ಕಂಡಕ್ಟರ್ ಆತ್ಮಹತ್ಯೆ ಕೇಸ್, ಸರ್ಕಾರದ ಮೇಲೆ ವಿಪಕ್ಷಗಳು ತೀವ್ರ ದಾಳಿ : ಸದನದಲ್ಲಿ ಜಟಾಪಟಿ

ಕೆಎಸ್‌ಆರ್‌ಟಿಸಿ ಚಾಲಕ ಕಂ ನಿರ್ವಾಹಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆದು ಇಡೀ ಸದನ ರಣರಂಗವಾಯಿತು.

Written by - RACHAPPA SUTTUR | Edited by - Krishna N K | Last Updated : Jul 6, 2023, 06:47 PM IST
  • ಕೆಎಸ್‌ಆರ್‌ಟಿಸಿ ಚಾಲಕ ಕಂ ನಿರ್ವಾಹಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ
  • ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿದ ಆಡಳಿತ ಮತ್ತು ಪ್ರತಿಪಕ್ಷಗಳ ಧ್ವನಿ
  • ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ವಿಪಕ್ಷಗಳ ಒತ್ತಾಯ
ಕಂಡಕ್ಟರ್ ಆತ್ಮಹತ್ಯೆ ಕೇಸ್, ಸರ್ಕಾರದ ಮೇಲೆ ವಿಪಕ್ಷಗಳು ತೀವ್ರ ದಾಳಿ : ಸದನದಲ್ಲಿ ಜಟಾಪಟಿ title=

ಬೆಂಗಳೂರು : ಮಂಡ್ಯ ಜಿಲ್ಲೆಯ ನಾಗಮಂಗಲದ ಕೆಎಸ್‌ಆರ್‌ಟಿಸಿ ಚಾಲಕ ಕಂ ನಿರ್ವಾಹಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆದು ಇಡೀ ಸದನ ರಣರಂಗವಾಯಿತು. ಅಲ್ಲದೆ, ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅಲ್ಲಿಯವರೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವ ರಾಯಸ್ವಾಮಿ ರಾಜೀನಾಮೆ ನೀಡಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣೀ ನಡೆಸಿದ್ದರಿಂದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದ ಘಟನೆಯೂ ನಡೆಯಿತು.

ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಪರಸ್ಪರ ವಾದ, ವಾಗ್ವಾದ,ಆರೋಪ-ಪ್ರತ್ಯಾರೋಪ ಮಾಡಿದ್ದಲ್ಲದೆ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದರಿಂದ ಸದನದಲ್ಲಿ ಕೋಲಾಹಲ ವಾತಾವರಣ ನಿರ್ಮಾಣವಾಗಿತ್ತು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಗಮಂಗದಲ್ಲಿ ಕೆಎಸ್ ಆರ್ ಟಿಸಿಯ ಚಾಲಕ ಕಂ ನಿರ್ವಾಹಕ ಜಗದೀಶ್ ಅವರಿಗೆ ಮಾನಸಿಕ ಕಿರುಕುಳ ನೀಡಿ ವರ್ಗಾವಣೆ ಮಾಡಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 

ಇದನ್ನೂ ಓದಿ:ಅವಳಿ ನಗರದಲ್ಲಿ ಅನಧಿಕೃತ ಲೇಔಟ್ ಹೆಚ್ಚಳ ; " ಖರೀದಿದಾರರೇ ಮೋಸ ಹೋಗಬೇಡಿ; ಎಫ್‍ಐಆರ್ ದಾಖಲಿಸಿ"

ಪ್ರಸ್ತುತ ಮೈಸೂರಿನ ಆಸ್ಪತ್ರೆಯೊಂದರಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತ್ಮಹತ್ಯೆ ಯತ್ನಕ್ಕೂ ಮುನ್ನ ತನ್ನ ಈ ಸ್ಥಿತಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿದ್ದಾರೆ. ಈ ಬಗ್ಗೆ ಇದುವರೆಗೂ ಎಫ್ ಐಆರ್ ಹಾಕಿಲ್ಲ. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ತನಿಖೆ ಮುಗಿಯುವವರೆಗೂ ಚಲುವರಾಯಸ್ವಾಮಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. 

ಇದೇ ವಿಚಾರ ಕುರಿತಂತೆ ನಿಲುವಳಿ ಸೂಚನೆ ಮಂಡಿಸಲು ಅನುಮತಿ ನೀಡುವಂತೆ ನೋಟಿಸ್ ನೀಡಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಇದೇ ವೇಳೆ ವಿಷಯ ಪ್ರಸ್ತಾಪಿಸಲು ಸ್ಪೀಕರ್ ಅವಕಾಶ ನೀಡಿದರು. ಮಾತನಾಡಲು ಆರಂಭಿಸಿದ ಕುಮಾರಸ್ವಾಮಿ, ಇದೊಂದು ಗಂಭೀರ ಪ್ರಕರಣ. ಸದನದ ಕಲಾಪಕ್ಕೆ ಅಡ್ಡಿಪಡಿಸುವುದು ನಮ್ಮ ಉದ್ದೇಶ ಅಲ್ಲ. ಸರ್ಕಾರ ರಚನೆಯಾಗಿ ಐವತ್ತು ದಿನಗಳಾಗಿಲ್ಲ. ಈಗ ಹೋಗುತ್ತಿರುವ ಸರ್ಕಾರ ಮುನ್ನಡೆದರೆ ಶೋಭೆ ತರುವುದಿಲ್ಲ. ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಯಾಗಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಕೆಲವು ಗ್ರಾಮ ಪಂಚಾಯಿತಿ ಸದಸ್ಯರಿಗೆ ಬೆದರಿಕೆವೊಡ್ಡಿ ಆಡಳಿತ ಪಕ್ಷದವರು ಬೆಂಬಲ ಪಡೆಯಲು ಒತ್ತಡದ ರಾಜಕಾರಣ ಮಾಡುತ್ತಿದ್ದಾರೆ. ಚಾಲಕನ ಆತ್ಮಹತ್ಯೆ ಯತ್ನವೂ ಇದಕ್ಕೆ ಸಂಬಂಧಿಸಿದ್ದಾಗಿದೆ ಎಂದು ದೂರಿದರು.

ಇದನ್ನೂ ಓದಿ:"ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರವಿಲ್ಲದೆ ಹತಾಶರಾಗಿದ್ದಾರೆ"-ಸಿಎಂ ಸಿದ್ದರಾಮಯ್ಯ

ಚಾಲಕ ಜಗದೀಶ್ ಪತ್ನಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದು, ಅವರ ಬೆಂಬಲ ಪಡೆಯುವ ಸಲುವಾಗಿ ಅವರ ಮೇಲೆ ಒತ್ತಡ ಹೇರಿದ್ದು, ಇದರ ಹಿನ್ನೆಲೆಯಲ್ಲಿ ಚಾಲಕನಿಗೆ ವರ್ಗಾವಣೆ ಬೆದರಿಕೆ ಒಡ್ಡಲಾಗಿದೆ. ಹೆಣ್ಣುಮಗಳ ಮೇಲೆ ಅನುಚಿತ ವರ್ತನೆ ಮಾಡಿದ ದೂರಿನ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ ಎಂಬ ಹೇಳಿಕೆಗಳಲ್ಲಿ  ಸತ್ಯಾಂಶವಿಲ್ಲ. ಮೇಲ್ನೋಟಕ್ಕೆ ಇದು ಒತ್ತಡದ ರಾಜಕಾರಣವಾಗಿದೆ. ಈ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆದಿವೆ ಎಂದು ಕುಮಾರಸ್ವಾಮಿ ಅರೋಪಿಸಿದರು. 

ದಿಕ್ಕು ತಪ್ಪಿದ ಚರ್ಚೆ, ಕಾವೇರಿದ ವಾತಾವರಣ : ಈ ಹಂತದಲ್ಲಿ ವಿಷಯ ರಾಜಕಾರಣದತ್ತ ತಿರುಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಡಿವೈಎಸ್ಪಿ ಗಣಪತಿ, ಕಲ್ಲಪ್ಪ ಹಂಡಿಭಾಗ್, ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣಗಳ ವಿಚಾರ ಸದನದಲ್ಲಿ ಪ್ರಸ್ತಾಪವಾಯಿತು. 

ಹೆಚ್ ಡಿಕೆ-ಸಚಿವ ಜಾರ್ಚ್ ಮಧ್ಯೆ ವಾಗ್ವಾದ : ಕುಮಾರಸ್ವಾಮಿಯವರು ಮಾತು ಮುಂದುವರಿಸಿ, ಸಚಿವರಾಗಿದ್ದ ಈಶ್ವರಪ್ಪ ಅವರ ಮೇಲೆ ಆರೋಪ ಹೊರಿಸಿ ವಾಟ್ಸಾಪ್ ಸಂದೇಶ ನೀಡಿದ್ದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ನವರು ಹೋರಾಟ ಮಾಡಿದ್ದರು. 

ಇದನ್ನೂ ಓದಿ:ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಶ್ವಾನಗಳದ್ದೇ ದರ್ಬಾರ್..! ಬೌಬೌ.. ಸೌಂಡ್ಸ್‌ಗೆ ರೋಗಿಗಳ ಬೇಸರ

ಆತ್ಮಹತ್ಯೆಗೆ ಯತ್ನಿಸಿರುವ ಜಗದೀಶ್ ಎಂಬ ವ್ಯಕ್ತಿ ನಾಗಮಂಗಲದ ಶಾಸಕರ ಮೇಲೆ ಆರೋಪ ಹೊರಿಸಿ ನೋಟೊಂದನ್ನು ಬರೆದಿದ್ದಾರೆ ಎನ್ನುತ್ತಿದ್ದಂತೆ ಮಧ್ಯಪ್ರವೇಶಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, ಡಿವೈಎಸ್ಪಿ ಗಣಪತಿ, ಐಎಸ್ ಅಕಾರಿ ಡಿ.ಕೆ.ರವಿ ಪ್ರಕರಣವನ್ನು ನಾವು ಸಿಬಿಐಗೆ ವಹಿಸಿದ್ದೆವು.

ಸಿಬಿಐ ವರದಿ ಬಂದ ನಂತರ ತಪ್ಪಾಗಿದೆ ಎಂದು ಒಂದು ಮಾತನ್ನೂ ಹೇಳಲಿಲ್ಲ ಎಂದು ಕುಮಾರಸ್ವಾಮಿಯವರನ್ನು ಛೇಡಿಸಿ ಇಂಧನ ಇಲಾಖೆಯಲ್ಲಿ ವರ್ಗಾವಣೆಗೆ 10 ಕೋಟಿ ರೂ. ನೀಡಬೇಕೆಂಬ ಆರೋಪ ಮಾಡಿ ಪೆನ್ಡ್ರೈವ್ ಪ್ರದರ್ಶನ ಮಾಡಿದ್ದೀರಿ. ಗಣಪತಿ ವಿಚಾರದಲ್ಲೂ ಇದೇ ರೀತಿ ಆರೋಪ ಮಾಡಿದ್ದೀರಿ ಎಂದು ಏರಿದ ದನಿಯಲ್ಲಿ ಮಾತನಾಡಿದರು.

ಅಷ್ಟೇ ತೀಕ್ಷ್ಣವಾಗಿ ಕುಮಾರಸ್ವಾಮಿಯವರು ನಿಮ್ಮ ಹಣೆಬರಹ ಗೊತ್ತು. ಸುಮ್ಮನೆ ಹೇಳುವುದಿಲ್ಲ. ನಿಮಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುವ ತಾಕತ್ತು ಇದೆಯೇ ಎಂದು ಪ್ರಶ್ನಿಸಿದರು. ನಿಮ್ಮ ಬಳಿ ದಾಖಲೆ ಸಾಕ್ಷ್ಯ ಇದ್ದರೆ ಪೆನ್ಡ್ರೈವ್ ಅನ್ನು ಸಭಾಧ್ಯಕ್ಷರಿಗೆ ಕೊಡಿ ಗಾಳಿಯಲ್ಲಿ ಗುಂಡು ಹೊಡೆಯಬೇಡಿ ಎಂದು ಜಾರ್ಜ್ ತಿರುಗೇಟು ನೀಡಿದರು.

ಇದನ್ನೂ ಓದಿ:  ಅಧಿಕಾರವಿಲ್ಲದೆ ಹತಾಶರಾಗಿರುವ ಕುಮಾರಸ್ವಾಮಿ ಆರೋಪ ಹಿಟ್ ಅಂಡ್ ರನ್ ಇದ್ದಂತೆ: ಸಿದ್ದರಾಮಯ್ಯ

ಆಗ ಕುಮಾರಸ್ವಾಮಿ ಯಾವ ಮಂತ್ರಿಯ ಹೆಸರೂ ಹೇಳಿಲ್ಲ. ಸಭಾಧ್ಯಕ್ಷರು ಒಪ್ಪುವುದಾದರೆ ಸದನದಲ್ಲೇ ಆಡಿಯೋ ಹಾಕಲಿ. 224 ಸದಸ್ಯರು ಅದನ್ನು ಗಮನಿಸಲಿ. ಇಂಧನ ಇಲಾಖೆ ವರ್ಗಾವಣೆ  ಹೇಗಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಆಕ್ರೋಶಭರಿತವಾಗಿ ಹೇಳಿದರು. ಈ ನಡುವೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸಾಕ್ಷ್ಯ ಇದ್ದರೂ ಮುಚ್ಚಿಡುವುದು ಅಪರಾಧ. ನೀವು ಸಾಕ್ಷ್ಯವನ್ನು ಒದಗಿಸಬೇಕು ಎಂದರು.

ಮತ್ತೆ ಮಾತನಾಡಿದ ಕುಮಾರಸ್ವಾಮಿ, ವರ್ಗಾವಣೆಗೆ ಸಂಬಂಸಿದಂತೆ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ಕೊಡಲಿ ಎಂದು ನಿಮ್ಮ ಉಪಮುಖ್ಯಮಂತ್ರಿಯವರೇ ಹೇಳಿಲ್ಲವೇ? ನಾನು ಸಾಕ್ಷ್ಯ ಮುಚ್ಚಿಡುತ್ತಿದ್ದರೆ ನೀವು ಕೇಸು ಹಾಕಿಸಿ. ಯಾರು ಸತ್ತರೂ ಪರವಾಗಿಲ್ಲ, ಯಾರು ಬೇಕಾದರೂ ಆತ್ಮಹತ್ಯೆ ಮಾಡಿಕೊಳ್ಳಲಿ ಎಂಬುದು ನಿಮ್ಮ ಧೋರಣೆ ಎಂದು ಆರೋಪಿಸಿದರು.

ಈ ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕುಮಾರಸ್ವಾಮಿ ಅವರು ಪ್ರಸ್ತಾಪಿಸಿರುವ ವಿಷಯ ತನಿಖೆಯಾಗಬೇಕೆಂಬುದು ನಮ್ಮ ಉದ್ದೇಶ. ಸತ್ಯಾಂಶ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು. ಎಂ.ಬಿ.ಪಾಟೀಲ್ ಮಾತನಾಡಿ, ಈ ಹಂತದಲ್ಲಿ ಆಡಳಿತ ಮತ್ತು ವಿರೋಧಪಕ್ಷಗಳ ಸದಸ್ಯರ ನಡುವೆ ಏರಿದ ದನಿಯಲ್ಲಿ ವಾಗ್ವಾದ ನಡೆದು ಸದನದಲ್ಲಿ ಗದ್ದಲ, ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.

ಇದನ್ನೂ ಓದಿ: ಗಣಿ ಜಿಲ್ಲೆಗೆ ದೊರೆಯುವುದೇ ವಿಶೇಷ ಉಡುಗೊರೆ..ರಾಜ್ಯ ಬಜೆಟ್ ಮೇಲೆ ಹೆಚ್ಚಿದ ಜಿಲ್ಲೆಯ ಜನರ ನಿರೀಕ್ಷೆ!

ಯತ್ನಾಳ್ ಕಿಡಿ : ಬಿಜೆಪಿಯ ಹಿರಿಯ ಸದಸ್ಯ ಬಸನಗೌಡ ಯತ್ನಾಳ್ ಎದ್ದು ನಿಂತು ಮಾತನಾಡಲು ಮುಂದಾದಾಗ ಎಂ.ಬಿ.ಪಾಟೀಲ್ ಅವರು ಮುಖ್ಯಮಂತ್ರಿ ಹುದ್ದೆಗೆ 2,400 ಕೋಟಿ ರೂ. ಕೊಡಬೇಕೆಂದು ನೀವೇ ಹೇಳಿದ್ದೀರಿ, ಉಲ್ಟಾ ಹೊಡೆಯಬೇಡಿ ಎಂದು ಹೇಳಿದರು. ಇದು ಅವರನ್ನು ಸಿಟ್ಟಿಗೆಬ್ಬಿಸಿತು. ಯತ್ನಾಳ್ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಕೆಲ ಕಾಲ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಆಗ ಜಾರ್ಜ್ ಅವರು ನಿಮಗೆ ಇನ್ನೂ ವಿರೋಧ ಪಕ್ಷದ ನಾಯಕರು ಸಿಕ್ಕಿಲ್ಲ. ಕುಮಾರಸ್ವಾಮಿಯವರನ್ನೇ ಕೂರಿಸಿಕೊಳ್ಳಿ ಎಂದರು. ಆಗ ತೀವ್ರ ಆಕ್ಷೇಪ ಬಿಜೆಪಿ ಸದಸ್ಯರಿಂದ ವ್ಯಕ್ತವಾಗಿ ಯತ್ನಾಳ್ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ವಿರೋಧಪಕ್ಷದವರ ದನಿ ಅಡಗಿಸಬಾರದು. ಹೆಚ್ಚು ಅವಕಾಶ ಕೊಡಬೇಕು. ಮುಖ್ಯಮಂತ್ರಿಯವರ ಆಡಿಯೋವನ್ನು ಸಿಬಿಐಗೆ ಕೊಡಬೇಕು ಇಲ್ಲವೇ ಜಗತ್ತಿನ ಯಾವುದೇ ತನಿಖೆ ಮಾಡಿಸಿ ಎಂದರು. ಆಗ ಕಾಂಗ್ರೆಸ್ನ ಹಲವು ಸದಸ್ಯರು ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿಯ ಹಿರಿಯ ಸದಸ್ಯರಾದ ಸಿ.ಸಿ.ಪಾಟೀಲ್ ಮತ್ತು ಅಶ್ವತ್ಥನಾರಾಯಣ್ ಅವರು ಯತ್ನಾಳ್ ಅವರನ್ನು ಕೂರಿಸಿದರು. ಒಂದು ಹಂತದಲ್ಲಿ ಕುಮಾರಸ್ವಾಮಿಯವರು ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ಆರೋಪದ ಸಾಕ್ಷ್ಯವನ್ನು ಎಲ್ಲಿ ಒದಗಿಸಿದ್ದೀರಿ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿಯವರು ಮಾತನಾಡುವ ವೇಳೆ ಕಾಂಗ್ರೆಸ್ ಶಾಸಕರು ಪದೇ ಪದೇ ಅಡ್ಡಿಪಡಿಸುತ್ತಿದ್ದರು. ಆಗ ಬಿಜೆಪಿಯ ಸುನಿಲ್ಕುಮಾರ್ ಎದ್ದುನಿಂತು ಇದು ಕಮಿಷನ್ ಸರ್ಕಾರ, ಕೊಲೆಗಡುಕ ಸರ್ಕಾರ ಎಂದು ಗಂಭೀರ ಆರೋಪ ಮಾಡಿದರು.

ಇದನ್ನು ವಿರೋಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಲ್ಲದೆ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಎದುರಾಗಿ ಬಿಜೆಪಿ ಸದಸ್ಯರು ಕೂಡ ಎದ್ದು ನಿಂತು ಘೋಷಣೆ ಕೂಗಿದ್ದಲ್ಲದೆ ಕಾಂಗ್ರೆಸ್ ಶಾಸಕರ ಧೋರಣೆಗಳನ್ನು ವಿರೋಸಿ ಸದಸ್ಯರ ಮುಂದಿನ ಭಾವಿಗಿಳಿದು ಧರಣಿ ನಡೆಸಿದರು. ಈ ಹಂತದಲ್ಲಿ ಮತ್ತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗದ್ದಲ, ಕೋಲಾಹಲ ಹೆಚ್ಚಾಗಿದ್ದರಿಂದ ಸಭಾಧ್ಯಕ್ಷರು ಭೋಜನಾ ವಿರಾಮಕ್ಕೆ ಕಲಾಪವನ್ನು ಮುಂದೂಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News