ಶ್ರೀರಾಮ, ಸೀತಾಮಾತೆಗೆ ಅವಮಾನ: ಡಿಕೆಶಿ ರಾಜೀನಾಮೆಗೆ ಬಿಜೆಪಿ ಆಗ್ರಹ

ರಾಮಾಯಣಕ್ಕೆ ಅಪಮಾನ ಮಾಡಿದ ಶೈಲಜಾ ಅಮರನಾಥ್ ರಕ್ಷಣೆ ಮಾಡುವುದು ನಿಮ್ಮ ಆದ್ಯತೆಯೇ? ಹಿಂದುಗಳ ಭಾವನೆಗೆ ಧಕ್ಕೆ ತಂದ ನೀವು ಮೊದಲು ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಆಗ್ರಹಿಸಿದೆ.

Written by - Zee Kannada News Desk | Last Updated : Jun 19, 2022, 01:59 PM IST
  • ರಾಮ-ಸೀತೆಗೆ ಅಪಮಾನ ಮಾಡಿದ ಕಾಂಗ್ರೆಸ್ ಮುಖಂಡೆ ಶೈಲಜಾ ಅಮರನಾಥ್ ವಿರುದ್ಧ ಬಿಜೆಪಿ ಆಕ್ರೋಶ
  • ಹಿಂದೂ ವಿರೋಧಿ ಡಿ.ಕೆ.ಶಿವಕುಮಾರ್ ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಟೀಕಪ್ರಹಾರ
  • ಡಿಕೆಶಿಯವರೇ ನೀವು ಕೂಡ ಸಿದ್ದರಾಮಯ್ಯ ಜಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದೀರಾ? ಎಂದು ಪ್ರಶ್ನಿಸಿದ ಬಿಜೆಪಿ
ಶ್ರೀರಾಮ, ಸೀತಾಮಾತೆಗೆ ಅವಮಾನ: ಡಿಕೆಶಿ ರಾಜೀನಾಮೆಗೆ ಬಿಜೆಪಿ ಆಗ್ರಹ title=
ಡಿಕೆಶಿ ರಾಜೀನಾಮೆಗೆ ಬಿಜೆಪಿ ಆಗ್ರಹ

ಬೆಂಗಳೂರು: ಕ್ಲಬ್‌ಹೌಸ್‌ನಲ್ಲಿ ಶ್ರೀರಾಮ, ಸೀತಾಮಾತೆಗೆ ಕಾಂಗ್ರೆಸ್‌ ಮುಖಂಡೆ ಶೈಲಜಾ ಅಮರನಾಥ್ ಅವಮಾನ ಮಾಡಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ. #ResignDKS ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

‘ಡಿಕೆಶಿಯವರೇ ನೀವು ಕೂಡ ಸಿದ್ದರಾಮಯ್ಯ ಜಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದೀರಾ? ಹಿಂದೂ ದೇವ-ದೇವತೆ, ರಾಮಾಯಣಕ್ಕೆ ಅಪಮಾನ ಮಾಡಿದ ಶೈಲಜಾ ಅಮರನಾಥ್‌ಗೆ ಆಶ್ರಯ ನೀಡುವ ಮೂಲಕ ನಿಮ್ಮ ಅಂತರಾಳದಲ್ಲಿ ಇರುವ ಹಿಂದು ವಿರೋಧಿ ನೀತಿಯನ್ನು ಈಗ ಬಹಿರಂಗಪಡಿಸಿದ್ದೀರಿ. ಸಿದ್ದರಾಮಯ್ಯ ಒಬ್ಬ ಹಿಂದು ವಿರೋಧಿ. ನೀವೂ ಅವರಂತೆಯೇ?’ ಎಂದು ಪ್ರಶ್ನಿಸಿದೆ.

‘ಸೀತಾಮಾತೆಗೆ ಅಪಮಾನ ಮಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಪಾದಸೇವೆ ಮಾಡುವುದಕ್ಕೆ ನಿಮಗೆ ಎಲ್ಲಿಲ್ಲದ ಖುಷಿ. ಅದೇ ರೀತಿ ರಾಮಾಯಣಕ್ಕೆ ಅಪಮಾನ ಮಾಡಿದ ಶೈಲಜಾ ಅಮರನಾಥ್ ರಕ್ಷಣೆ ಮಾಡುವುದು ನಿಮ್ಮ ಆದ್ಯತೆಯೇ? ಹಿಂದುಗಳ ಭಾವನೆಗೆ ಧಕ್ಕೆ ತಂದ ನೀವು ಮೊದಲು ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಆಗ್ರಹಿಸಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ತಾಯಿ ಜನ್ಮದಿನ: ನಾಗಮಾರಪಳ್ಳಿ ಫೌಂಡೇಶನ್‌ನಿಂದ ವೃದ್ಧಾಶ್ರಮಕ್ಕೆ ಕೊಡುಗೆ

‘ಕಾಂಗ್ರೆಸ್ ಪಕ್ಷದ ವಂಶವಾಹಿನಿಯಲ್ಲಿ ಹಿಂದು ದಮನ ನೀತಿ ಅಡಗಿದೆಯೇ? ರಾಮ ಹಾಗೂ ರಾಮಸೇತು ಅಸ್ತಿತ್ವವನ್ನು ಕಾಂಗ್ರೆಸ್ ನಿರಾಕರಿಸಿತ್ತು. ಈಗ ರಾಮಾಯಣಕ್ಕೆ ಅಪಮಾನ ಮಾಡಿ ದಕ್ಕಿಸಿಕೊಳ್ಳಲು ಹೊರಟಿದ್ದೀರಾ? ಒಂದು ಸಮುದಾಯದ ಮತ ಗಳಿಕೆಗಾಗಿ ಈ ಮಟ್ಟದ ಓಲೈಕೆಯೇ? ಕರಾವಳಿ ಭಾಗದಲ್ಲಿ ಕೋಮು-ಸೌಹಾರ್ದತೆ ಕದಡುವುದಕ್ಕೆ ಡಿಕೆಶಿ ದಂಡು ಸಂಚು ರೂಪಿಸುತ್ತಿದೆ. ನಿಮ್ಮ ಆಶಾಡಭೂತಿತನ‌ ಇನ್ನು ನಡೆಯದು #ಹಿಂದೂವಿರೋಧಿಡಿಕೆಶಿ ಅವರೇ ಮೊದಲು ರಾಜೀನಾಮೆ ನೀಡಿ’ ಎಂದು ಬಿಜೆಪಿ ಕಿಡಿಕಾರಿದೆ.

‘ಅಧಿಕಾರದಲ್ಲಿದ್ದಾಗ ರಾಮನ ಅಸ್ತಿತ್ವಕ್ಕೆ ಪುರಾವೆ ಇಲ್ಲವೆಂದವರು, ಅಧಿಕಾರದಲ್ಲಿ ಇಲ್ಲದಾಗ ರಾಮ ಮಂದಿರ ನಾವೇ ಕಟ್ಟಿಸಬೇಕೆಂದುಕೊಂಡಿದ್ದೇವೆಂದು ಹೇಳಿದ್ದರು. ರಾಮನನ್ನು ರಾಜಕೀಯಕ್ಕೆ ಬಳಸಿಕೊಳ್ಳುವಷ್ಟು ನೀಚ ರಾಜಕಾರಣ ಮಾಡುವವರು ಎಂದರೆ ಅದು ಕಾಂಗ್ರೆಸ್ಸಿಗರು. ಚುನಾವಣಾ ಹಿಂದು ರಾಹುಲ್ ಗಾಂಧಿಯವರಿಗೆ ಇಂದು ಜನ್ಮ ದಿನದ ಸಂಭ್ರಮ. ಹಿಂದೂಗಳ ಭಾವನೆಗೆ ದಕ್ಕೆ ತರುವ ಇಂಥ ಕಾರ್ಯಕ್ರಮಗಳನ್ನು‌ ರಾಗಾ ಹುಟ್ಟುಹಬ್ಬದ ಉಡುಗೊರೆಯ ರೂಪದಲ್ಲಿ ಕಾಂಗ್ರೆಸ್ ಪ್ರಾಯೋಜಿಸುತ್ತಿದೆಯೇ? ಪ್ರಭು ಶ್ರೀರಾಮಚಂದ್ರನ ಮೇಲೆ ಗೌರವ ಇದ್ದರೆ ಡಿಕೆಶಿ ರಾಜೀನಾಮೆ ಪಡೆಯಿರಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಸೋನಿಯಾ ಗಾಂಧಿ ಓಲೈಕೆಗಾಗಿ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ, ಮತದಾರ "ಬಾಂಧವರ" ಪರವಾಗಿ ಗಲಭೆಗಳ ಸಮರ್ಥನೆ, ಪಠ್ಯಪುಸ್ತಕ ಹರಿದು ಶಾರದಾ ಮಾತೆಗೆ ಅಪಮಾನ, ಈಗ ಶೈಲಜಾ ಹಾಗೂ ಕಾಂಗ್ರೆಸ್ ಐಟಿ ಸೆಲ್ ಮೂಲಕ ಹಿಂದೂ ಧರ್ಮಕ್ಕೆ ಅಪಮಾನ. ಡಿಕೆಶಿಯವರೇ ಚುನಾವಣಾ ವರ್ಷದಲ್ಲಿ ನಿಮ್ಮ ಅಸಲಿಯತ್ತು ಬಯಲಾಗುತ್ತಿದೆ. ಡಿಕೆಶಿಯವರೇ ಅನ್ಯ ಧರ್ಮದವರನ್ನು ಅಪಮಾನಿಸಿದ್ದರೆ ನೀವು ಸಹಿಸಿಕೊಳ್ಳುತ್ತಿದ್ದಿರಾ? ಹಿಂದೂಗಳ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ಕಾಂಗ್ರೆಸ್ ಪದಾಧಿಕಾರಿ ಧಕ್ಕೆ ತಂದರೂ ದಿವ್ಯ ಮೌನವೇಕೆ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: "ನಮ್ಮ ಸಂವಿಧಾನದ ರಕ್ಷಣೆಗೆ ಎಲ್ಲರೂ ಒಗ್ಗೂಡಿ ಹೋರಾಟ ಮಾಡೋಣ"

‘ಡಿಕೆಶಿಯವರೇ ನೀವು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಕಾಂಗ್ರೆಸ್ ಪಕ್ಷದ ನಾನಾ ಘಟಕಗಳಿಗೆ ಎರಡು ವರ್ಗದ ಜನರನ್ನು ಮಾತ್ರ ನೇಮಕ ಮಾಡಿದ್ದೀರಿ. ಮೊದಲನೆಯದು ಶೈಲಜಾ ಅಮರನಾಥ್ ಅವರಂಥ ಹಿಂದು ವಿರೋಧಿಗಳು. ಎರಡನೆಯದು ನಲಪಾಡ್ ಅವರಂತಹ ರೌಡಿಗಳು. ಇಂಥ ಆಯ್ಕೆಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ’ ಎಂದು ಡಿಕೆಶಿಗೆ ಬಿಜೆಪಿ ಒತ್ತಾಯಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News