Karnataka Election 2023: ನಾವು ಯಾವುದೇ ಸಿಎಂ ಕಣ್ಣಲ್ಲಿ ನೀರು ಹಾಕಿಸಿಲ್ಲ- ಅಮಿತ್ ಶಾಗೆ ಡಿಕೆಶಿ ತಿರುಗೇಟು

Karnataka Assembly Election 2023: ಕಳೆದ 3 ದಿನಗಳ ಕಾಲ ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಸ ಮಾಡಿದ್ದು, ಪಕ್ಷದ ಪರವಾಗಿ ಪ್ರಚಾರದ ಜೊತೆಗೆ ದೇವರ ಸನ್ನಿಧಿಗೂ ಭೇಟಿ ನೀಡಿದ್ದೇನೆ. ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲೂ ಸಾವಿರಾರು ಜನ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Written by - Prashobh Devanahalli | Edited by - Puttaraj K Alur | Last Updated : Apr 25, 2023, 10:51 AM IST
  • ಕಾಂಗ್ರೆಸ್ ಲಿಂಗಾಯತ ಸಿಎಂಗಳಿಗೆ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಿಲ್ಲವೆಂಬ ಅಮಿತ್ ಶಾ ಹೇಳಿಕೆಗೆ ತಿರುಗೇಟು
  • ಅಮಿತ್ ಶಾಗೆ ರಾಜ್ಯ ರಾಜಕೀಯ ಇತಿಹಾಸದ ಬಗ್ಗೆ ಗೊತ್ತಿಲ್ಲ, ನಾನು ವಿರೇಂದ್ರ ಪಾಟೀಲ್ ಸರ್ಕಾರದ ಭಾಗವಾಗಿದ್ದೆ
  • ನಾವು ಬಿಜೆಪಿಯವರಂತೆ ಯಾವುದೇ ಮುಖ್ಯಮಂತ್ರಿಯಿಂದ ಕಣ್ಣೀರು ಹಾಕಿಸಿಲ್ಲವೆಂದ ಅಮಿತ್ ಶಾ
Karnataka Election 2023: ನಾವು ಯಾವುದೇ ಸಿಎಂ ಕಣ್ಣಲ್ಲಿ ನೀರು ಹಾಕಿಸಿಲ್ಲ- ಅಮಿತ್ ಶಾಗೆ ಡಿಕೆಶಿ ತಿರುಗೇಟು title=
ಅಮಿತ್ ಶಾ ಹೇಳಿಕೆಗೆ ಡಿಕೆಶಿ ತಿರುಗೇಟು!

ಬೆಂಗಳೂರು: ಬಿಜೆಪಿಯಂತೆ ಕಾಂಗ್ರೆಸ್ ಯಾವುದೇ ಲಿಂಗಾಯತ ನಾಯಕ ಹಾಗೂ ಮುಖ್ಯಮಂತ್ರಿ ಕಣ್ಣಲ್ಲಿ ನೀರು ಹಾಕಿಸಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ತಿರುಗೇಟು ನೀಡಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ಲಿಂಗಾಯತ ಮುಖ್ಯಮಂತ್ರಿಗಳಿಗೆ ತಮ್ಮ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಿಲ್ಲವೆಂಬ ಅಮಿತ್ ಶಾರ ಹೇಳಿಕೆಗೆ ತಿರುಗೇಟು ನೀಡಿದರು. ‘ಅಮಿತ್ ಶಾಗೆ ರಾಜ್ಯ ರಾಜಕೀಯ ಇತಿಹಾಸದ ಬಗ್ಗೆ ಗೊತ್ತಿಲ್ಲ. ನಾನು ವಿರೇಂದ್ರ ಪಾಟೀಲ್ ಅವರ ಸರ್ಕಾರದ ಭಾಗವಾಗಿದ್ದೆ. ನಾವು ಬಿಜೆಪಿಯವರಂತೆ ಯಾವುದೇ ಮುಖ್ಯಮಂತ್ರಿಯಿಂದ ಕಣ್ಣೀರು ಹಾಕಿಸಿಲ್ಲ. ಬಿ.ಎಸ್.ಯಡಿಯೂರಪ್ಪನವರು ಅಧಿಕಾರದಿಂದ ಕೆಳಗೆ ಇಳಿಯುವಾಗ ಯಾವ ಮಾತು ಆಡಿದ್ದಾರೆ. ಅದಕ್ಕೆ ಕಾರಣವೇನು? ಅವರಿಗೆ ಯಾವ ರೀತಿ ಬೆದರಿಕೆ ಹಾಕಲಾಗಿತ್ತು ಎಂಬ ವಿಷಯ ನನಗೆ ಗೊತ್ತಿದೆ. ಈಗ ಆ ವಿಚಾರವಾಗಿ ಮಾತನಾಡುವುದಿಲ್ಲ. ಬಿಜೆಪಿಗೆ ಯಡಿಯೂರಪ್ಪ ಅವರ ಕಣ್ಣೀರಿನ ಶಾಸ್ತಿ ಆಗಲಿದೆ. ಜಗದೀಶ್ ಶೆಟ್ಟರ್ ಹಾಗೂ ಸವದಿ ಅವರು ಕಣ್ಣೀರು ಹಾಕದಿರಬಹುದು. ಅವರ ಮನಸ್ಸು ಅತ್ತಿದೆ’ ಎಂದು ತಿಳಿಸಿದರು.

ಕಳೆದ 3 ದಿನಗಳ ಕಾಲ ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಸ ಮಾಡಿದ್ದು, ಪಕ್ಷದ ಪರವಾಗಿ ಪ್ರಚಾರದ ಜೊತೆಗೆ ದೇವರ ಸನ್ನಿಧಿಗೂ ಭೇಟಿ ನೀಡಿದ್ದೇನೆ. ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲೂ ಸಾವಿರಾರು ಜನ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಸಾವಿರಾರು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಚಿಕ್ಕಮಗಳೂರು ನಗರ ಸೇರಿದಂತೆ ಆ ಜಿಲ್ಲೆಯ ಐದಕ್ಕೆ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಸೂಚನೆಗಳು ದಟ್ಟವಾಗಿವೆ. ಉಡುಪಿ ಮಂಗಳೂರು ಜಿಲ್ಲೆಯಗಳಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಾತಾವರಣವಿದೆ. ಸಮೀಕ್ಷೆಗಳ ವರದಿಗಳು ಗ್ಯಾರಂಟಿ ಆಗಲಿವೆ ಎಂಬ ನಂಬಿಕೆ ಇದೆ ಎಂದರು.

ಇದನ್ನೂ ಓದಿ: ಇಂದು ಹನೂರಿಗೆ ಪ್ರಿಯಾಂಕಾ ಗಾಂಧಿ- ಮಹಿಳೆಯರೊಂದಿಗೆ ಸಂವಾದ, ಚುನಾವಣಾ ಪ್ರಚಾರ

ಇಂದು ಅಮಿತ್ ಶಾ ಅವರು ಮೀಸಲಾತಿ ವಿಚಾರವಾಗಿ ಮಾತನಾಡಿದ್ದು, ನೀವು ಮುಸಲ್ಮಾನರಿಗೆ ಹೇಗೆ ಮೀಸಲಾತಿ ನೀಡುತ್ತೀರಿ ಎಂದು ಕೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಒಕ್ಕಲಿಗರಾಗಲಿ, ಲಿಂಗಾಯತರಾಗಲಿ ಬೇರೆಯವರ ಮೀಸಲಾತಿ ಕಿತ್ತು ನಮಗೆ ಶೇ.2ರಷ್ಟು ಮೀಸಲಾತಿ ನೀಡಿ ಎಂದು ಕೇಳಿರಲಿಲ್ಲ. ಕಾಂಗ್ರೆಸ್ ಪಕ್ಷದ ಬದ್ಧತೆ ಎಂದರೆ ಮೀಸಲಾತಿ ಮಿತಿಯನ್ನು ವಿಸ್ತರಿಸಿ ಈ ಸಮುದಾಯಗಳಿಗೆ ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕು ಎಂಬುದು ನಮ್ಮ ಒತ್ತಾಸೆ. ಮುಸಲ್ಮಾನರಿಗೂ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಸಿಗಬೇಕಾದ ಮೀಸಲಾತಿ ಸಿಗಬೇಕು.

ಬೇರೆ ರಾಜ್ಯಗಳಲ್ಲೂ ಮೀಸಲಾತಿ ಮಿತಿಯನ್ನು ಮೀರಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ನ್ಯಾಯಾಲಯದಲ್ಲಿ ಮೀಸಲಾತಿ ವಿಚಾರವಾಗಿ ಸರ್ಕಾರದ ಆದೇಶ ಜಾರಿ ಕಷ್ಟ ಎಂಬುದು ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ರಾಜ್ಯ ಹಾಗೂ ಹೊರ ದೇಶಗಳಲ್ಲಿರುವ ಮತದಾರರಿಗೆ ನಾನು ಈ ಮೂಲಕ ಮನವಿ ಮಾಡಿಕೊಳ್ಳಲು ಬಯಸುತ್ತೇನೆ. ನೀವು ದೂರದ ಊರಿನಲ್ಲಿದ್ದರೂ ನಿಮ್ಮ ಸೇವೆಯಿಂದ ನಮ್ಮ ರಾಜ್ಯಕ್ಕೆ ಹೆಸರು ಬಂದಿದೆ. ರಾಜ್ಯಕ್ಕೆ ಬಂಡವಾಳ ಹೂಡಿಕೆ ಬರುತ್ತಿಲ್ಲ, ನಿರುದ್ಯೋಗ ಹೆಚ್ಚಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನೀವೆಲ್ಲರೂ ಭಾಗಿಯಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಿಂದ ಹೊರಗೆ ಇರುವರಿಗೆ ನೆರವಾಗಲು, ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಚಿವಾಲಯ ಆರಂಭಿಸಲಾಗುವುದು. ಇದನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ’ ಎಂದು ಹೇಳಿದರು.

ರಾಜ್ಯಕ್ಕೆ ಅಂಟಿರುವ ಭ್ರಷ್ಟಾಚಾರದ ಕಳಂಕ ತೊಡೆದು ಹಾಕಿ ಉತ್ತಮ ಆಡಳಿತ ನೀಡುವ ಗುರಿ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ಡಿಕೆಶಿ ಹೇಳಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಅವರ ಆಗ್ರಹ ಮಾಡಿದಷ್ಟು ಮೀಸಲಾತಿ ನೀಡುತ್ತೀರಾ ಎಂದು ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ‘ನಾವು ಕೇವಲ ಒಂದು ಸಮುದಾಯದ ಬಗ್ಗೆ ಮಾತ್ರವಲ್ಲ, ಎಲ್ಲಾ ಸಮುದಾಯದವರನ್ನು ಕರೆದು ಅವರ ಅಭಿಪ್ರಾಯ ಸಂಗ್ರಹಿಸಿ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುತ್ತೇವೆ. ಬೇರೆ ಸಮುದಾಯಗಳಿಗೆ ಯಾವುದೇ ರೀತಿ ಅನ್ಯಾಯ ತೊಂದರೆ ಆಗದಂತೆ ಮೀಸಲಾತಿ ನೀಡುತ್ತೇವೆ’ ಎಂದು ತಿಳಿಸಿದರು.

ಇದನ್ನೂ ಓದಿ: Karnataka Assembly Election: ಮೈಸೂರಿನಲ್ಲಿ ಇಂದು ದಿಗ್ಗಜರಿಂದ ಚುನಾವಣಾ ಪ್ರಚಾರ

ಸಿದ್ದರಾಮಯ್ಯನವರ ಲಿಂಗಾಯತ ಸಮುದಾಯದ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ‘ಸಿದ್ದರಾಮಯ್ಯನವರು ಪ್ರಬುದ್ಧರು. ಅವರಿಗೆ ಸಾಮಾನ್ಯ ಪ್ರಜ್ಞೆ ಇದೆ. ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರು ಸಮುದಾಯದ ಬಗ್ಗೆ ಮಾತನಾಡಿಲ್ಲ. ಸರ್ಕಾರದ ವಿಚಾರವಾಗಿ ಮಾತನಾಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು. ಚುನಾವಣಾ ಆಯೋಗದ ಅಧಿಕಾರಿಗಳು ನಿಮ್ಮ ಹಿಂದೆ ಬಿದ್ದಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ‘ರಾಜಕೀಯದಲ್ಲಿ ಇದೆಲ್ಲಾ ಸಹಜ. ಎಲ್ಲರನ್ನು ನಿಭಾಯಿಸಿಕೊಂಡು ಹೋಗಬೇಕು’ ಎಂದರು. ಪ್ರಿಯಾಂಕಾ ಗಾಂಧಿ ಅವರ ರಾಜ್ಯ ಪ್ರವಾಸದ ಬಗ್ಗೆ ಕೇಳಿದಾಗ, ‘ನಾಳೆ ಪ್ರಿಯಾಂಕಾ ಗಾಂಧಿ ಅವರು ಮೈಸೂರು, ಹನೂರು, ಕೊಳ್ಳೆಗಾಲ, ಶೃಂಗೇರಿಯಲ್ಲಿ ಪ್ರವಾಸ ಮಾಡಲಿದ್ದಾರೆ’ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News