ಕೃಷಿ ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅಲೆದಾಡುವುದು ಬೇಡ ಎನ್ನುತ್ತಿದೆ 'ಅಗ್ರಿಫೈ'!

ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ, ಸಮಯಕ್ಕೆ ಸರಿಯಾದಂತಹ ನೀರು ಮತ್ತು ವಿದ್ಯುತ್ ಹಾಗೂ ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡಿದರೆ ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಅಗತ್ಯವಿಲ್ಲ ಎಂದು ಅನೇಕ ಪ್ರಗತಿಪರ ರೈತರು ಹೇಳುತ್ತಾರೆ. 

Written by - Chetana Devarmani | Last Updated : Apr 19, 2022, 07:05 PM IST
  • ದೇಶದ ಆರ್ಥಿಕತೆ ಕೃಷಿಯನ್ನು ಅವಲಂಬಿಸಿದೆ
  • ಅಂಕಿಸಂಖ್ಯೆಗಳ ಪ್ರಕಾರ ಶೇ 65 ಜನರು ಕೃಷಿಯನ್ನು ಅವಲಂಬಿಸಿದ್ದಾರೆ
  • ಕೃಷಿ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಕೃಷಿ ಸಾಲ ಅತ್ಯಗತ್ಯ
  • ಕೃಷಿ ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅಲೆದಾಡುವುದು ಬೇಡ ಎನ್ನುತ್ತಿದೆ 'ಅಗ್ರಿಫೈ'
ಕೃಷಿ ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅಲೆದಾಡುವುದು ಬೇಡ ಎನ್ನುತ್ತಿದೆ 'ಅಗ್ರಿಫೈ'! title=
ಕೃಷಿ ಸಾಲ

ಬೆಂಗಳೂರು: ದೇಶದ ಆರ್ಥಿಕತೆ ಕೃಷಿಯನ್ನು ಅವಲಂಬಿಸಿದೆ. ಅಂಕಿಸಂಖ್ಯೆಗಳ ಪ್ರಕಾರ ಶೇ 65 ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಕೃಷಿ ಬೆಳವಣಿಗೆಯಾಗಬೇಕಾದರೆ ಅಗತ್ಯಕ್ಕೆ ತಕ್ಕಂತಹ ಸಂದರ್ಭದಲ್ಲಿ ರೈತರಿಗೆ ಕೃಷಿ ಸಾಲವೂ ಅತ್ಯಗತ್ಯ. ಅಭಿವೃದ್ಧಿ ಶೀಲ ಆರ್ಥಿಕತೆ ಹೊಂದಿರುವಂತಹ ಭಾರತ ದೇಶಕ್ಕೆ ಕೃಷಿ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಕೃಷಿ ಸಾಲ ಅತ್ಯಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ, ಸಮಯಕ್ಕೆ ಸರಿಯಾದಂತಹ ನೀರು ಮತ್ತು ವಿದ್ಯುತ್ ಹಾಗೂ ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡಿದರೆ ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಅಗತ್ಯವಿಲ್ಲ ಎಂದು ಅನೇಕ ಪ್ರಗತಿಪರ ರೈತರು ಹೇಳುತ್ತಾರೆ. 

ಇದನ್ನೂ ಓದಿ: "ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಧರ್ಮ ಸೂಚಕ ವಸ್ತ್ರ ಧರಿಸಲು ಅವಕಾಶ ಇಲ್ಲ"

ಆದರೆ, ವಾಸ್ತವಿಕ ಚಿತ್ರಣ ಬೇರೆಯದೇ ಇದೆ. ಬಹುತೇಕ ರೈತರಿಗೆ ಕೃಷಿ ಸಾಲ ಎಂಬುದೇ ಮರೀಚಿಕೆ ಆಗಿರುತ್ತದೆ. ಸಹಕಾರಿ ಸಂಸ್ಥೆಗಳ ಮೂಲಕ ನೀಡುವ ಸಾಲ ಕೆಲವೇ ರೈತರ ಕೈಗೆಟುಕುತ್ತದೆ. ಇನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು ದೊಡ್ಡ ರೈತರನ್ನು ಮಾತ್ರ ಪರಿಗಣಿಸುತ್ತವೆ. ಸುಮಾರು ಶೇ 80ರಷ್ಟು ರೈತರು ಯಾವುದೇ ಸಾಲಸೌಲಭ್ಯ ಸಿಗದೆ ದುಬಾರಿ ಬಡ್ಡಿ ದರದಲ್ಲಿ ಖಾಸಗಿ ಸಾಲ ತಂದು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಇಂತಹ ರೈತರಿಗೆ ಸುಲಭವಾಗಿ ಮತ್ತು ಅಗತ್ಯ ಸಮಯದಲ್ಲಿ ಸಾಲ ಸೌಲಭ್ಯ ಒದಗಿಸುವ ದೃಷ್ಟಿಯಿಂದ 'AgriFI' (The Agriculture Financing Initiative) ಸ್ಟಾರ್ಟಪ್‌ ಮುಂದಾಗಿದೆ.

 

 

ರೈತರು ಉತ್ತಮ ಬೆಳೆ ತೆಗೆಯಬೇಕಾದರೆ ಸರಿಯಾದ ಸಮಯಕ್ಕೆ ಬಿತ್ತನೆ, ಬೀಜ ರಸಗೊಬ್ಬರ ದೊರೆಯುವುದು ಅಗತ್ಯ. ಜೊತೆಗೆ ಕಾಲಕಾಲಕ್ಕೆ ಔಷಧ ಸಿಂಪಡಣೆಯೂ ಇರಬೇಕು. ಆದರೆ, ರೈತರು ಹಣಕಾಸಿನ ಮುಗ್ಗಟ್ಟಿನಿಂದ ಸರಿಯಾದ ಸಮಯಕ್ಕೆ ಕೃಷಿ ಪೂರಕ ವಸ್ತುಗಳನ್ನು ಸಂಗ್ರಹಿಸಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಾರೆ. ಇಂತಹ ರೈತರನ್ನು ತಲುಪಿ ಅವರಿಗೆ ಕೃಷಿ ಸಮಯಕ್ಕೆ ಅನುಕೂಲವಾಗುವಂತೆ ಸಾಲಸೌಲಭ್ಯ ಒದಗಿಸುವುದು ಅಗ್ರಿಫೈ ಉದ್ದೇಶವಾಗಿದೆ.

ಕೃಷಿ ಸಾಲ ಒದಗಿಸುವುದು ಹೇಗೆ?

ರೈತರು ತಮ್ಮ ಸ್ಮಾರ್ಟ್‌ ಮೊಬೈಲ್‌ಗಳಲ್ಲಿ KrishiKhata ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ರೈತರ ತಾಲ್ಲೂಕು, ಗ್ರಾಮ, ಜಮೀನಿನ ಸರ್ವೆ ನಂಬರ್ ದಾಖಲಿಸಿದರೆ ಸಾಕು. ನಿಮ್ಮದೊಂದು ಪ್ರೊಫೈಲ್ ರೆಡಿ ಆಗುತ್ತದೆ. ಆ ಬಳಿಕ ಅಗತ್ಯವಾದ ಕೆವೈಸಿ ಪಡೆಯಲಾಗುತ್ತದೆ. ಇದರ ಆಧಾರದ ಮೇಲೆ ಅಗ್ರಿಫೈ ಪ್ರತಿನಿಧಿಗಳೇ ನಿಮ್ಮ ವಿವರಗಳನ್ನು ಬ್ಯಾಂಕ್‌ಗಳಿಗೆ ಸಲ್ಲಿಸಿ ನಿಮಗೆ ಸುಲಭವಾಗಿ ಬ್ಯಾಂಕ್ ಸಾಲ ಸಿಗುವವರೆಗೂ ಸಹಾಯ ಮಾಡುತ್ತಾರೆ.

'ರೈತರು ತಮ್ಮ ಜಮೀನಿನ ಕೆಲಸ ಕಾರ್ಯಗಳನ್ನು ಬಿಟ್ಟು ಬ್ಯಾಂಕ್‌ಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು ಮತ್ತು ಬ್ಯಾಂಕ್ ವ್ಯವಹಾರ ಗೊತ್ತಿರದ ರೈತರಿಗೂ ಸಹ ಅವರು ಮನೆಯಲ್ಲಿ ಕುಳಿತೇ ಸಾಲಸೌಲಭ್ಯ ಪಡೆಯಲು ಅನುಕೂಲ ಆಗುವಂತೆ ಮಾಡುವುದು ಈ ಸ್ಟಾರ್ಟಪ್‌ ಉದ್ದೇಶ' ಎಂದು ಅಗ್ರಿನ್ನೋವ್ ಟೆಕ್ನಾಲಜೀಸ್ ಲಿಮಿಟೆಡ್ ಸಹ ಸ್ಥಾಪಕ ರಘುಚಂದ್ರ ಹೇಳುತ್ತಾರೆ.

ಸಾಮಾನ್ಯವಾಗಿ ರೈತರು ಬ್ಯಾಂಕ್‌ಗಳಿಗೆ ಹೋದಾಗ ಎನ್‌ಪಿಎ (ವಸೂಲಿಯಾಗದ ಸಾಲ) ಭಯದಿಂದ ಬ್ಯಾಂಕ್‌ಗಳು ಹಿಂದೇಟು ಹಾಕುತ್ತವೆ. ಕಾರಣ ಕೃಷಿ ಸಾಲಕ್ಕಾಗಿಯೇ ಸಿಬಿಲ್ ಸ್ಕೋರ್ ವ್ಯವಸ್ಥೆ ಇಲ್ಲ. ಇಂತಹ ರೈತರ ವ್ಯವಹಾರವನ್ನು ವ್ಯವಸ್ಥಿತ ಮಾಡುವುದರ ಮೂಲಕ ಬ್ಯಾಂಕ್‌ಗಳ ಮನವೊಲಿಸುವ ಕೆಲಸವನ್ನು ಅಗ್ರಿಫೈ ಮಾಡುತ್ತದೆ. ರೈತರ ಒಟ್ಟಾರೆ ಜಮೀನು ಎಷ್ಟಿದೆ, ಅದರಲ್ಲಿ ಯಾವ ಬೆಳೆ ಬೆಳೆಯುತ್ತಾರೆ, ಅದರ ಒಟ್ಟಾರೆ ಖರ್ಚು ಎಷ್ಟು, ಒಂದು ಬೆಳೆಗೆ ರೈತ ಮಾಡಿದ ಖರ್ಚು ವೆಚ್ಚಗಳು ಎಷ್ಟು, ಯಾವ ಮೂಲಗಳಿಂದ ಖರೀದಿ ಮಾಡಿದ್ದಾನೆ ಎಂಬುದರ ದಾಖಲೆಗಳು, ಉತ್ತಮ ಫಸಲು ಬಂದಾಗ ಅದರ ಮಾರುಕಟ್ಟೆ ಮೌಲ್ಯ ಏನಾಗಿರುತ್ತದೆ ಹೀಗೆ ರೈತನ ಚಟುವಟಿಕೆಗಳನ್ನೇ ಆ್ಯಪ್‌ನಲ್ಲಿ ದಾಖಲಿಸಿ ಆತನ ಆರ್ಥಿಕ ಮೌಲ್ಯವನ್ನು ಹೆಚ್ಚಳ ಮಾಡುವ ಕೆಲಸ ಮಾಡುತ್ತೇವೆ. ಹೀಗೆ ಸರಿಯಾದ ಟ್ರ್ಯಾಕ್‌ನಲ್ಲಿ ಇರುವಂತಹ ರೈತರಿಗೆ ಬ್ಯಾಂಕ್‌ಗಳೂ ಸುಲಭವಾಗಿ ಸಾಲ ಸೌಲಭ್ಯ ಒದಗಿಸುತ್ತವೆ ಎಂಬುದು ರಘುಚಂದ್ರ ಅಭಿಪ್ರಾಯ.

ಇನ್‌ಪುಟ್ ಸಹ ಪೂರೈಕೆ:

Agrifi ಕೃಷಿಕರಿಗೆ ಸಾಲಸೌಲಭ್ಯ ಒದಗಿಸುವುದರ ಜೊತೆಗೆ ರೈತನಿಗೆ ಕಾಲಕಾಲಕ್ಕೆ ಅಗತ್ಯವಾದಂತಹ ರಸಗೊಬ್ಬರ, ಬಿತ್ತನೆ ಬೀಜ ಒದಗಿಸುವ ಪ್ರಯತ್ನವನ್ನೂ ಮಾಡುತ್ತಿದೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಈ ಸೌಲಭ್ಯ ಜಾರಿ ಮಾಡಲಾಗಿದೆ. ಇದರಿಂದ ರೈತನ ವ್ಯವಹಾರದ ರೈತರು ತಮಗೆ ಬೇಕಾದ ರಸಗೊಬ್ಬರ, ಕ್ರಿಮಿನಾಶಗಳನ್ನು ಆ್ಯಪ್‌ ಮೂಲಕವೇ ಖರೀದಿಸಬಹುದು. ಇದರಿಂದ ರೈತ ಒಂದು ಬೆಳೆಯ ಅವಧಿಗೆ ಎಷ್ಟು ಖರೀದಿ ಮಾಡಿದ್ದಾನೆ ಎಂಬುದರ ವಿವರೂ ಸಿಗುತ್ತದೆ. ಇದು ಬ್ಯಾಂಕ್‌ಗಳಿಂದ ಸುಲಭವಾಗಿ ಸಾಲ ಪಡೆಯಲು ಸಹಾಯಕವಾಗುತ್ತದೆ ಎಂಬ ಉದ್ದೇಶವನ್ನು ಅಗ್ರಿಫೈ ಹೊಂದಿದೆ.

'ಬ್ಯಾಂಕ್‌ಗಳು ಪ್ರತಿ ವರ್ಷ ಇಂತಿಷ್ಟು ಕೃಷಿ ಸಾಲ ನೀಡಲೇಬೇಕು ಎಂಬ ನಿಯಮ ಇರುತ್ತದೆ. ಆದರೆ, ಅರ್ಹ ರೈತರು ಸಿಕ್ಕಿಲ್ಲ ಎಂದು ಬಹುತೇಕ ಬ್ಯಾಂಕ್‌ಗಳು ತಮಗೆ ಇರುವ ಟಾರ್ಗೆಟ್ ಮುಟ್ಟುವುದೇ ಇಲ್ಲ. ಹೀಗಾಗಿ ಅಗತ್ಯವಿರುವ ಅರ್ಹ ರೈತರನ್ನು ಬ್ಯಾಂಕ್‌ಗೆ ಅಗತ್ಯವಿರುವ ದಾಖಲೆಗಳ ಸಮೇತ ಅವರನ್ನು ತಯಾರು ಮಾಡಿ ಸಾಲ ನೀಡುವವರೆಗೂ ಎಲ್ಲ ಹಂತದಲ್ಲಿ ನೆರವಾಗುತ್ತೇವೆ. ಈ ಸಂಬಂಧ ಕೆಲ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳು ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಜತೆಗೂ ಒಡಂಬಡಿಕೆ ಮಾಡಿಕೊಂಡಿದ್ದೆವೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಇದನ್ನು ಈಗಾಗಲೇ ಪ್ರಾಯೋಗಿಕವಾಗಿ ಜಾರಿ ಮಾಡಿ, ಹಲವು ರೈತರಿಗೆ ಸಾಲದ ನೆರವು ಒದಗಿಸಿದ್ದೇವೆ' ಎಂದು ಅಗ್ರಿಫೈ ಸ್ಥಾಪಕ ಮತ್ತು ಸಿಇಓ ಅಭಿಲಾಶ್ ತಿರುಪತಿ ಹೇಳುತ್ತಾರೆ.

ಇದನ್ನೂ ಓದಿ: "ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ"

ಇದಲ್ಲದೆ, ರೈತರಿಗೆ ಕಾಲಕಾಲಕ್ಕೆ ಹವಾಮಾನದ ಮಾಹಿತಿ, ಬೆಳೆಗೆ ಯಾವುದಾದರೂ ರೋಗ ತಗುಲಿದಾಗ ಅದಕ್ಕೆ ಯಾವ ಔಷಧ ಸಿಂಪಡಿಸಬೇಕು ಎಂಬ ಮಾಹಿತಿಯನ್ನು ಕೃಷಿ ತಜ್ಞರಿಂದ ಒದಗಿಸುವುದು, ಈ ವರ್ಷ ಯಾವ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಬಹುದು, ಈಗ ನಾಟಿ ಮಾಡಿದ ಬೆಳೆಗೆ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಬೆಲೆ ಎಷ್ಟು ಇರಬಹುದು ಇಂತಹ ವೈಜ್ಞಾನಿಕ ಮಾಹಿತಿಗಳನ್ನು ಈ ಆ್ಯಪ್‌ ಮೂಲಕ ಒದಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ರಘುಚಂದ್ರ ವಿವರಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News