ಬೆಳಗಾವಿ: ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಶಿವಕುಮಾರ್ ಅವರು ದೇಶಕ್ಕೆ ಗಾಂಧೀಜಿ ಅವರ ಕೊಡುಗೆಯನ್ನು ಸ್ಮರಿಸಿದರು.
“ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡು ದೇಶದ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿದ್ದರು. ಈಗ ನೂರು ವರ್ಷಗಳ ನಂತರ ಈ ಐತಿಹಾಸಿಕ ಕಾರ್ಯಕ್ರಮವನ್ನು ನಡೆಸಿ ಮುಂದಿನ ಪೀಳಿಗೆಗೆ ಗಾಂಧೀಜಿ ಅವರ ತತ್ವ, ಆದರ್ಶವನ್ನು ಸಾರಲು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
“ಇದು ದೇಶದ ಜನರು, ದೇಶದ ಐಕ್ಯತೆ, ಸಮಗ್ರತೆಗೆ ಗಾಂಧೀಜಿ, ಅಂಬೇಡ್ಕರ್ ಸ್ಮರಣೆ ಹಾಗೂ ಸಂವಿಧಾನ ರಕ್ಷಣೆ ಈ ಸಮಾವೇಶದ ಮುಖ್ಯ ಉದ್ದೇಶ. 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ" ಇವು ಕೇವಲ ಘೋಷಣೆಗಳಲ್ಲ, ಭಾರತದ ಶಕ್ತಿ ಮಂತ್ರಗಳು. ಇತ್ತೀಚೆಗೆ ನಾವು ಸಂಕ್ರಾಂತಿ ಹಬ್ಬ ಆಚರಿಸಿದ್ದೇವೆ. ಸಂಕ್ರಾಂತಿ ಎಂದರೆ ಹೊಸತನ, ಹೊಸ ಹುರುಪು, ಹೊಸ ಉತ್ಸಾಹ” ಎಂದು ತಿಳಿಸಿದರು.
“ಅಂದು ಮಹಾತ್ಮ ಗಾಂಧೀಜಿ ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಕುಳಿತ ಸ್ಥಾನದಲ್ಲಿ ಇಂದು ಕನ್ನಡನಾಡಿನ ವರಪುತ್ರ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ” ಎಂದು ತಿಳಿಸಿದರು.
“1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಕ್ರಾಂತಿ ಆಗಿ, ಹುರುಪು ತಂದಿತ್ತು. ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದರು. ಅಂಬೇಡ್ಕರ್ ಸಂವಿಧಾನ ಕೊಟ್ಟರು. ಗಾಂಧಿ ಭಾರತ ಎಂದರೆ ಸ್ವಾಭಿಮಾನಿಗಳ ಭಾರತ, ಏಕತೆಯ ಭಾರತ, ಸಾಮರಸ್ಯದ ಬದುಕಿನ ಭಾರತ, ಜಾತ್ಯತೀತ ಭಾರತ, ಸರ್ವೋದಯ ಭಾರತ” ಎಂದರು.
“ನೀವು ಕ್ರಾಂತಿಕಾರಿಯನ್ನು ಕೊಲ್ಲಬಹುದು, ಆದರೆ ಕ್ರಾಂತಿಯನ್ನು ಕೊಲ್ಲಲು ಆಗುವುದಿಲ್ಲ ಎಂದು ಗಾಂಧೀಜಿ ಅವರು ಹೇಳಿದ್ದಾರೆ. ವ್ಯಕ್ತಿ ಸಾಯಬಹುದು, ಆದರೆ ಅವರ ತತ್ವಗಳು ಸಾಯುವುದಿಲ್ಲ. ನನ್ನ ದೇಹವನ್ನು ನಾಶ ಮಾಡಬಹುದು, ಆದರೆ ನನ್ನ ಚಿಂತನೆಗಳನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಗಾಂಧಿ ಹೇಳಿದ್ದರು. ಪಾಪಗಳನ್ನು ನಾಶ ಮಾಡು, ಪಾಪಿಗಳನ್ನು ಪ್ರೀತಿಸು ಎಂದು ಗಾಂಧಿ ಹೇಳಿದ್ದಾರೆ” ಎಂದು ಗಾಂಧೀಜಿ ಅವರ ಸಂದೇಶಗಳನ್ನು ಸ್ಮರಿಸಿದರು.
“ನಮ್ಮ ಹೆಗಲ ಮೇಲೆ ಕೇಸರಿ, ಬಿಳಿ, ಹಸಿರಿನ ಕಾಂಗ್ರೆಸ್ ಶಾಲಿದೆ. ಎದೆಯ ಒಳಗೆ ಪವಿತ್ರ ಸಂವಿಧಾನವಿದೆ. ಇದನ್ನು ನಾವು ಮರೆಯಲು ಸಾಧ್ಯವಿಲ್ಲ. ಸಂವಿಧಾನವೇ ನಮ್ಮ ತಂದೆ ತಾಯಿ, ಸಂವಿಧಾನವೇ ನಮ್ಮ ಬಂಧು ಬಳಗ, ಸಂವಿಧಾನವೇ ನಮ್ಮ ಧರ್ಮಗ್ರಂಥ. ಭಗವದ್ಗೀತೆ, ಬೈಬಲ್, ಕುರಾನ್ ಧರ್ಮ ಗ್ರಂಥಗಳಂತೆ ನಮಗೆ ಶ್ರೇಷ್ಠ ಗ್ರಂಥ ನಮ್ಮ ಸಂವಿಧಾನ” ಎಂದು ತಿಳಿಸಿದರು.
“ನನ್ನ ದೇಹ ಸತ್ತರೂ ನಾನು ಭಾರತದ ಸಂವಿಧಾನದ ರೂಪದಲ್ಲಿ ಬದುಕಿರುತ್ತೇನೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಅವರು ಈಗ ಜೈ ಭೀಮ್ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ. ಸುಳ್ಳಿನ ವಿರುದ್ಧ ಹೋರಾಟ ಮಾಡಿದ ಮಹಾತ್ಮನ ವಿರುದ್ಧವೇ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ದುಷ್ಟರಿಂದ ಗಾಂಧಿ ಚಿಂತನೆಗಳನ್ನು ಉಳಿಸಬೇಕು. ಗೂಡ್ಸೆ ಚಿಂತನೆಗಳನ್ನು ನಾಶ ಮಾಡಬೇಕು. ಗಾಂಧೀಜಿ ತತ್ವಗಳನ್ನು ರಕ್ಷಿಸಬೇಕು” ಎಂದು ಕರೆ ನೀಡಿದರು.
“ಈ ಸಮಾವೇಶ ಇಲ್ಲಿಗೆ ನಿಲ್ಲಬಾರದು. ನಮ್ಮ ಸರ್ಕಾರ ಹಾಗೂ ಪಕ್ಷದ ವತಿಯಿಂದ ಇಡೀ ವರ್ಷ ಗಾಂಧಿ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ದೇಶದ ಪ್ರತಿ ತಾಲೂಕು ಮಟ್ಟದಲ್ಲಿ ಈ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ಮಾಡಬೇಕು” ಎಂದು ತಿಳಿಸಿದರು.
“ಅಂದು ಹೇಗೆ ಗಾಂಧೀಜಿ ಸಮಾವೇಶ ನಡೆಸಿ ಜನರನ್ನು ಒಂದುಗೂಡಿಸಿದರೋ ಅದೇ ರೀತಿಯಲ್ಲೇ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಾಡಿ ಮನಸ್ಸುಗಳನ್ನು ಒಂದುಗೂಡಿಸಿದ್ದಾರೆ. ಜನವರಿ 30 ರಂದು ಕೋಮುವಾದಿಗಳು ಗಾಂಧೀಜಿ ಅವರನ್ನು ಕೊಂದರು. ಆದರೆ ಅವರ ಮೌಲ್ಯ ಆದರ್ಶಗಳನ್ನು ಕಾಂಗ್ರೆಸ್ ಮುಂದುವರೆಸಿಕೊಂಡು ಬಂದಿದೆ” ಎಂದರು.
“1924 ರ ಸಮಾವೇಶ ಕರ್ನಾಟಕ ಏಕೀಕರಣಕ್ಕೂ ಶಕ್ತಿ ತುಂಬಿತ್ತು. ಈ ಸಮಾವೇಶ ಕರ್ನಾಟಕವನ್ನು ಕಟ್ಟಿತ್ತು. ಕನ್ನಡಿಗರನ್ನು ಒಂದುಗೂಡಿಸಿತ್ತು. ನಮಗೆ ಆರ್ಥಿಕ ಸ್ವಾತಂತ್ರ್ಯ ಬೇಕು. ಅದನ್ನು ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ನೀಡಿದೆ. ಬಡತನದಿಂದ ಸ್ವಾತಂತ್ರ್ಯ ಬೇಕು. ಅದಕ್ಕಾಗಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಆ ಮೂಲಕ ನುಡಿದಂತೆ ನಡೆದಿದ್ದೇವೆ. ನಾವೆಲ್ಲರೂ ಸೇರಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ - ಎಂಬ ಈ ಮೂರು ತತ್ವಗಳನ್ನು ಉಳಿಸೋಣ. ಭಾರತದ ಪ್ರಜಾಪ್ರಭುತ್ವವನ್ನು ಕಾಪಾಡೋಣ” ಎಂದು ತಿಳಿಸಿದರು.
"ಇದು ಭಾಗ್ಯ ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಪುರಂದರದಾಸರ ಪದಗಳಂತೆ. ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ, ಜೈ ಕಾಂಗ್ರೆಸ್” ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.