ಬೆಂಗಳೂರು: ಇಂದಿನಿಂದ 15 ನೇ ವಿಧಾನಸಭೆ ಜಂಟಿ ಅಧಿವೇಶನ ಪ್ರಾರಂಭವಾಗಲಿದ್ದು, ಮಾರ್ಚ್ 2 ರಿಂದ 31 ರ ವರೆಗೆ ಅಧಿವೇಶನ ನಡೆಯಲಿದೆ. ಇಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಭಾಷಣ ಮಾಡಲಿದ್ದಾರೆ. ನಂತರ ಇಂದೇ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತದೆ.
ನಾಳೆಯಿಂದ ಬುಧವಾರದವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದ್ದು, ಮಾರ್ಚ್ 5ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020-21ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಬಳಿಕೆ ಮಾರ್ಚ್ 31ರವೆರೆಗೆ ಬಜೆಟ್ ಮೇಲೆ ಚರ್ಚೆ ನಡೆಯಲಿದೆ.
ಸ್ಪೀಕರ್ ಸೂಚನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ:
ಕೆಲವು ದಿನಗಳ ಹಿಂದೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜ್ಯಪಾಲರ ಭಾಷಣದ ವೇಳೆ ಯಾರೂ ಗದ್ದಲ ಸೃಷ್ಟಿಸಬಾರರು, ಪ್ರತಿಭಟನೆ ಮಾಡಬಾರದು ಮತ್ತು ಭಾಷಣದ ವೇಳೆ ಮಧ್ಯ ಮಾತನಾಡಬಾರದು. ಹೀಗೆ ಮಾಡುವವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಕಲಾಪದಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಸ್ಪೀಕರ್ ಅವರ ಈ ಸೂಚನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಖಾಸಗಿ ಚಾನಲ್‌ಗಳ ಕ್ಯಾಮರಾಗಳಿಗೆ ವಿಧಾನಸಭಾ ಪ್ರವೇಶ ನಿಷೇಧ:
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ಖಾಸಗಿ ಚಾನಲ್‌ಗಳ ಕ್ಯಾಮರಾಗಳು ವಿಧಾನಸಭೆ ಪ್ರವೇಶಕ್ಕೆ ನಿರ್ಬಂಧ ಹೇರಿ ಮೊದಲ ಬಾರಿ ಹೊಸ ಮಾದರಿಯನ್ನು ಜಾರಿಗೆ ತಂದಿತು. ಇದೀಗ ಅದು ಮುಂದುವರೆಯಲಿದ್ದು, ವಿಧಾನಸಭೆ ಕಲಾಪದ ನೇರ ಪ್ರಸಾರಕ್ಕೆ ಖಾಸಗಿ ಚಾನಲ್‌ಗಳ ಕ್ಯಾಮರಾಗಳಿಗೆ ನಿಷೇಧ ಹೇರಲಾಗಿದೆ. ಇದಲ್ಲದೆ ಮುದ್ರಣ ಮಾಧ್ಯಮದ ಛಾಯಾಗ್ರಾಹಕರಿಗೂ ನಿಷೇಧ ಹಾಕಲಾಗಿದ್ದು, ಸದನದ ಕಲಾಪಗಳ ಛಾಯಾಚಿತ್ರಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.
ಟಿವಿ ಚಾನಲ್‌ಗಳಿಗೆ ದೂರದರ್ಶನದ ಮೂಲಕ ಔಟ್‌ಪುಟ್ ಕೊಡಲು ಹಾಗೂ ವಾರ್ತಾ ಇಲಾಖೆಯಿಂದ ಮುದ್ರಣ ಮಾಧ್ಯಮಗಳಿಗೆ ಛಾಯಾಚಿತ್ರ ಒದಗಿಸಲು ತೀರ್ಮಾನಿಸಿದೆ.