ಬೆಂಗಳೂರು: 'ಎಲ್ಲಕ್ಕಿಂತ ಮೊದಲಿ ಶ್ರೀರಾಮುಲು ಅಣ್ಣಂಗೆ ತುಂಬಾ ಥ್ಯಾಂಕ್ಸ್, ಶಾಂತ ರೀತಿಯಲ್ಲಿ ಚುನಾವಣೆ ನಡೆಸಿಕೊಟ್ಟಿದ್ದಕ್ಕೆ' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಗೆಲುವಿನ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನನಗೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಜವಾಬ್ದಾರಿ ವಹಿಸಿತ್ತು. ಆದರೆ ಕೆಲವರು ಡಿಕೆಶಿ ವಿಷ ಬೀಜ ಬಿತ್ತಲು ಬಂದಿದ್ದಾರೆ ಎಂದು ಅಪಪ್ರಚಾರ ಮಾಡಿದ್ದರು. ಆದರೂ ಕಡೆಗೆ ಕಾಂಗ್ರೆಸ್ ಅಭ್ಯರ್ಥಿಯೇ ಗೆಲುವು ಸಾಧಿಸಿದರು ಎಂದು ಡಿಕೆಶಿ ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಬಳ್ಳಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಾರಣರಾದ ಮೂವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಡಿಕೆ ಶಿವಕುಮಾರ್ ಅವರು, ಯಾವುದೇ ಉದ್ವೇಗಕ್ಕೆ ಒಳಗಾಗದೆ ಬಹಳ ಶಾಂತ ರೀತಿಯಿಂದ ನಡೆಯಲು ಸಹಕರಿಸಿದ ಶ್ರೀರಾಮುಲು ಅಣ್ಣಂಗೆ ಹಾಗೂ ಶಾಂತಕ್ಕನಿಗೆ ಅಭಿನಂದಿಸುತ್ತೇನೆ. ಹಾಗೆಯೇ ಪಕ್ಷ, ಜಾತಿ, ಧರ್ಮ ಬಿಟ್ಟು ಕಾಂಗ್ರೆಸ್ ಬೆಂಬಲಿಸಿದ ಜನತೆಗೆ ಧನ್ಯವಾದ ಕೋರುತ್ತೇನೆ ಎಂದರು.
ಚುನಾವಣೆ ಕೊನೆಯ ದಿಂದ ನಾನು ಬಾಂಬ್ ಸಿಡಿಸುತ್ತೇನೆ ಎಂದು ಎಲ್ಲಾ ಹೇಳಿದ್ದರು. ಈಗ ಅದನ್ನೇ ಮಾಡುತ್ತೇನೆ. ಬಳ್ಳಾರಿಯ ಅಭಿವೃದ್ಧಿಯೇ ನನ್ನ ಬಾಂಬ್, ಬಳ್ಳಾರಿ ಧೂಳು ಮುಕ್ತ ಆಗಬೇಕು. ಅದೇ ನನ್ನ ಮುಂದಿನ ಗುರಿ ಎಂದರು.
ಸೋಲಿಗೆ ಸಾವಿಗೆ ಹೆದರಿ ಮನೆಯಲ್ಲಿ ಕೂರುವವನು ಡಿಕೆಶಿಯಲ್ಲ. ಹಾಗೆಯೇ ಗೆದ್ದಿದ್ದೇವೆಂದು ನಾವು ಹಿಗ್ಗುವುದಿಲ್ಲ. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ನನಗೆ ಯೋಗಕ್ಕಿಂತ ಯೋಗಕ್ಷೇಮವೇ ಮುಖ್ಯ. ಹುಟ್ಟಿದ ಮೇಲೆ ಸಾಯದೇ ಇರಲು ಆಗಲ್ಲ. ಹುಟ್ಟಿದ ಮೇಲೆ ಸಾಯಲೇಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ತನ್ನ ಟೀಕಿಸಿದವರಿಗೆ ಟಾಂಗ್ ನೀಡಿದರು.