ಬೆಂಗಳೂರು: ಇಲ್ಲೊಬ್ಬರು ಗೊಂಬೆ ಟೀಚರ್ ಇದ್ದಾರೆ. ನೋಡೋಕೆ ಯುನಿಫಾರ್ಮ್ ಹಾಕಿಕೊಂಡ ಥೇಟ್ ಮಕ್ಕಳಂತೆ ಕಾಣುತ್ತಾರೆ. ಆದ್ರೆ ಯೂನಿಫಾರಂ ಹಾಕಿಕೊಂಡು ಮಕ್ಕಳಿಗೆ ಪಾಠ ಮಾಡುತ್ತಾರೆ. ಮಗ್ಗಿ ಹೇಳಿ ಕೊಡುವ ಈ ಗೊಂಬೆ ಟೀಚರ್ ಅಂದರೆ ಮಕ್ಕಳಿಗೆಲ್ಲ ಭಾರೀ ಖುಷಿ. ಅದರಲ್ಲೇನಿದೆ ವಿಶೇಷ ಅಂತೀರಾ... ಈ ಸುದ್ದಿ ಓದಿ...
ಗೊಂಬೆ ಟೀಚರ್ ಅಂದರೆ ಯಾವುದೇ ಮನುಷ್ಯನಲ್ಲ. ಬದಲಾಗಿ ಮಕ್ಕಳನ್ನು ಪಾಠಕ್ಕೆ ಆಕರ್ಷಿಸುವ ರೀತಿಯಲ್ಲಿ ಪಾಠ ಮಾಡುವ ರೋಬೊ ಈಗ ಗಮನ ಸೆಳೆಯುತ್ತಿದೆ. ಶಿರಸಿಯ ಎಂ.ಇ.ಎಸ್ ಚೈತನ್ಯ ಕಾಲೇಜ್ನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿರುವ ಅಕ್ಷಯ್ ಮಾಶೇಲ್ಕರ್ ಅವರು ಪಾಠ ಮಾಡುವ ಈ ರೋಬೊ ತಯಾರಿಸಿದ್ದು, ಮಕ್ಕಳನ್ನು ಆಕರ್ಷಿಸುತ್ತಿದೆ. ಈ ರೋಬೋ ಟೀಚರ್ಗೆ ಶಿಕ್ಷಾ ಎಂದು ಹೆಸರಿಡಲಾಗಿದೆ.
ಈ ರೋಬೋಟ್ ಶಿಕ್ಷಾ. ಕಾಗುಣಿತ, ಮಗ್ಗಿ, ಪದ್ಯ ಎಲ್ಲವನ್ನೂ ಮಕ್ಕಳಿಗೆ ಹೇಳಿಕೊಡುವ ರೋಬೋಟ್. ಮಕ್ಕಳನ್ನು ಬೇಗನೇ ಆಕರ್ಷಿಸುವ ಈ ರೋಬೊ, ಪಾಠದ ಜೊತೆಗೆ ಮಕ್ಕಳ ಜತೆ ಆಟವನ್ನು ಆಡಿಸುತ್ತದೆ. ಹೀಗಾಗಿ ಮಕ್ಕಳಿಗೆ ಈ ಗೊಂಬೆ ಟೀಚರ್ ಅಂದರೆ ಅಚ್ಚುಮೆಚ್ಚು. ಮಕ್ಕಳ ಪಾಠದ ಎಲ್ಲ ಪ್ರಶ್ನೆಗೂ ಉತ್ತರ ನೀಡುವ ರೋಬೊ ಕ್ಲಾಸ್ನ ಟಾಪ್ ವಿದ್ಯಾರ್ಥಿಯೂ ಹೌದು.
ಇದನ್ನೂ ಓದಿ- ರಿಸರ್ವ್ ಬ್ಯಾಂಕಿನಲ್ಲಿರುವುದಕ್ಕಿಂತ ಹೆಚ್ಚು ಹಣ ಬಿಜೆಪಿಗರ ಮನೆಯಲ್ಲಿದೆ!: ಕಾಂಗ್ರೆಸ್
ಪಾಠ ಮಾಡ್ತಾ ಹತ್ತಾರು ಆಟ ಆಡಿಸುತ್ತೆ. ಈ ರೋಬೋಟ್ಗೆ ಮೊದಲೇ ಅಗತ್ಯ ವಿಷಯಗಳನ್ನೆಲ್ಲಾ ಫೀಡ್ ಮಾಡಲಾಗಿದೆ. ಕೈಯಲ್ಲಿ ಸ್ಮಾರ್ಟ್ ಕಾರ್ಡ್ ಇಟ್ಟ ತಕ್ಷಣ ಏನೆಲ್ಲಾ ವಿಷಯಗಳಿದೆಯೋ ಆ ವಿಷಯಗಳ ಬಗ್ಗೆ ಈ ರೊಬೋಟ್ ಪ್ರತಿಯೊಬ್ಬರಿಗೂ ಅರ್ಥ ಆಗುವ ಹಾಗೆ ವಿಷಯಗಳ ವಿವರಣೆ ನೀಡುತ್ತದೆ. ಈಗಾಗಲೇ ಶಾಲೆ ಶಾಲೆಗೆ ಸವಾರಿ ಆರಂಭಿಸಿರುವ ಶಿಕ್ಷಾ ರೊಬೋಟ್ ಮಕ್ಕಳನ್ನು ಪಾಠದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ, ಕೆರೆ-ದಡ, ಮ್ಯೂಸಿಕಲ್ ಚೇರ್ ಮತ್ತು ಗಣಿತಕ್ಕೆ ಸಂಬಂಧಪಟ್ಟ ಆಟಗಳನ್ನು ಕೂಡ ಮಕ್ಕಳಿಗೆ ಆಡಿಸುತ್ತದೆ.
ಪ್ರೋ.ಅಕ್ಷಯ್ ಮಾಶೇಲ್ಕರ್ ಹಾಗೂ ಅವರ ಶಿಷ್ಯ ಆದರ್ಶ್ ದೇವಾಡಿಗ ಅವರು ಸೇರಿ ನಿರ್ಮಿಸಿರುವ ಈ ರೊಬೋಟ್ ವಿದ್ಯುತ್ ಚಾಲಿತ ರೊಬೋಟ್ ಆಗಿದೆ. ಹಲವು ಸೆನ್ಸಾರ್ಗಳನ್ನು ಈ ಸಾಧನಕ್ಕೆ ಅಳವಡಿಸಲಾಗಿದೆ. ವಿಶೇಷವಾಗಿ ಸ್ಮಾರ್ಟ್ ಕಾರ್ಡ್ ಹಾಗೂ ಗೊಂಬೆಯ ಕೈ ಇವೆರಡರಿಂದ ಸಂವಹನ ಸಾಧ್ಯವಾಗಿರುವುದರಿಂದ ಯಾರು ಬೇಕಾದ್ರೂ ಈ ರೊಬೋಟ್ ಅನ್ನು ನಿಯಂತ್ರಿಸಬಹುದು. ತೂಕ ಕಡಿಮೆ ಇರೋದ್ರಿಂದ ಆರಾಮಾಗಿ ಸಾಗಣೆ ಮಾಡಬಹುದು.
ಇದನ್ನೂ ಓದಿ- ಲೋಕಾಯುಕ್ತ ಸಂಸ್ಥೆ ಜನರ ಪರವಾಗಿದೆ, ಲಂಚ ಕೇಳಿದ್ರೆ ಮಾಹಿತಿ ನೀಡಿ: ನ್ಯಾ. ಬಿ.ಎಸ್.ಪಾಟೀಲ್
ಈಗಾಗಲೇ ಪ್ರೊ. ಅಕ್ಷಯ್ ಮಾಶೇಲ್ಕರ್ ಹತ್ತು ಹಲವು ವೈಜ್ಞಾನಿಕ ಉಪಕರಣಗಳನ್ನು ತಯಾರಿಸಿದ್ದಾರೆ. ಅವರು ತಯಾರಿಸಿದ ಮನೆಗೆ ಅಗತ್ಯವಿರುವ ಚಿಕ್ಕ ಸೋಲಾರ್ ಪ್ರಾಜೆಕ್ಟ್ ಸೇರಿದಂತೆ ಅನೇಕ ವಿಜ್ಞಾನದ ಉಪಕರಣ ಮಾಡೆಲ್ಗಳು ಗಮನ ಸೆಳೆಯುತ್ತದೆ. ಡಾ. ವಿಕ್ರಂ ಸಾರಾಭಾಯ್ ಸೈನ್ಸ್ ಮತ್ತು ಮ್ಯಾಥಮೆಟಿಕ್ಸ್ ರಿಸೆರ್ಚ್ ಸೆಂಟರ್ ತೆರೆದಿರುವ ಅಕ್ಷಯ್ ವಿವಿಧ ಶಾಲೆಗಳ ಮಕ್ಕಳಿಗೆ ವಿಜ್ಞಾನದ ಮಾಡೆಲ್ ಮಾಡಲು ನೆರವು ನೀಡುತ್ತಿದ್ದಾರೆ. ಈ ಹಿಂದೆ ಲಯನ್ಸ್ ಶಾಲೆಯ ಮಕ್ಕಳಿಗೆ ಗ್ಯಾಸ್ ಗೀಜರ್ ನಿಂದ ಆಗುವ ಅವಘಡ ತಡೆಯುವ ಬಗ್ಗೆ ವಿಷಯ ಮಂಡಿಸಲು ಸಹಕಾರಿಯಾಗಿದ್ದರು. ಜೊತೆಗೆ ವಿಷಯ ಮಂಡಿಸಿದ ವಿದ್ಯಾರ್ಥಿಗಳು ಯುವ ವಿಜ್ಞಾನಿ ಪ್ರಶಸ್ತಿಗೂ ಭಾಜನರಾಗಿದ್ದರು. ವೈಜ್ಞಾನಿಕ ಉಪಕರಣಗಳ ಬಗ್ಗೆ ಹೊಸ ಸಂಶೋಧನೆ ಮಾಡುವುದು ಇವರ ಫ್ಯಾಶನ್.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಕ್ಷಯ್ ಮಾಶೇಲ್ಕರ್, ಈ ರೋಬೋಟ್ ನಲ್ಲಿ ಮಕ್ಕಳು ಆಟದ ಜೊತೆಗೆ ಕಲಿಯುವುದರಿಂದ ಅವರಲ್ಲಿ ಹೆಚ್ಚು ವಿಷಯ ನೆನಪಿನಲ್ಲಿ ಇರುತ್ತದೆ. ಮೊಬೈಲ್ ಗಳ ಬದಲಾಗಿ ಇಂಥ ಹೊಸ ತಂತ್ರಜ್ಞಾನ ಬಳಸಿ ಪಾಠ ಮಾಡುವುದರಿಂದ ಮಕ್ಕಳಿಗೆ ಕಲಿಕೆಯ ಬಗ್ಗೆ ಆಸಕ್ತಿಯೂ ಹೆಚ್ಚಾಗುತ್ತದೆ. ಹೀಗಾಗಿ ರೋಬೋ ಟೀಚರ್ ನಿಂದ ಮಕ್ಕಳಿಗೆ ಅನುಕೂಲವಾಗೋದಂತು ನಿಜ ಅನ್ನುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.