ಬೆಂಗಳೂರು: ಪ್ರತ್ಯೇಕ ಉತ್ತರ ಕರ್ನಾಟಕದ ಕೂಗಿಗೆ ಮಾಧ್ಯಮಗಳೇ ಕಾರಣ ಎಂದು ಹರಿಹೈದಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉತ್ತರ ಕರ್ನಾಟಕದ ವಿವಾದಕ್ಕೆ ಬೆಂಕಿ ಹಚ್ಚುತ್ತಿರುವವರು ರಾಜಕಾರಣಿಗಳಲ್ಲ, ಮಾಧ್ಯಮದವರು ಎಂದಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ, ಉತ್ತರ ಕರ್ನಾಟಕದ ವಿಷಯದಲ್ಲಿ ಕಿಡಿ ಹಚ್ಚುತ್ತಿರುವವರು ಮಾಧ್ಯಮದವರೇ. ಪ್ರತಿಯೊಂದು ವಿಷಯದಲ್ಲಿ ತಪ್ಪೇ ಕಾಣಿಸುತ್ತಾ ಹೋದರೆ, ರಾಜ್ಯ ಉದ್ಧಾರವಾಗಬೇಕೋ ಅಥವಾ ಹಾಳಾಗಬೇಕೋ ಅದು ನಿಮಗೆ ಸೇರಿದ್ದು ಎಂದು ಮಾಧ್ಯಮದವರ ಮೇಲೆ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಾನು ಚನ್ನಪಟ್ಟಣದಲ್ಲಿ ಶ್ರೀರಾಮುಲು ವಿಚಾರವಾಗಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದೆ, ಅವರ ಹೇಳಿಕೆಗೆ ಉತ್ತರ ನೀಡಿದ್ದೆನೇ ಹೊರತು ಬೇರೇನೂ ಹೇಳಿಲ್ಲ. ಪ್ರತ್ಯೇಕ ರಾಜ್ಯವಾದರೆ ಅನುದಾನ ಎಲ್ಲಿಂದ ತರುತ್ತೀರಿ? ಎಂದು ಕೇಳಿದ್ದೆ. ನಾನು ಉತ್ತರ ಕರ್ನಾಟಕದ ಬಗ್ಗೆ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ಆದರೂ ಮಾಧ್ಯಮಗಳು ಅದನ್ನೇ ಒತ್ತಿ ಹೇಳುತ್ತಿವೆ. ಅಖಂಡ ಕರ್ನಾಟಕದ ಬಗ್ಗೆ ನಾನು ನೂರು ಬಾರಿ ಹೇಳಿದ್ದೇನೆ. ಮಾಧ್ಯಮಗಳು ಅವರ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಒಂದು ವೇಳೆ ರಾಜ್ಯ ವಿಭಜನೆಯಾದರೆ ಅದಕ್ಕೆ ಮಾಧ್ಯಮಗಳೇ ಹೊಣೆ ಎಂದು ಸಿಎಂ ತಮ್ಮ ಅಸಮಾಧಾನವನ್ನು ಹೊರಹಾಕಿದರು.