Kempegowda Jayanti 2023: "ನಾನು 6ನೇ ವಯಸ್ಸಿಗೆ ಶಿಕ್ಷಣ ಪಡೆಯಲು ನಮ್ಮೂರಿನಿಂದ ಬೆಂಗಳೂರಿಗೆ ಬಂದೆ. ಇಲ್ಲಿನ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸೇರಿ ನನ್ನ ವಿದ್ಯಾಭ್ಯಾಸ ಆರಂಭಿಸಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಕೆಂಪೇಗೌಡರು ಕಟ್ಟಿದ ಪ್ರದೇಶ. ನನಗೂ ಬೆಂಗಳೂರಿಗೂ ಇರುವ ಸಂಬಂಧದ ಇತಿಹಾಸದ ಬಗ್ಗೆ ಅಶ್ವತ್ ನಾರಾಯಣ ಅವರಿಗೆ ಗೊತ್ತಿಲ್ಲ, ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಮೇಖ್ರಿ ವೃತ್ತದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ತಮಿಳುನಾಡಿನ ಗಡಿ ಭಾಗದಲ್ಲಿ ಸಂಗಮದ ಬಳಿ ಕೆಂಪೇಗೌಡರ ಕೋಟೆ ಇದೆ. ಅದರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆ ಕೋಟೆ ಸಮೀಪ ನಿಜಲಿಂಗಪ್ಪ ಅವರ ಮನೆ ಪಕ್ಕ ವೀರೇಂದ್ರ ಪಾಟೀಲ್ ಅವರ ಮನೆ ಇದೆ. ಅದರ ಪಕ್ಕದಲ್ಲಿ ನನ್ನ ತಂದೆ ದೊಡ್ಡಹಾಲಹಳ್ಳಿ ಕೆಂಪೇಗೌಡರ ಮನೆ ಇದೆ. ಇತ್ತೀಚೆಗೆ ಅದನ್ನು ಮಾರಿದ್ದೇನೆ. ಇದು ನನಗೂ ಕೆಂಪೇಗೌಡ ಕಟ್ಟಿದ ಬೆಂಗಳೂರಿಗೆ ಇರುವ ಸಂಬಂಧ.
ನನಗೂ ಬೆಂಗಳೂರಿಗೂ ಇರುವ ಸಂಬಂಧದ ಇತಿಹಾಸದ ಬಗ್ಗೆ ಡಾ ಸಿ. ಎನ್. ಅಶ್ವತ್ ನಾರಾಯಣ ಅವರಿಗೆ ಗೊತ್ತಿಲ್ಲ, ಅದಕ್ಕೆ ಅವರು ಮಾತನಾಡುತ್ತಾರೆ. ನನಗೂ ಬೆಂಗಳೂರಿಗೂ ಇರುವ ಸಂಬಂಧದ ಬಗ್ಗೆ ಅವರು ತಿಳಿದುಕೊಳ್ಳಲಿ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡ ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಶ್ವತ್ ನಾರಾಯಣ ಅವರಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ- ಜಯದೇವ ಆಸ್ಪತ್ರೆ, ನಿತಿನ್ ಕಾಮತ್, ಅದಿತಿ ಅಶೋಕ್ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತರು
ಉಳಿದಂತೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಹಿತ ಪ್ರಮುಖಾಂಶಗಳು ಈ ಕೆಳಕಂಡಂತಿವೆ:
ಇಂದು ನಾವು ಕೆಂಪೇಗೌಡ ಜಯಂತಿ ಆಚರಿಸುತ್ತಿದ್ದೇವೆ. ನಮ್ಮ ಸರ್ಕಾರ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನಿಸಿದಾಗ ಯಾವ ದಿನ ಜಯಂತಿ ಆಚರಿಸಬೇಕು ಎಂಬುದರ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಆಗ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ, ಇತಿಹಾಸ ತಜ್ಞರನ್ನು ಒಳಗೊಂಡಂತೆ ಸಮಿತಿ ರಚಿಸಲಾಯಿತು. ಈ ಸಮಿತಿ ಅಧ್ಯಯನ ಮಾಡಿ ಜೂನ್ 27ರಂದು ಕೆಂಪೇಗೌಡ ಜಯಂತಿ ಎಂದು ತೀರ್ಮಾನಿಸಿತು. ಅಂದಿನಿಂದ ಸರ್ಕಾರ ಜೂನ್ 27ರಂದು ಕೆಂಪೇಗೌಡ ಜಯಂತಿ ಆಚರಣೆ ಮಾಡಿಕೊಂಡು ಬರುತ್ತಿದೆ.
ಅಶೋಕ್ ಅವರು ಮುಂದಾಳತ್ವದಲ್ಲಿ ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನಿಸಲಾಗಿತ್ತು. ಇದನ್ನು ಗಮನದಲ್ಲಿ ಇಟ್ಟುಕೊಂಡು ಈ ಕೆಂಪೇಗೌಡ ಜಯಂತಿ ಆಚರಣೆಯನ್ನ ರಾಜ್ಯಕ್ಕೆ ವಿಸ್ತರಿಸಿ, ರಾಜ್ಯದ ಎಲ್ಲೆಡೆ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನಿಸಿದೆವು.
ಇಂದು ಬೆಂಗಳೂರಿನಲ್ಲಿ ಹಾಗೂ ಹಾಸನದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯುತ್ತಿದೆ.ಕೆಂಪೇಗೌಡ ಪ್ರಾಧಿಕಾರ ಸಭೆಯಲ್ಲಿ 75% ಗಿಂತ ಹೆಚ್ಚು ಒಕ್ಕಲಿಗರು ಇದ್ದಾರೆ. ಇದನ್ನು ನೋಡಿ ನಾಚಿಕೆ ಆಯಿತು.
ಇದನ್ನೂ ಓದಿ- 10 ಕೆಜಿ ಅಲ್ಲ 6 ಕೆಜಿ ಅಕ್ಕಿ ವಿತರಣೆಗೂ ಸರ್ವರ್ ಡೌನ್ ಡೌನ್ !
ಕೆಂಪೇಗೌಡರು ಸಮಾಜದಲ್ಲಿ ಎಲ್ಲಾ ವರ್ಗದವರಿಗೆ ಸ್ಥಾನಮಾನ ಸಿಗಲು ಶ್ರಮಿಸಿದ್ದಾರೆ!
ಕೆಂಪೇಗೌಡ ಯಾವತ್ತೂ ಒಂದು ಸಮುದಾಯಕ್ಕೆ ಸೇರಿದವರಲ್ಲ. ಎಲ್ಲಾ ಜಾತಿ ಹಾಗೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ನಾವು ಹುಟ್ಟುವಾಗ ಇಂತಹ ಜಾತಿಯಲ್ಲಿ ಹುಟ್ಟುವ ಅರ್ಜಿ ಹಾಕುವುದಿಲ್ಲ. ನಮ್ಮ ತಂದೆ ತಾಯಿ ಜಾತಿ ಧರ್ಮ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಕೆಂಪೇಗೌಡರ ಆಚಾರ ವಿಚಾರ ಜಾತಿ ಮೇಲೆ ನಿಂತಿರಲಿಲ್ಲ. ಅವರು ಜಾತಿ ಮೇಲೆ ಕೆಲಸ ಮಾಡಿದ್ದರೆ ಬೆಂಗಳೂರಿನಲ್ಲಿ 52 ವಿವಿಧ ಸಮುದಾಯಗಳ ಪೇಟೆಗಳು ಆಗುತ್ತಿರಲಿಲ್ಲ. ಕೆಂಪೇಗೌಡರು ಸಮಾಜದಲ್ಲಿ ಎಲ್ಲಾ ವರ್ಗದವರಿಗೆ ಸ್ಥಾನಮಾನ ಸಿಗಲು ಶ್ರಮಿಸಿದ್ದಾರೆ. ಇಂದು ನಾವು ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ಮೂವರು ಮಹನೀಯರನ್ನು ಸ್ಮರಿಸಬೇಕು ಅದು ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಹಾಗೂ ಎಸ್.ಎಂ ಕೃಷ್ಣ ಎಂದು ತಿಳಿಸಿದರು.
ಇವರು ಕಟ್ಟಿರುವ ಬೆಂಗಳೂರನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. ಕೆಂಪೇಗೌಡರ ಸ್ಥಂಭ ಹೇಗೆ ಸ್ಮಾರಕವಾಗಿದೆಯೋ ಅದೇ ರೀತಿ ನಾವು ನಮ್ಮ ಕೆಲಸಗಳ ಮೂಲಕ ಸಾಕ್ಷಿ ಗುಡ್ಡೆ ನಿರ್ಮಿಸಬೇಕು.
ಬೆಂಗಳೂರು ಕೆಲವು ಭಾಗಗಳು ಮಾತ್ರ ಯೋಜಿತ ನಗರವಾಗಿದ್ದು, ಉಳಿದ ಭಾಗಗಳು ಯೋಜನೆ ರಹಿತವಾಗಿ ಬೆಳೆದುಕೊಂಡಿದೆ. ಇಲ್ಲಿನ ಹವಾಮಾನದಲ್ಲಿ ಬದುಕಿದವರು ಇದನ್ನು ಬಿಟ್ಟು ಹೋಗುವುದಿಲ್ಲ.
ಈ ಬೆಂಗಳೂರು ನೆಲದಲ್ಲಿ ಕೆಂಪೇಗೌಡ, ಕೆಂಗಲ್ ಹನುಮಂತಯ್ಯ, ಬಾಲಗಂಗಾಧರನಾಥ ಸ್ವಾಮೀಜಿ, ಶಿವಕುಮಾರ ಸ್ವಾಮಿ ಹುಟ್ಟಿದ್ದಾರೆ. ಇದು ಈ ನೆಲದ ವೈಶಿಷ್ಟ್ಯತೆ. ಇದನ್ನು ಧರ್ಮವಾಗಿ, ಅಭಿವೃದ್ಧಿ ಹಾಗೂ ಪ್ರಗತಿಯಾಗಿದೆ ಉಳಿಸಿಕೊಂಡು ಹೋಗಬೇಕು. ಹೀಗಾಗಿ ಈ ಬೆಂಗಳೂರು ಅಭಿವೃದ್ಧಿ ಮಾಡಬೇಕು. ನಾನು ಬಹಳ ಉತ್ಸುಕತೆಯಿಂದ ಬೆಂಗಳೂರು ನಗರದ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಬೆಂಗಳೂರು ಅಭಿವೃದ್ಧಿ ಬಗ್ಗೆ ನಾನು ನಿಮ್ಮೆಲ್ಲರ ಸಲಹೆ ಕೇಳಿದ್ದೇನೆ. ನಿಮ್ಮ ಸಲಹೆ ಅಭಿಪ್ರಾಯ ನೀಡಿ. ನಿಮ್ಮ ಸಹಕಾರ ಆಶೀರ್ವಾದ ನಮ್ಮ ಮೇಲಿರಲಿ ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.