ಮೈಸೂರು: ಸಿಲ್ಕ್ ಸೀರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಮೈಸೂರ್ ಸಿಲ್ಕ್ ಸೀರೆ ಎಂದರೆ ಮಹಿಳೆಯರಿಗೆ ಎಲ್ಲಿಲ್ಲದ ಮೋಹ. ಆದರೆ ಗಗನಕ್ಕೇರಿರುವ ಈಗಿನ ದರದಲ್ಲಿ ಮೈಸೂರ್ ಸಿಲ್ಕ್ ಸೀರೆ ಕೊಳ್ಳಲು ಸಾಧ್ಯವೇ... ಖಂಡಿತ ಸಾಧ್ಯ. ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರು ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಕೇವಲ 4,500 ರೂ.ಗಳಿಗೆ ಮೈಸೂರ್ ಸಿಲ್ಕ್ ಸೀರೆ ನೀಡುವ ಭರವಸೆ ನೀಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ. ಮಹೇಶ್ ಮಧ್ಯಮ ವರ್ಗದವರಿಗೆ ಮೈಸೂರ್ ಸಿಲ್ಕ್ ಸೀರೆ ಕೊಳ್ಳಲು ಸಾಧ್ಯವಿಲ್ಲ ಎಂಬ ಆರೋಪವಿದೆ. ಹೀಗಾಗಿ ಈ ಕೊಡುಗೆ ನೀಡುತ್ತಿದ್ದೇವೆ. ರಾಜ್ಯಾದ್ಯಂತ ಇರುವ ನಮ್ಮ ಮಳಿಗೆಗಳಲ್ಲಿ 4,500 ರೂ.ಗಳಿಗೆ ಮೈಸೂರು ಸಿಲ್ಕ್ ಸೀರೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಎಲ್ಲ ಮಹಿಳೆಯರು ಕಡಿಮೆ ದರದಲ್ಲಿ ಸೀರೆ ಕೊಂಡುಕೊಳ್ಳಬಹುದು. ಬೇಡಿಕೆಗೆ ಅನುಗುಣವಾಗಿ ಸೀರೆ ಸರಬರಾಜು ಮಾಡುತ್ತೇವೆ. ಸದ್ಯಕ್ಕೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಕೊಡುಗೆ ನೀಡಲು ಯೋಚಿಸಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಕೊಡುಗೆಗಳನ್ನು ಮುಂದುವರಿಸುವ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಹೇಳಿದರು.