ಹುಬ್ಬಳ್ಳಿ : ಉತ್ತರ ಕರ್ನಾಟಕದ ಜನತೆಯ ಬಹುದಿನಗಳ ನಿರೀಕ್ಷೆಯ ಹುಬ್ಬಳ್ಳಿ-ಮುಂಬೈ ನೂತನ ವಿಮಾನ ಯಾನ ಇದೇ ಡಿ. 12 ರಂದು ಆರಂಭಗೊಳ್ಳಲಿದ್ದು, ಅಂದೇ ನಗರದ ನೂತನ ವಿಮಾನ ನಿಲ್ದಾಣ ಕೂಡ ಲೋಕಾರ್ಪಣೆಗೊಳ್ಳಲಿದೆ.
ಈ ಕುರಿತು ಮಾಹಿತಿ ನೀಡಿದ ಸಂಸದ ಪ್ರಹ್ಲಾದ್ ಜೋಷಿ, ಉತ್ತರ ಕರ್ನಾಟಕದಲ್ಲಿಯೇ ಅತಿದೊಡ್ಡ ಮೊದಲ ವಿಮಾನ ನಿಲ್ದಾಣ ಇದಾಗಲಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ 142 ಕೋಟಿ ರೂ. ವೆಚ್ಚದಲ್ಲಿ ಈ ವಿಮಾನ ನಿಲ್ದಾಣವನ್ನು ಅಭಿವೃದ್ದಿಪಡಿಸಲಾಗಿದೆ. 3,600 ಚದರ ಮೀಟರ್ ವಿಸ್ತೀರ್ಣದಲ್ಲಿ ಹವಾನಿಯಂತ್ರಿತ ಟರ್ಮಿನಲ್ ಇದಾಗಿದ್ದು ಈ ಹಿಂದೆ 1,674 ಮೀ. ಇದ್ದ ರನ್ ವೇ ಅನ್ನು 2,600 ಮೀ. ಗೆ ವಿಸ್ತರಿಸಲಾಗಿದೆ. ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಜತೆಗೆ ಮೂರು ಏರ್‌ಬಸ್ ನಿಲುಗಡೆಗೆ ಸ್ಥಳಾವಕಾಶ ನಿರ್ಮಾಣವಾಗಿದೆ ಎಂದರು.
ಒಟ್ಟು 124 ಆಸನಗಳ ಏರ್ ಇಂಡಿಯಾ ವಿಮಾನವು ಬೆಂಗಳೂರು– ಹುಬ್ಬಳ್ಳಿ– ಮುಂಬೈ ನಡುವೆ ಪ್ರತಿ ಮಂಗಳವಾರ, ಬುಧವಾರ ಮತ್ತು ಶನಿವಾರ ಸಂಚರಿಸಲಿದೆ. ಮಧ್ಯಾಹ್ನ 12ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನವು 12.50ಕ್ಕೆ ಹುಬ್ಬಳ್ಳಿಗೆ ಬರಲಿದೆ. ಹುಬ್ಬಳ್ಳಿಯಿಂದ ಮಧ್ಯಾಹ್ನ 1.25ಕ್ಕೆ ಹೊರಟು 2.30ಕ್ಕೆ ಮುಂಬೈ ತಲುಪಲಿದೆ. ಬಳಿಕ ಅದೇ ದಿನ ಮಧ್ಯಾಹ್ನ 3.25ಕ್ಕೆ ಮುಂಬೈನಿಂದ ಹೊರಟು ಸಂಜೆ 4.35ಕ್ಕೆ ಹುಬ್ಬಳ್ಳಿಗೆ ಬರಲಿದೆ. ಸಂಜೆ 6.10ಕ್ಕೆ ಹುಬ್ಬಳ್ಳಿಯಿಂದ ಹೊರಟು ಸಂಜೆ 7ಕ್ಕೆ ಬೆಂಗಳೂರು ತಲುಪಲಿದೆ ಎಂದು ಅವರು ವಿವರಿಸಿದರು.