ಮೈಸೂರು : ಮೈಸೂರು ಜಿಲ್ಲಾಡಳಿತದ ಭಾರೀ ಮಹತ್ವಾಕಾಂಕ್ಷೆಯಿಂದ ಜೂನ್ ತಿಂಗಳಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಬೃಹತ್ ಯೋಗ ಪ್ರದರ್ಶನ ಕಡೆಗೂ ಗಿನ್ನಿಸ್ ದಾಖಲೆ ಸೇರಿದೆ.
ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನ ರೇಸ್ ಕೋರ್ಸ ಆವರಣದಲ್ಲಿ ಜೂನ್.21, 2017ರಂದು ಏರ್ಪಡಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ 55,506 ಮಂದಿ ಪಾಲ್ಗೊಂಡು ಏಕಕಾಲದಲ್ಲಿ ಯೋಗ ಪ್ರದರ್ಶನ ನಡೆಸಿದ ಫಲವಾಗಿ ಮೈಸೂರಿಗೆ 'ಗಿನ್ನಿಸ್ ವರ್ಲ್ಡ್ ರೆಕಾರ್ಡ್' ಗರಿ ದಕ್ಕಿದೆ.
ಈ ಸಂಬಂಧ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತನ್ನ ವೆಬ್ ಸೈಟ್ www.guinnessworldrecords.com/Largest Yoga Lesson ನಲ್ಲಿ ಘೋಷಣೆ ಮಾಡಿದೆ.
ಈ ಹಿಂದೆ, ವಿಶ್ವ ಯೋಗ ದಿನಾಚರಣೆಯಂದು ಮೈಸೂರಿಗಿಂತ ಅಹಮದಾಬಾದ್ನಲ್ಲಿ ಅತಿ ಹೆಚ್ಚು ಮಂದಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿತ್ತು. ಆದರೆ, ಅಹಮದಾಬಾದ್ನಲ್ಲಿ ಕೇವಲ 54,522 ಮಂದಿ ಮಾತ್ರ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದ ಬಗ್ಗೆ ದಾಖಲೆಗಳು ದೊರೆತ ಹಿನ್ನೆಲೆಯಲ್ಲಿ ಮೈಸೂರು ಗಿನ್ನಿಸ್ ದಾಖಲೆ ಪುಸ್ತಕ ಸೇರಿದೆ.
ಅಂದು ಮೈಸೂರು ರೇಸ್ ಕೋರ್ಸ್ನ 136 ಎಕರೆ ಪ್ರದೇಶದಲ್ಲಿ ನಡೆದ ಯೋಗ ಕಾರ್ಯಕ್ರಮವನ್ನು ಮೈಸೂರು ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ, ಸಚಿವ ಹೆಚ್.ಸಿ. ಮಹಾದೇವಪ್ಪ ಮತ್ತಿತರರು ಭಾಗವಹಿಸಿದ್ದರು.