ಮಹಾದಾಯಿ, ಕಳಸಾ ಬಂಡೂರಿ ಯೋಜನೆ : ನಾಲ್ಕನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಪ್ರತಿಭಟನೆ

ರಾಜ್ಯದಲ್ಲಿ ಮಹಾದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ರೈತರ ಪ್ರತಿಭಟನೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ನಡೆಯುತ್ತಿದೆ. 

Last Updated : Dec 26, 2017, 01:42 PM IST
  • ಮಹಾದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ನಾಲ್ಕನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಪ್ರತಿಭಟನೆ.
  • ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ.
  • ನಾಳೆ ಉತ್ತರ ಕರ್ನಾಟಕ ಬಂದ್ಗೆ ಸಂಘಟನೆಗಳು ಕರೆ.
  • ಕನ್ನಡ ಚಿತ್ರರಂಗದಿಂದ ಮಹಾದಾಯಿ ಹೋರಾಟಕ್ಕೆ ಬೆಂಬಲ.
ಮಹಾದಾಯಿ, ಕಳಸಾ ಬಂಡೂರಿ ಯೋಜನೆ : ನಾಲ್ಕನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಪ್ರತಿಭಟನೆ title=

ಬೆಂಗಳೂರು : ರಾಜ್ಯದಲ್ಲಿ ಮಹಾದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿನಿತ್ಯ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದೆ. 

ಬಿ.ಎಸ್.ಯಡಿಯೂರಪ್ಪ ಅವರು ರೈತರನ್ನು ಭೇಟಿ ಮಾಡಿ ಮಹದಾಯಿ ವಿಚಾರವಾಗಿ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿ ರೈತರು ನಾಲ್ಕು ದಿನಗಳಿಂದ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ, ಇತ್ತ ಬಿಜೆಪಿಯ ಮಹತ್ವದ ಕೋರ್ ಕಮಿಟಿ ಸಭೆ ಬಿಎಸ್ವೈ ನಿವಾಸದಲ್ಲಿ ನಡೆಯಲಿದೆ. 

ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಸಹ ಉಸ್ತುವಾರಿ ಪಿಯೂಷ್ ಗೋಯಲ್, ಆರ್. ಅಶೋಕ್, ಅರವಿಂದ ಲಿಂಬಾವಳಿ ಸೇರಿದಂತೆ ವಿವಿಧ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ. ಸಭೆಯ ನಂತರ ಯಡಿಯೂರಪ್ಪ ಅವರು ರೈತರೊಂದಿಗೆ ಮಾತುಕತೆ ನಡೆಸಿ ತಮ್ಮ ಸ್ಪಷ್ಟೀಕರಣ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಸ್ವಯಂ ಪ್ರೇರಿತರಾಗಿ ಚಿಕಿತ್ಸೆ ನೀಡುತ್ತಿರುವ ವೈದ್ಯರು
ಮಹದಾಯಿ ಹಾಗೂ ಕಳಸಾ ಬಂಡೂರಿ ಯೊಜನೆ ಜಾರಿಗೆ ಒತ್ತಾಯಿಸಿ ರೈತರು ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿ ಎದುರು ಕಳೆದ ನಾಲ್ಕು ದಿನಗಳಿಂದ ಆಹೋರಾತ್ರಿ ಧರಣಿ ನಡೆಸುತ್ತಿರುವ ರೈತರು ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ವೈದ್ಯರು ಸ್ವಯಂಪ್ರೇರಿತವಾಗಿ ಸ್ಥಳಕ್ಕಾಗಮಿಸಿ ರೈತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. 

ನಾಳೆ ಉತ್ತರ ಕರ್ನಾಟಕ ಬಂದ್
ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಬುಧವಾರ(ಡಿ.27) ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಉತ್ತರಕರ್ನಾಟಕ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಮಹದಾಯಿ ಹೋರಾಟ ಸಮಿತಿ ತಿಳಿಸಿದೆ.

ಈ ಕುರಿತು ಪತ್ರಿಕಾಗೋಷ್ಟಿ ನಡೆಸಿದ ಸಮಿತಿಯು, ತುರ್ತು ಸೇವೆಗಳನ್ನು ಹೊರತು ಪಡಿಸಿ ನಾಳೆ ಹುಬ್ಬಳ್ಳಿ, ಧಾರವಾಡ, ಮಲಪ್ರಭಾ ಅಚ್ಚುಕಟ್ಟು ಪ್ರದೇಶ ಬಂದ್ ಮಾಡಲಾಗುವುದು ಎಂದು ಹೇಳಿದೆ.

ಕನ್ನಡ ಚಿತ್ರರಂಗದ ಬೆಂಬಲ
ಮಹಾದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಸಂಪೂರ್ಣ ಸಾಥ್ ನೀಡುವುದಾಗಿ ಕನ್ನಡ ಫ್ಲಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಹೇಳಿದ್ದಾರೆ. ಈ ಕುರಿತು ಚಿತ್ರರಂಗದ ಗಣ್ಯರೊಂದಿಗೆ ಸಭೆ ನಡೆಸಿದ ಅವರು, ಮಹಾದಾಯಿ ಹೋರಾಟದಲ್ಲಿ ಚಿತ್ರರಂಗ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. 

ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ಬಂದ್ ನಡೆಸಲಾಗುತ್ತಿದ್ದು, 100ಕ್ಕೂ ಅಧಿಕ ಕನ್ನಡಪರ ಸಂಘಟನೆಗಳು ಬಂದ್ ನಲ್ಲಿ ಭಾಗವಹಿಸಲಿವೆ. ಸಮಿತಿಯ ಮುಂದಿನ ಹೆಜ್ಜೆಗಳನ್ನು ನಾಳೆ ಸಂಜೆ ಬಂದ್ ಪೂರ್ಣವಾದ ನಂತರ ತಿಳಿಸುವುದಾಗಿ ಸಮಿತಿ ಹೇಳಿದೆ. 

Trending News