ಮೈಸೂರು: ಅರಮನೆಯ ಅಂಬಾರಿ ನಮ್ಮ ವೈಯಕ್ತಿಕ ಆಸ್ತಿ. ಹಿಂದೆಯೂ ಅದು ನಮ್ಮ ಆಸ್ತಿಯೇ ಆಗಿತ್ತು. ಈಗಲೂ ನಮ್ಮದೆ, ಮುಂದೆಯೂ ಅದು ನಮ್ಮ ಆಸ್ತಿಯೇ ಆಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದರು.
ಈ ಬಗ್ಗೆ ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಪ್ರಮೋದಾದೇವಿ ಒಡೆಯರ್, ಅಂಬಾರಿ ವಿಚಾರಕ್ಕೆ ವ್ಯಕ್ತಿಯೊಬ್ಬರು ಕೇಸ್ ಹಾಕಿಕೊಂಡಿದ್ದರು. ಅವರ ನಡವಳಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಅಗತ್ಯ ಇಲ್ಲ. ಹಿಂದೆಯೇ ನ್ಯಾಯಾಲಯ ಅಂಬಾರಿ ನಮ್ಮ ಅಸ್ತಿ ಎಂದು ಘೋಷಣೆ ಮಾಡಿದೆ. ಅಂಬಾರಿಗೆ ಪಡೆಯುವ ಗೌರವ ಧನದ ಬಗ್ಗೆ ಚಕಾರ ಎತ್ತುವುದು ಸರಿಯಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ 1981ರಿಂದ ಜನರಿಗಾಗಿ ನಾಡಹಬ್ಬವನ್ನು ಆಚರಣೆ ಮಾಡುತ್ತಿದೆ. ಆದರೆ, ನಾವು ಮಾಡುವುದು ನವರಾತ್ರಿ ದಸರಾ ಹಬ್ಬ. ಹೀಗಾಗಿ, ಅರಮನೆಯಲ್ಲಿ ನಾವು ಮಾಡುವ ನವರಾತ್ರಿ ಆಚರಣೆಗಳು ಸಾಂಪ್ರದಾಯಿಕ ಮತ್ತು ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ. ದಸರಾ ಎನ್ನುವ ಹೆಸರನ್ನು ಎಲ್ಲಾ ಕಡೆಗಳಲ್ಲೂ ಇಟ್ಟಿರುವುದರಿಂದ ಇಲ್ಲಿಯೂ ಇಡಲಾಗಿದೆ. ಆದ್ದರಿಂದ ಸರ್ಕಾರ ಆಚರಿಸುವ ದಸರಾ ಪೋಸ್ಟರ್ಗಳಲ್ಲಿ ರಾಜಮನೆತನದವರ ಭಾವಚಿತ್ರ ಹಾಕದೆ ಇರುವುದಕ್ಕೆ ನಮಗೆ ಯಾವುದೇ ಬೇಸರವಿಲ್ಲ ಎಂದು ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ಅರಮನೆಯಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ ಅ.4ರ ನಂತರ ಸಿದ್ಧತೆ ಆರಂಭಗೊಳ್ಳಲಿದ್ದು, ಖಾಸಗಿ ದರ್ಬಾರ್ ಸೇರಿದಂತೆ ಎಲ್ಲಾ ಆಚರಣೆಗಳು ಎಂದಿನಂತೆ ನಡೆಯಲಿದೆ ಎಂದು ತಿಳಿಸಿದ ಅವರು, ದಸರಾದಲ್ಲಿ ಅರಮನೆ ಸಹಯೋಗದಲ್ಲಿ ಬೊಂಬೆ ಪ್ರದರ್ಶನ ಆಯೋಜಿಸಲಾಗುತ್ತದೆ. ಇದೆ ಮೊದಲ ಭಾರಿಗೆ ಜಗನ್ಮೋಹನ ಅರಮನೆಯಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಆಂಧ್ರಪ್ರದೇಶ ಮೂಲದ ಗಾಯತ್ರಿ ಸೇವಾ ಟ್ರಸ್ಟ್ ವತಿಯಿಂದ ಈ ಬಾರಿ ದಸರಾದಲ್ಲಿ ಒಂದು ಲಕ್ಷ ಗೊಂಬೆಗಳ ಪ್ರದರ್ಶನವಿರುತ್ತೆ. ಒಂದು ವಾರಗಳ ಕಾಲ ಪ್ರದರ್ಶನ ನಡೆಸಲು ಚಿಂತನೆ ನಡೆಸಲಾಗಿದೆ. ಸಾರ್ವಜನಿಕರ ಆಗಮನ ನೋಡಿಕೊಂಡು ಸಮಯ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.