ಬೆಂಗಳೂರು : ನಗರದ ಪರಿಸರ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ತಿಂಗಳಲ್ಲಿ ಒಂದು ದಿನ ಲೆಸ್ ಟ್ರಾಫಿಕ್ ಡೇ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ನಿಯಮ 2018ರ ಫೆಬ್ರವರಿ 2ನೇ ವಾರದಿಂದ ಜಾರಿಗೆ ಬರಲಿದೆ.
ಈ ಕುರಿತು ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ, ಸಾರಿಗೆ ಇಲಾಖೆ ವತಿಯಿಂದ ಪ್ರತಿ ತಿಂಗಳ ಎರಡನೇ ಭಾನುವಾರ ವಿರಳ ಸಂಚಾರ ದಿನ ( ಲೆಸ್ ಟ್ರಾಫಿಕ್ ಡೇ) ಅಭಿಯಾನ ನಡೆಸಲು ಚಿಂತನೆ ನಡೆಸಲಾಗಿದೆ. ಎರಡನೇ ಭಾನುವಾರದಂದು ಸ್ವಂತ ವಾಹನವನ್ನು ಬಳಸದೇ ಸಮೂಹ ಸಾರಿಗೆ ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ವಾಯುಮಾಲಿನ್ಯ ಹಾಗೂ ಸಂಚಾರದಟ್ಟಣೆ ತಡೆಗೆ ಕೈಗೊಂಡ ಸಮ-ಬೆಸ ಸಂಖ್ಯೆಗಳ ವಾಹನ ಸಂಚಾರ ವ್ಯವಸ್ಥೆ ಅಷ್ಟೇನೂ ಯಶ ಕಂಡಿಲ್ಲ. ವಿರಳ ಸಂಚಾರ ದಿನದಂದು ಬೆಂಗಳೂರಿನಲ್ಲಿ ಸಾರಿಗೆ ಸಂಸ್ಥೆಯ ಬಸ್ಗಳು, ಬಾಡಿಗೆ ವಾಹನಗಳು, ಆಟೋರಿಕ್ಷಾಗಳು ಹಾಗೂ ಎಲೆಕ್ಟ್ರಿಕ್ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ. ಈ ವಾಹನಗಳನ್ನು ಸ್ವಂತ ವಾಹನಗಳ ಮಾಲೀಕರು ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದ ವಾಹನ ದಟ್ಟಣೆ ನಿಯಂತ್ರಿಸುವುದರ ಜೊತೆಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರವು ೨೦೧೮ರ ಫೆಬ್ರವರಿಯಿಂದ ಪ್ರತಿ ತಿಂಗಳ ೨ನೇ ಭಾನುವಾರವನ್ನು ನಗರದಲ್ಲಿ 'ವಿರಳ ಸಂಚಾರ ದಿನ'ವನ್ನಾಗಿ ಆಚರಿಸಲು ನಿರ್ಧರಿಸಿದೆ. ಈ ಪರಿಸರಸ್ನೇಹಿ ಬದಲಾವಣೆಗೆ ಬೆಂಗಳೂರಿಗರು ನಮ್ಮೊಂದಿಗೆ ಕೈಜೋಡಿಸಬೇಕು. @siddaramaiah pic.twitter.com/Z7O8JWmLWC
— CM of Karnataka (@CMofKarnataka) December 2, 2017