Happy New Year 2023: ಹುಚ್ಚೆದ್ದು ಕುಣಿದು ಹೊಸ ವರ್ಷವನ್ನು ಸ್ವಾಗತಿಸಿದ ಬೆಂಗಳೂರು ಮಂದಿ

New Year's celebrations in Bengaluru: ಸಾವಿರಾರು ಮಂದಿ ಹಾಡು, ನೃತೃ, ಶಿಳ್ಳೆ ಚಪ್ಪಾಳೆ ಮೂಲಕ ‘ಹ್ಯಾಪಿ ನ್ಯೂ ಇಯರ್’, ‘ಹೊಸ ವರ್ಷದ ಶುಭಾಶಯಗಳು’ ಎಂದು ಹರ್ಷೋದ್ಗಾರದ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ಗಳು ವಿಶೇಷ ವಿದ್ಯುತ್ ದೀಪಗಳಿಂದ ಕಂಗೊಳಿಸಿದವು.

Written by - VISHWANATH HARIHARA | Edited by - Puttaraj K Alur | Last Updated : Jan 1, 2023, 01:07 PM IST
  • ಅದ್ದೂರಿಯಾಗಿ 2023ರ ಹೊಸ ವರ್ಷವನ್ನು ಬರಮಾಡಿಕೊಂಡ ಬೆಂಗಳೂರಿನ ಮಂದಿ
  • ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ಗಳಲ್ಲಿ ಮುಗಿಲುಮುಟ್ಟಿದ ಸಂಭ್ರಮ
  • ಹೊಸ ವರ್ಷದ ಹಿನ್ನೆಲೆ ರಂಗು ರಂಗಾಗಿದ್ದ ಸಿಲಿಕಾನ್ ಸಿಟಿ, ಖುಷಿಯ ಅಲೆಯಲ್ಲಿ ತೇಲಿದ ಜನರು
Happy New Year 2023: ಹುಚ್ಚೆದ್ದು ಕುಣಿದು ಹೊಸ ವರ್ಷವನ್ನು ಸ್ವಾಗತಿಸಿದ ಬೆಂಗಳೂರು ಮಂದಿ  title=
ಬೆಂಗಳೂರಿನ ಎಂ.ಜಿ.ರೋಡ್

ಬೆಂಗಳೂರು: ಕೊರೊನಾ ವೈರಸ್ ಮಹಾಮಾರಿಯ ಪರಿಣಾಮ ಕಳೆದ 2 ವರ್ಷಗಳಿಂದ ಮಂಕಾಗಿದ್ದ 'ನ್ಯೂ ಇಯರ್ ಸೆಲೆಬ್ರೆಷನ್' ಈ ವರ್ಷ ಅದ್ದೂರಿಯಾಗಿ ನಡೆಯಿತು. ಹೊಸ ವರ್ಷಾಚರಣೆಯ ಕೇಂದ್ರ ಸ್ಥಳವಾದ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆ ಜಂಕ್ಷನ್‌ನಲ್ಲಿ ಸಾವಿರಾರು ಮಂದಿ ಜಮಾಯಿಸಿದ ಸಂಭ್ರಮಿಸಿದರು. ಮಧ್ಯರಾತ್ರಿ 11.59 ಹಿಮ್ಮುಖ ಕೌಂಟ್‌ಡೌನ್ ಆರಂಭವಾಯಿತು. ಗಡಿಯಾರದ ಮುಳ್ಳು 12 ಗಂಟೆ ಬಾರಿಸುತ್ತಿದ್ದಂತೆ ಸಂಭ್ರಮದ ಕಟ್ಟೆ ಒಡೆದು ನೆರೆದಿದ್ದ ಜನರೆಲ್ಲಾ ಖುಷಿಯ ಅಲೆಯಲ್ಲಿ ಮಿಂದೆದ್ದರು.

ಇದೇ ವೇಳೆ ಆಕಾಶದಲ್ಲಿ ಸಿಡಿದ ಪಟಾಕಿಗಳು ಚಿತ್ತಾರ ಮೂಡಿಸಿದವು. ಹಾಡು, ನೃತೃ, ಶಿಳ್ಳೆ ಚಪ್ಪಾಳೆಯ ಮೂಲಕ ‘ಹ್ಯಾಪಿ ನ್ಯೂ ಇಯರ್’, ‘ಹೊಸ ವರ್ಷದ ಶುಭಾಶಯಗಳು’ ಎಂದು ಹರ್ಷೋದ್ಗಾರದ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು. ಹೊಸ ವರ್ಷದ ಸ್ವಾಗತ ಹಿನ್ನೆಲೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ಗಳು ವಿಶೇಷ ವಿದ್ಯುತ್ ದೀಪಗಳಿಂದ ಕಂಗೊಳಿಸಿದವು.

2 ವರ್ಷಗಳಿಂದ ಕೊರೊನಾ ಕಾರಣಗಳಿಂದ ಈ ಜಾಗದಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ನಿರಾಕರಿಸಲಾಗಿತ್ತು. ಈ ಬಾರಿ ಕೆಲ ನಿಬಂಧನೆಗಳ ಅನ್ವಯ ಅವಕಾಶ ನೀಡಲಾಯಿತು. ಹೀಗಾಗಿ ರಾತ್ರಿ 8 ಗಂಟೆ ಸುಮಾರಿಗೆ ಎಂ.ಜಿ.ರಸ್ತೆ, ಬ್ರಿಗ್ರೇಡ್ ರಸ್ತೆ, ಚರ್ಚ್‌ಸ್ಟ್ರೀಟ್ ರಸ್ತೆಗಳಲ್ಲಿ ಜನಸ್ತೋಮ ಹೆಚ್ಚಾಯಿತು. ಯುವ ಪ್ರೇಮಿಗಳು, ಸ್ನೇಹಿತರು, ರಂಗುರಂಗಿನ ಉಡುಗೆ ತೊಡುಗೆಗಳನ್ನು ಧರಿಸಿಕೊಂಡು ಬಂದಿದ್ದರು. ನಾನಾ ನಮೂನೆಯ ಸಂಗೀತ ವಾದ್ಯಗಳು, ಬಲೂನು, ಹೊಸ ವರ್ಷ ಶುಭಾಶಯ ಕೊರುವ ಫಲಕಗಳನ್ನು ಹಿಡಿದು ತಂಡೋಪತಂಡವಾಗಿ ಬಂದು ಸಂಭ್ರಮಿಸಿದರು.

ಇದನ್ನೂ ಓದಿ: New Year Wishes 2023 : ಹೊಸ ವರ್ಷದ ಲೆಟೆಸ್ಟ್‌ ಶುಭ ಸಂದೇಶಗಳು ಇಲ್ಲಿವೆ ನೋಡಿ..!

ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಯುವ ಜನತೆ ವರ್ಷಪೂರ್ತಿ ಇದೇ ಹರ್ಷ ಇರಲೆಂದು ಪರಸ್ಪರ ಆತ್ಮೀಯ ಅಪ್ಪುಗೆ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ‘ಹ್ಯಾಪಿ ನ್ಯೂ ಇಯರ್...’ ಶುಭಾಶಯ ವಿನಿಮಯ ಎಲ್ಲೆಡೆಯಿಂದ ಕೇಳಿಬರುತ್ತಿತ್ತು. ಇನ್ನು ಮಕ್ಕಳ ಜೊತೆ ಕುಟುಂಬ ಸಮೇತ ಆಗಮಿಸಿದ್ದ ಸಾರ್ವಜನಿಕರು ಸಮೀಪದ ಹೋಟೆಲ್‌ಗಳಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡು ಖುಷಿಪಟ್ಟರು.

ನಗರದಾದ್ಯಂತ ಶನಿವಾರ ಸಂಜೆಯಿಂದಲೇ ಹೊಸ ವರ್ಷದ ಸಂಭ್ರಮ ಮನೆ ಮಾಡಿತ್ತು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಮಲ್ಲೇಶ್ವರ, ಜಯನಗರ, ಇಂದಿರಾನಗರ, ಕೋರಮಂಗಲ, ಮಾರತ್ತಹಳ್ಳಿ, ಹಲಸೂರು, ಕಾಡುಗೋಡಿ, ವೈಟ್‌ ಫೀಲ್ಡ್‌ ಹಾಗೂ ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿಯ ಪ್ರಮುಖ ಕಟ್ಟಡ, ಹೋಟೆಲ್, ರೆಸ್ಟೋರೆಂಟ್ ಪಬ್‌ಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಸಂಜೆ 7 ಗಂಟೆಯಿಂದಲೇ ನಗರದ ಬಹುತೇಕ ಐಶಾರಾಮಿ ಹೋಟೆಲ್, ಪಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮೋಜು ಮಸ್ತಿ ಆರಂಭವಾಗಿತ್ತು. ಕೆಲವು ಮಳಿಗೆಗಳ ಮುಂದೆ ಅಳವಡಿಸಿದ್ದ ಧ್ವನಿವರ್ಧಕಗಳಿಂದ ವಿದೇಶಿ ಮಿಶ್ರಿತ ಸಂಗೀತ ಕೇಳಿಬರುತ್ತಿತ್ತು. ಪ್ರಮುಖವಾಗಿ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್ ರಸ್ತೆಗಳಲ್ಲಿರುವ ಪಬ್, ಬಾರ್ ಆ್ಯಂಡ್ ರೆಸ್ಟೋರಂಟ್‌ಗಳಲ್ಲಿ ಜನ ಕಿಕ್ಕಿರಿದ್ದು ಸೇರಿದ್ದರು.

ಹೊಸ ವರ್ಷಾಚರಣೆ ಹಿನ್ನೆಲೆ ಶನಿವಾರ ರಾತ್ರಿ ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿ ನಗರಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಜ್ಜೆ ಹೆಜ್ಜೆಗೂ ಪೊಲೀಸ್ ಸಿಬ್ಬಂದಿ, ಸಾವಿರಾರು ಸಿಸಿ ಕ್ಯಾಮೆರಾ ಕಣ್ಗಾವಲು, ವಾಚ್ ಟವರ್‌ಗಳು, ಹೊಯ್ಸಳ ವಾಹನ ಸಿಬ್ಬಂದಿ ಎಲ್ಲೆಡೆ ಗಸ್ತು ತಿರುಗುತ್ತಿದ್ದರು. ಸಾವಿರಾರು ಪೊಲೀಸರ ಬಂದೋಬಸ್ತ್ ನಡುವೆ 8 ಡ್ರೋನ್ ಕ್ಯಾಮೆರಾಗಳನ್ನು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ವ್ಯಾಪ್ತಿಯಲ್ಲಿ ಬಳಸಲಾಗಿತ್ತು. ಕೋರಮಂಗಲ, ಇಂದಿರಾನಗರ, ಮಲ್ಲೇಶ್ವರಂ ಹಾಗೂ ಇತರೆಡೆ ಸುಮಾರು 10ಕ್ಕೂ ಹೆಚ್ಚು ಡ್ರೋನ್ ಕ್ಯಾಮೆರಾಗಳನ್ನು ಉಪಯೋಗಿಸಲಾಗಿತ್ತು. ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾವಹಿಸಲಾಗಿತ್ತು.

ಇದನ್ನೂ ಓದಿ: Oppose New Year Celebration : ಹೊಸ ವರ್ಷ ಆಚರಣೆ ವಿರೋಧಿಸಿ ರೂಪಾ ಅಯ್ಯರ್, ಬ್ರಹ್ಮಾಂಡ ಗುರೂಜಿಯಿಂದ ಪಾದಯಾತ್ರೆ

ಮಹಿಳೆಯರ ರಕ್ಷಣೆಗಾಗಿ ಮಹಿಳಾ ಪೊಲೀಸರ ಜೊತೆ ಮಹಿಳಾ ಸಿವಿಲ್ ಡಿಫೆನ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲದೆ ಪ್ರತಿ 100 ಮೀಟರ್ ಒಂದರಂತೆ ಸೇಫ್ಟಿ ಐಲ್ಯಾಂಡ್‌ಗಳನ್ನು ತೆರೆಯಲಾಗಿತ್ತು. ಅಲ್ಲಿ ಮಹಿಳಾ ಪೊಲೀಸರ  ಜೊತೆಗೆ ವೈದ್ಯರು ಮತ್ತು ಒಂದು ಆ್ಯಂಬುಲೆನ್ಸ್ ನಿಯೋಜಿಸಲಾಗಿತ್ತು. ಯುವಕರಿಗೂ ಪ್ರತ್ಯೇಕವಾಗಿ ಔಟ್‌ ಪೋಸ್ಟ್‌ ನಿರ್ಮಿಸಲಾಗಿತ್ತು. ಅಲ್ಲಿಯೂ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಸೇರುವ ಹಿನ್ನೆಲೆ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯದಂತಹ ಘಟನೆ ಮತ್ತು ಇತರೆ ಹಲ್ಲೆ ಅಥವಾ ಅಪರಾಧಗಳನ್ನು ಎಸಗುವ ವ್ಯಕ್ತಿಗಳ ಪತ್ತೆಗಾಗಿ ಮಹಿಳಾ ಸಿಬ್ಬಂದಿ, 250 ಮಂದಿ ಮಫ್ತಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಸಿಬ್ಬಂದಿ ಸಾರ್ವಜನಿಕರ ಜೊತೆಯೇ ಓಡಾಟ ಮಾಡಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸದಲ್ಲಿದ್ದರು.

ಸ್ಥಳಕ್ಕೆ ಆಗಮಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್, ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಭದ್ರತೆ ಪರಿಶೀಲಿಸಿದರು. ಇನ್ನು ವೀಲ್ಹಿಂಗ್, ಡ್ರ್ಯಾಗ್ ರೇಸ್, ಅತಿವೇಗದ ವಾಹನ ಚಾಲನೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ನಗರದ 44 ಮೇಲು ಸೇತುವೆಗಳಲ್ಲಿ ರಾತ್ರಿ 10 ಗಂಟೆಯಿಂದಲೇ ಸಂಚಾರವನ್ನು ನಿರ್ಬಂಧಿಸಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News