡಿದೆ. ಇದು ಕೂಡ ಡಿಪಿಆರ್ ವರದಿಯಲ್ಲಿ ಉಲ್ಲೇಖವಾಗಿಲ್ಲ ಎಂದು ಹೇಳಲಾಗಿತ್ತು.

ರಾಜ್ಯ ಸರ್ಕಾರದ ವಕೀಲರು, ಅರಣ್ಯ ಇಲಾಖೆಯ ಪರವಾನಿಗೆ ಪಡೆದೇ ಯೋಜನೆ ಪ್ರಾರಂಭಿಸಲಾಗಿದೆ.‌ ಕುಡಿಯುವ ನೀರಿನ ಯೋಜನೆಯಾದ ಕಾರಣ ಪರಿಸರ ಇಲಾಖೆ ಅನುಮತಿಯೇ ಬೇಕಿಲ್ಲ. ಪರಿಸರ ಇಲಾಖೆ ಅನುಮತಿ ಬೇಕು ಅಂತಾ ಅರ್ಜಿದಾರರು ಸುಮ್ಮನೆ ತಕರಾರು ಮಾಡುತ್ತಿದ್ದಾರೆ. ಎಲ್ಲಾ ನಿಯಮಗಳನ್ನು ಪಾಲಿಸಿಯೇ ಯೋಜನೆ ನಡೆಸಲಾಗುತ್ತಿದೆ.‌ ಯಾವುದೇ ರೀತಿಯ ಅಕ್ರಮ ಚಟುವಟಿಕೆ ಮಾಡುತ್ತಿಲ್ಲ. ಯೋಜನೆಯ ನಿರೀಕ್ಷೆ ಯಂತೆ ನೀರು ಪಡೆಯಲಿದ್ದೇವೆ ಎಂದು ಹೇಳಿದ್ದರು.

ಕೇಂದ್ರ ಪರಿಸರ ಇಲಾಖೆ ವಾದ ಮಂಡಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ಅನ್ವಯ ಈಗಾಗಲೇ ಅರಣ್ಯ ಇಲಾಖೆಯ ಪರವಾನಿಗೆ ನೀಡಲಾಗಿದೆ. ಎಲ್ಲಾ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಹೇಳಿತ್ತು.

Trending News