Karnataka Election 2023: ಮಂಡ್ಯದಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದೆ - ಸಿಎಂ ಬೊಮ್ಮಾಯಿ‌

Karnataka Election 2023: ಇಂದು ಮಂಡ್ಯ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ ಜಯರಾಮ ಅವರ ಪರ ಪ್ರಚಾರ ನಡೆಸಿ ಅವರು ಮಾತನಾಡಿದ ಸಿಎಂ ಬೊಮ್ಮಾಯಿ, ಮಂಡ್ಯದಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದೆ. ಹೊಸ ನಾಯಕತ್ವಕ್ಕೆ ಅವಕಾಶ ಕೊಡಿ ಎಂದು ಹೇಳಿದರು.   

Written by - Prashobh Devanahalli | Last Updated : May 1, 2023, 10:21 PM IST
  • ಮಂಡ್ಯದಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದೆ
  • ಹೊಸ ನಾಯಕತ್ವಕ್ಕೆ ಅವಕಾಶ ಕೊಡಿ
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Karnataka Election 2023: ಮಂಡ್ಯದಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದೆ - ಸಿಎಂ ಬೊಮ್ಮಾಯಿ‌ title=

ಮಂಡ್ಯ: 30 ವರ್ಷದಲ್ಲಿ ಜೆಡಿಎಸ್, ಕಾಂಗ್ರೆಸ್ ಗೆ ಮತ ಹಾಕಿದ್ದೀರಿ. ಯಾವುದೇ ಅಭಿವೃದ್ಧಿ ಆಗಿಲ್ಲ. ಇಬ್ಬರ ರಾಜಕೀಯ ಆಟದಿಂದ ಜನರಿಗೆ ಸಂಕಟ ಬಂದಿದೆ. ಈ ಬಾರಿ ಬದಲಾವಣೆ ಆಗಬೇಕು. ಹೊಸ ನಾಯಕತ್ವ, ಛಲದಿಂದ ಕೆಲಸ ಮಾಡುವಂತಹ ರಾಜಕೀಯ ಶಕ್ತಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಮಂಡ್ಯ ಇಸ್ ಇಂಡಿಯಾ. ಮೊನ್ನೆ ನರೇಂದ್ರ ಮೋದಿಯವರು ಮಂಡ್ಯಗೆ ಬಂದು ಹೋದ ನಂತರ ಇಂಡಿಯಾ ಅಂದರೆ ಮಂಡ್ಯ ಎನ್ನುವ ಹಾಗಿದೆ. ಮಂಡ್ಯದಲ್ಲಿ ಹೊಸ ಗಾಳಿ ಬೀಸುತ್ತಿದೆ. ಇನ್ನು ಏಳು ದಿನಗಳ ಕಾಲ ನೀವು ಶ್ರಮವಹಿಸಿದರೆ ಈ ಗಾಳಿ ಸುನಾಮಿಯಾಗಲಿದೆ. ಮಂಡ್ಯವನ್ನು ಅಭಿವೃದ್ಧಿಗೆ ಎಸ್.ಟಿ ಜಯರಾಮ ಅವರ ಕೊಡುಗೆ ಬಹಳ ದೊಡ್ಡದಿದೆ, ಅವರು ಹೃದಯವಂತರು. ಹೃದಯವಂತ ಜಯರಾಮ ಅವರ ಮಗ ಅಶೋಕ ಜಯರಾಮ ಮಂಡ್ಯದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಜಯರಾಮ ಅವರ ಸ್ನೇಹಿತನಾಗಿ ನಾನು ಅವರ ಅಭಿಮಾನಿಗಳಿಗೆ ಕರೆ ಕೊಡುತ್ತಿದ್ದೇನೆ.‌ ಎಲ್ಲರೂ ಪಕ್ಷಾತೀತವಾಗಿ ಅಶೋಕ ಅವರಿಗೆ ಆಶೀರ್ವಾದ ಮಾಡಬೇಕು ಎಂದರು.

ಮಂಡ್ಯದ ಗಾಂಧಿವಾದಿಗಳಾದ ಶಂಕರೇಗೌಡರು ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಮಂಡ್ಯದ ಮಣ್ಣು ಮಣ್ಣಲ್ಲ, ಚಿನ್ನ.‌ ಈ ಭೂಮಿ ತಾಯಿಗೆ ಕಾವೇರಿ ನೀರನ್ನು ಕೊಟ್ಟು ರೈತರು ಬೆವರು ಹರಿಸಿ ದುಡಿದರೇ ಬಂಗಾರದ ಬೆಳೆ ಸಿಗುತ್ತದೆ. ಮಾದೇಗೌಡರು ಹೋರಾಟ ನನಗೆ ನೆನಪಾಗುತ್ತದೆ. ಅವರ ಜೊತೆ ನಮ್ಮ ತಂದೆ ಮತ್ತು ನಾನು ನಿಕಟವಾದ ಸಂಪರ್ಕ ಇತ್ತು. ಇಂತಹ ನಾಡಿನಲ್ಲಿ ನಾಯಕತ್ವದ ಕೊರತೆ ಕಾಡುತ್ತಿದೆ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಧಾರಾಕಾರ ಮಳೆ.. ಧರೆಗುರುಳಿದ ಮರಗಳು, ವಾಹನ ಸವಾರರ ಪರದಾಟ

ಈ‌ ನಾಡು ಅತ್ಯಂತ ಶ್ರೀಮಂತ ನಾಡು. ಶ್ರೀಮಂತ ನಾಡಿನಲ್ಲಿ ನಾಯಕತ್ವ ಬೆಳೆಸುವ ಅವಶ್ಯಕತೆ ಇದೆ. ನನ್ನ ಅತ್ಯಂತ ಆತ್ಮೀಯ ಸ್ನೇಹಿತ ಅಂಬರೀಶ್ ನಾನು 40 ವರ್ಷದ ಸ್ನೇಹಿತರು. ಆ ಸ್ನೇಹ ಪ್ರೀತಿಯಿಂದ ಮಂಡ್ಯ ನನ್ನ ಹೃದಯಕ್ಕೆ ಹತ್ತಿರವಾಗಿದೆ. ನಮ್ಮ‌ ಸುಮಲತಾ ಅಕ್ಕ ಮಂಡ್ಯದಿಂದ ಆಯ್ಕೆಯಾಗಿ ಮಂಡ್ಯದ ಧ್ವನಿಯನ್ನು ಪಾರ್ಲಿಮೆಂಟ್ ನಲ್ಲಿ ಮೊಳಗಿಸುತ್ತಿದ್ದಾರೆ. ಮಂಡ್ಯದ ಅಭಿವೃದ್ಧಿಗೆ ಸಮಗ್ರ ಅಭಿವೃದ್ಧಿಗೆ ಕಳಕಳಿ ಹೊಂದಿದ್ದಾರೆ. ಮೈಸೂರು ಶುಗರ್ ಖಾರ್ಕಾನೆ ಪುನರ್ ಆರಂಭಕ್ಕೆ ರೈತ ಸಂಘಗಳ ಜೊತೆಗೆ ಸುಮಲತಾ ಅವರ ಒತ್ತಾಯ ಕೂಡ ಮುಖ್ಯವಾಗಿದೆ ಎಂದರು.

ನಾನು ನೀರಾವರಿ ಸಚಿವನಾಗಿ ಮಂಡ್ಯದ ಕೆ.ಆರ್.ಎಸ್ ಡ್ಯಾಮ್ ಗೆ ಹೋಗಿದ್ದೆ. 2008 ನಲ್ಲಿ ನಿತ್ಯ 300 ಕ್ಯೂಸೆಕ್ಸ್ ನೀರು ಹರಿದು ಹೋಗುತ್ತಿತ್ತು. ನಾವು ಕೋರ್ಟ್ ನಲ್ಲಿ ಹನಿ ಹನಿ ನೀರಿಗೆ ಹೋರಾಟ ಮಾಡುತ್ತಿದ್ದೇವು. ಇಲ್ಲಿನ 10 ವರ್ಷದಿಂದ ನಿತ್ಯ ಹರಿದು ಹೋಗುತ್ತಿದ್ದ ನೀರು ತಡೆಯಲು ಹೊಸ ಗೇಟ್ ಗಳನ್ನು ನಿರ್ಮಾಣ ಮಾಡಿಸಿದೆ. ಈಗ ಆ ಡ್ಯಾಮ್ ಹೊಸ ಡ್ಯಾಮ್ ಆಗಿದೆ.

ಈ ಭಾಗದ ಹಲವಾರು ಜನರು ಮಂತ್ರಿಗಳಾಗಿದ್ದರು. ಕೆ.ಆರ್.ಎಸ್ ನಮ್ಮ ಕನ್ನಡಿಗರ ಆಸ್ತಿ.‌ಅದನ್ನು ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ.  ಸರ್. ಎಂ ವಿಶ್ವೇಶ್ವರಯ್ಯ ನಾಲೆ ಅರ್ಧ ಆಗಿತ್ತು. ಅದಕ್ಕೆ 500 ಕೋಟಿ ರೂ ನೀಡಿದ್ದು ನಮ್ಮ ಬಿಜೆಪಿ ಸರ್ಕಾರ. ಎಲ್ಲ ಕಾಲುವೆ, ನಾಲೆಗಳ ಅಭಿವೃದ್ಧಿಗೆ ನಾವು ಹಣವನ್ನು ಕೊಟ್ಟಿದ್ದೇವೆ‌. ಇದು ನಮ್ಮ ಮಂಡ್ಯದ ರೈತರ ಬಗ್ಗೆ ನಮ್ಮ ಬದ್ಧತೆ ಎಂದರು.

ಇದನ್ನೂ ಓದಿ: ಕರ್ನಾಟಕ ಚುನಾವಣಾ ಅಖಾಡ: ಈ ಬಾರಿ ಯಾವ ಪಕ್ಷದ ಮೇಲಿದೆ ರಾಜ್ಯದ ಜನರ ಒಲವು?

ಮೈ ಶುಗರ್ ಕಾರ್ಖಾನೆ ಸರಿ ಮಾಡಲು ಆಗುವುದಿಲ್ಲ ಎಂದು ಕೆಲವರು ಹೇಳಿದರು. ಇದನ್ನು ಮಟ್ಟಲು ಹೋಗಬೇಡಿ. ಖಾಸಗಿಯವರಿಗೆ ಕೊಟ್ಟು ಬಿಡಿ ಎಂದರು. ಆದರೆ, ನನಗೆ ಯಾವಾಗ ಸವಾಲು ಬರುತ್ತದೆ. ಆಗ ಹೆಚ್ಚಿನ ಶಕ್ತಿ ಕೆಲಸ ಮಾಡಲು ಬರುತ್ತದೆ. ಅರ್ಜುನನ ಗುರಿ ತಪ್ಪಬಹುದು, ಆದರೆ ಕರ್ಣನ ಗುರಿ ತಪ್ಪುವುದಿಲ್ಲ. ಮೈ ಶುಗರ್ ಕಾರ್ಖಾನೆಗೆ 84 ಕೋಟಿಗಿಂತ ಹೆಚ್ಚಿನ ಅನುದಾನ ಕೊಟ್ಟು ಅದರ ಸಿದ್ಧತೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಮತ್ತು ಎಥೆನಾಲ್ ಕೂಡ ತಯಾರು ಮಾಡುತ್ತೇವೆ. ಈ ಭಾಗದ ಕಬ್ಬು ಬೇರೆ ಕಡೆಗೆ ಹೋಗದೆ, ಇಲ್ಲಿಯೇ ಮೈಶುಗರ್ ಕಾರ್ಖಾನೆ ಆರಂಭ ಆಗುತ್ತದೆ ಎಂದರು.

ಮಂಡ್ಯ ನಗರ ನಮ್ಮ ರಾಜ್ಯದ ಪ್ರಮುಖ ನಗರ. ಇಲ್ಲಿಯೂ ಕೈಗಾರಿಕೆ ಬೆಳೆಯಬೇಕು. ಬೆಂಗಳೂರಿನ ಮಾದರಿಯಲ್ಲಿ ಮಂಡ್ಯ ಜಿಲ್ಲೆ ಬೆಳೆಯಬೇಕು.‌ ಆಧುನಿಕ ಮಂಡ್ಯ ಕಟ್ಟುವ ನಿಟ್ಟಿನಲ್ಲಿ ನಾವು ಇಲ್ಲಿಗೆ ಬಂದಿದ್ದೇವೆ. ನಮ್ಮ ಯುವ ನಾಯಕ ಅಶೋಕ ಅವರಿಗೆ ಮತ ನೀಡಿ. 30 ವರ್ಷದಲ್ಲಿ ಜೆಡಿಎಸ್, ಕಾಂಗ್ರೆಸ್ ಮತ ಹಾಕಿದ್ದೀರಿ. ಯಾವುದೇ ಅಭಿವೃದ್ಧಿ ಆಗಿಲ್ಲ. ಇಬ್ಬರ ರಾಜಕೀಯ ಆಟದಿಂದ ಜನರಿಗೆ ಸಂಕಟ ಬಂದಿದೆ. ಈ ಬಾರಿ ಬದಲಾವಣೆ ಆಗಬೇಕು. ಹೊಸ ನಾಯಕತ್ವ, ಛಲದಿಂದ ಕೆಲಸ ಮಾಡುವಂತಹ ರಾಜಕೀಯ ಶಕ್ತಿ ಬಿಜೆಪಿಯಿಂದ ಮಾತ್ರ ಸಾಧ್ಯ. ಎಲ್ಲ ಯುವಕರು ಬಿಜೆಪಿಗೆ ಬೆಂಬಲ ಮಾಡುತ್ತಿದ್ದಾರೆ. ಯುವಕರು ಎಲ್ಲರ ಹಿರಿಯರ ಆಶೀರ್ವಾದ ಪಡೆಯಿರಿ, ನಮಗೆ ಜಯ ಆಗುತ್ತದೆ. ಜಯರಾಮ ಅವರಿಗೆ ಜಯ ಆಗುತ್ತದೆ. ಮಂಡ್ಯದಲ್ಲಿ ಬದಲಾವಣೆ ಆದರೆ ಇಡೀ ಜಿಲ್ಲೆಯಲ್ಲಿ ಬದಲಾವಣೆ ಆಗುತ್ತದೆ ಎಂದರು.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿರುವ ಪ್ರಿಯಾಂಕಾ ಗಾಂಧಿ!

ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲಸವನ್ನು ಪ್ರತಿಯೊಬ್ಬರೂ ಕ್ಷೇತ್ರದ ಹಳ್ಳಿಯ ಮನೆ ಮನೆಗೂ ಹೋಗಿ ಹೇಳಬೇಕು. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ವಿದ್ಯಾನಿಧಿ, ಕಾರ್ಮಿಕನಿಧಿ, ಸ್ತ್ರೀ ಸಾಮರ್ಥ್ಯ ಯೋಜನೆಗಳನ್ನು ಮಾಡಿದ್ದೇವೆ. ದುಡಿಮೆಗೆ ಗೌರವ ಬರಬೇಕು ಎಂದು ಎಲ್ಲ ಜನರಿಗೆ ಅನುಕೂಲಕರ ಯೋಜನೆಗಳನ್ನು ಮಾಡಿದ್ದೇವೆ. ಈ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ ಮೇ 10 ಕ್ಕೆ ಮತ ಹಾಕಿಸಿ. ಮೇ 13ರಂದು ನಾನು ನಿಮ್ಮ ವಿಜಯೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ. ನರೇಂದ್ರ ಮೋದಿಯವರು ಮಂಡ್ಯದ ಮೇಲೆ ಬಹಳ ವಿಶ್ವಾಸವಿಟ್ಟಿದ್ದಾರೆ. ಅವರ ವಿಶ್ವಾಸಕ್ಕೆ ಎಲ್ಲರೂ ಪ್ರೀತಿ ತುಂಬುವ ರೀತಿಯಲ್ಲಿ ನೀವು ಕೆಲಸ ಮಾಡಿ. ಅಶೋಕ ಅವರನ್ನು ವಿಧನಾಸೌಧಕ್ಕೆ ಕಳುಹಿಸಿ, ಮಂಡ್ಯದ ಅಭಿವೃದ್ಧಿಗೆ ಎಷ್ಟು ಅನುದಾನ ಬೇಕು ಅದನ್ನು ನಾನು ಕೊಡುತ್ತೇನೆ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News