ಬೆಂಗಳೂರು: ರೇಷನ್ ಕಾರ್ಡ್ ಹಂಚಿಕೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಪ್ರಶ್ನಿಸಿದ ಲಂಚ ಮುಕ್ತ ಕರ್ನಾಟಕ ವೇದಿಕೆ ಮುಖಂಡ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ಮೇಲೆ ಕಾಂಗ್ರೆಸ್ ಮುಖಂಡ ಮಾಜಿ ಮೇಯರ್ ಮಂಜುನಾಥ ರೆಡ್ಡಿ ಬೆಂಬಲಿಗರು ಹಲ್ಲೆ ಮಾಡಲು ಯತ್ನಿಸಿದ ಘಟನೆ ಬುಧವಾರದಂದು ನಡೆದಿದೆ.
ಮಡಿವಾಳ ವಾರ್ಡ್ ನಲ್ಲಿರುವ ತಾವರೆಕೆರೆ ಬಿಬಿಎಂಪಿ ಕಚೇರಿಯಲ್ಲಿ ರೇಷನ್ ಕಾರ್ಡನ್ನು ವಿತರಿಸಲಾಗುತ್ತಿತ್ತು. ಆದರೆ ಆ ರೇಷನ್ ಕಾರ್ಡ್ ವಿತರಣೆಯಲ್ಲಿ ಅಕ್ರಮವಿದೆ ಎನ್ನುವ ಮಾಹಿತಿ ಆಧಾರದ ಮೇಲೆ ರವಿಕೃಷ್ಣಾರೆಡ್ಡಿ ತಮ್ಮ ಸಂಘಟನೆಯ ಸದಸ್ಯರೊಂದಿಗೆ ಬಿಬಿಎಂಪಿ ಕಚೇರಿಗೆ ತೆರಳಿದ್ದರು ಅಲ್ಲದೆ ದಾಖಲೆಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು
ಆದರೆ ಇದ್ಯಾವುದಕ್ಕೂ ಗಮನ ನಿಡದೆ ಮಾಜಿ ಮೇಯರ್ ಮಂಜುನಾಥ ರೆಡ್ಡಿ ಮತ್ತು ಅವರ ಬೆಂಬಲಿಗರು, ರವಿಕೃಷ್ಣಾ ರೆಡ್ಡಿಯವರ ಮೊಬೈಲ್ ಕಸಿದುಕೊಂಡು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ಮಧ್ಯೆ ಎರಡು ಬಣಗಳ ನಡುವೆ ಮಾತಿನ ಚಕಾಮಕಿ ನಡೆದು ನಂತರ ಪೊಲೀಸರು ಮಧ್ಯಸ್ತಿಕೆಯಿಂದಾಗಿ ಜಗಳ ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈಗ ಈ ಹಲ್ಲೆಯನ್ನು ಖಂಡಿಸಿ ನಿನ್ನೆ ರಾತ್ರಿಯಿಂದಲೇ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಅಹೋ ರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಈ ಧರಣಿ ಸತ್ಯಾಗ್ರಹಕ್ಕೆ ಜನ ಸಂಗ್ರಾಮ ಪರಿಷತ್ತಿನ ಮುಖಂಡರಾದ ಎಸ್. ಆರ್ ಹಿರೇಮಠ್, ಜನಾನಂದೋಲನಗಳ ಮಹಾಮೈತ್ರಿಯ ಮಾರ್ಗದರ್ಶಕ ಮಂಡಳಿಯ ಸದಸ್ಯರಾದ ಶ್ರೀ ರಾಘವೇಂದ್ರ ಕುಷ್ಟಗಿ ಬೆಂಬಲಿಸಿದ್ದಾರೆ.ಈ ಹೋರಾಟವು ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಮುಂದುವರೆಯಲಿದೆ ಎಂದು ತಿಳಿದು ಬಂದಿದೆ.