ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕಬ್ಬು ಬೆಳೆಯ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳು ಜೂನ್ 30 ರೊಳಗೆ ಸಕ್ಕರೆ ಹರಾಜು ಹಾಕಿ ರೈತರಿಗೆ ಹಣ ಸಂದಾಯ ಮಾಡಬೇಕು ಇಲ್ಲದಿದ್ದರೆ ಆ ಕಾರ್ಖಾನೆಗಳ ಸಕ್ಕರೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿ ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಜೂನ್ 30ರೊಳಗೆ ರೈತರ ಬಾಕಿ ಹಣ ಪಾವತಿ ಮಾಡಬೇಕು. ಹಣವಿಲ್ಲದಿದ್ದರೆ ಸಕ್ಕರೆ ಹರಾಜು ಹಾಕಿ ಆ ಹಣವನ್ನು ರೈತರಿಗೆ ಬಾಕಿ ನೀಡಬೇಕು. ಒಂದು ವೇಳೆ ಕಾರ್ಖಾನೆಗಳು ಕಬ್ಬು ಹಣ ಪಾವತಿ ಮಾಡದಿದ್ದರೆ, ಕಾರ್ಖಾನೆ ಮುಟ್ಟುಗೋಲು ಹಾಕಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಬಾಕಿ ಹಣ ಕೊಡಿಸಲು ವಿಫಲರಾದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ ಎಂಬ ಖಡಕ್ ಎಚ್ಚರಿಕೆಯನ್ನು ಸಿಎಂ ಈ ವೇಳೆ ನೀಡಿದ್ದಾರೆ.