Weekend forecast: ಈ ರಾಜ್ಯಗಳಲ್ಲಿ ಮುಂದಿನ ಕೆಲವು ದಿನ ಭಾರೀ ಮಳೆಯಾಗುವ ಎಚ್ಚರಿಕೆ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳಲ್ಲಿ ವರುಣನ ಆರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Written by - Puttaraj K Alur | Last Updated : Sep 4, 2021, 10:43 AM IST
  • ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ
  • ಬೆಂಗಳೂರು ಸೇರಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ
  • ಭಾರೀ ಮಳೆ ಸಾಧ್ಯತೆ ಹಿನ್ನೆಲೆ ಅನೇಕ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೊಷಣೆ
Weekend forecast: ಈ ರಾಜ್ಯಗಳಲ್ಲಿ ಮುಂದಿನ ಕೆಲವು ದಿನ ಭಾರೀ ಮಳೆಯಾಗುವ ಎಚ್ಚರಿಕೆ title=
ಅನೇಕ ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ (Photo Courtesy: @Zee News)

ನವದೆಹಲಿ: ಮುಂದಿನ 5 ದಿನಗಳಲ್ಲಿ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(India Meteorological Department) ಎಚ್ಚರಿಕೆ ನೀಡಿದೆ. ಕರ್ನಾಟಕ, ದೆಹಲಿ, ಪಂಜಾಬ್, ಹರಿಯಾಣ, ವಾಯುವ್ಯ ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯ ಜೊತೆಗೆ ಚದುರಿದಂತೆ ವ್ಯಾಪಕ ಮಳೆಯಾಗಲಿದೆ ಅಂತಾ ಐಎಂಡಿ ಮುನ್ಸೂಚನೆ ನೀಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಮತ್ತು ಭಾನುವಾರ ಸಾಧಾರಣ ತೀವ್ರತೆಯ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ವಾಯುವ್ಯ ಭಾರತದಲ್ಲಿ ಸೆಪ್ಟೆಂಬರ್ 6 ರಿಂದ ಚದುರಿದಂತೆ ವ್ಯಾಪಕ ಮಳೆ(Rainfall)ಯ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಬಹಿರಂಗಪಡಿಸಿದೆ. ಮುಂದಿನ ವಾರದಲ್ಲಿ ದೇಶದ ಹಲವು ಭಾಗಗಳಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸೆ.7 ರಂದು ಹಿಮಾಚಲ ಪ್ರದೇಶ, ಸೆ.6 ರಂದು ಪಶ್ಚಿಮ ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ ಮತ್ತು ಸೆ.7 ರಂದು ಹರಿಯಾಣದಲ್ಲಿ ಹೆಚ್ಚಿನ ಮಳೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕ: 

ರಾಜಧಾನಿ ಬೆಂಗಳೂರು(Bengaluru) ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳಲ್ಲಿ ವರುಣನ ಆರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಬೆಂಗಳೂರು ನಗರದ ಮುನ್ಸೂಚನೆಯ ಪ್ರಕಾರ, ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ ಅನೇಕ ಜಿಲ್ಲೆಗಳಲ್ಲಿಯೂ ಮುಂಗಾರು ಚುರುಕಾಗಲಿದ್ದು, ಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್(Yellow Alert) ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆ ಮೊಡಕವಿದ ವಾತಾವರಣವಿರಲಿದ್ದು, ಮಧ್ಯಾಹ್ನ ಮತ್ತು ಸಂಜೆ ವೇಳೆ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆಯ ಹವಾಮಾನ ತಜ್ಞ ಸದಾನಂದ ಅಡಿಗ ಹೇಳಿದ್ದಾರೆ.

ನವದೆಹಲಿ:

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಐಎಂಡಿ(IMD Weather Prediction)ಶನಿವಾರದಂದು ಯೆಲ್ಲೋ ಅಲರ್ಟ್ ಘೋಷಿಸಿದೆ. ಲಘು ಅಥವಾ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಶನಿವಾರದಂದು ಮೋಡ ಕವಿದ ವಾತಾವರಣದ ಜೊತೆಗೆ ಲಘು ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಹವಾಮಾನ ಇಲಾಖೆಯು ಭಾನುವಾರ ಗ್ರೀನ್ ಅಲರ್ಟ್  ಮತ್ತು ಸೋಮವಾರದಿಂದ ಗುರುವಾರದವರೆಗೆ ಯೆಲ್ಲೋ ಅಲರ್ಟ್ ನೀಡಿದೆ. ಮಳೆಯಿಂದ ಅನೇಕ ಪ್ರದೇಶಗಳು ಜಲಾವೃತವಾಗುವ ಹಿನ್ನೆಲೆ ದೆಹಲಿ ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಲು ನಿರ್ಧರಿಸಿದೆ. ಇದಲ್ಲದೆ ಮಳೆಗಾಲದಲ್ಲಿ ಎದುರಾಗುವ ಪ್ರವಾಹ ಪರಿಸ್ಥಿತಿ ಸಮಸ್ಯೆ ಪರಿಹರಿಸಲು ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಯೋಜನೆಗಳನ್ನು ಸಿದ್ಧಪಡಿಸಿದೆ.

ಇದನ್ನೂ ಓದಿ: ಬಿಜೆಪಿ ಮತ್ತು ಪರಿವಾರದ ಮಂದಿ ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದವರಲ್ಲ-ಸಿದ್ಧರಾಮಯ್ಯ

ಮುಂಬೈ:

ಶನಿವಾರ ಬೆಳಗ್ಗೆ ವಾಣಿಜ್ಯ ನಗರಿ ಮುಂಬೈ(Mumbai)ನ ಹಲವು ಭಾಗಗಳಲ್ಲಿ ಮಳೆಯಾಗಿದೆ. ಐಎಂಡಿ ಪ್ರಕಾರ, ಮುಂಬೈನಲ್ಲಿ ಇಂದು ಸಾಧಾರಣ ಮಳೆಯೊಂದಿಗೆ ಮೋಡ ಕವಿದ ವಾತಾವರಣವಿರಲಿದೆ. ನಿನ್ನೆ ರಾತ್ರಿ(ಶುಕ್ರವಾರ)ಯಿಂದ ಮುಂಬೈನಲ್ಲಿ ಮಳೆಯಾಗುತ್ತಿದೆ. ಮಹಾರಾಷ್ಟ್ರದ ಇತರ ಭಾಗಗಳಲ್ಲೂ ಆಗಾಗ ಮಳೆಯಾಗುತ್ತಿದೆ. ಮುಂಬೈನ ಪ್ರಾದೇಶಿಕ ಹವಾಮಾನ ಕೇಂದ್ರವು ಶನಿವಾರ ನಗರ ಮತ್ತು ಉಪನಗರಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಮುಂದಿನ 24 ಗಂಟೆಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

ಕೋಲ್ಕತ್ತಾ:

ಈ ವಾರಾಂತ್ಯದಲ್ಲಿ ಕೋಲ್ಕತ್ತಾ(Kolkatta) ನಗರದಲ್ಲಿ ಗುಡುಗು ಮತ್ತು ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಶುಕ್ರವಾರ ಹೇಳಿದೆ. ವಾಯುವ್ಯ ಬಂಗಾಳಕೊಲ್ಲಿಯ ಮೇಲಿನ ಕಡಿಮೆ ಒತ್ತಡದಿಂದ ಕೋಲ್ಕತ್ತಾದಲ್ಲಿ ಸೋಮವಾರ ಮತ್ತು ಮಂಗಳವಾರ ಸಾಧಾರಣ ಮಳೆಯಾಗಬಹುದು. ಕೆಲವು ದಕ್ಷಿಣ ಬಂಗಾಳ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ:

ಮುಂದಿನ 5 ದಿನಗಳವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಕೆಲವು ಪ್ರದೇಶಗಳಲ್ಲಿ ಹಗುರ ಮತ್ತು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಕಚೇರಿ ಗುರುವಾರ ತಿಳಿಸಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಲ್ಲಿ ಸೆಪ್ಟೆಂಬರ್ 6 ರವರೆಗೆ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 48 ಗಂಟೆಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ.

ಹಿಮಾಚಲ ಪ್ರದೇಶ:

ಮುಂಗಾರು ಮಳೆಯು ಸೆಪ್ಟೆಂಬರ್ 6 ರಿಂದ ರಾಜ್ಯದಲ್ಲಿ ಮತ್ತೆ ಸಕ್ರಿಯವಾಗಲಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ. ಐಎಂಡಿ ಪ್ರಕಾರ ಸೆಪ್ಟೆಂಬರ್ 20ರ ನಂತರ ಮಳೆ ಮುಂದುವರಿಯಲಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಐಎಂಡಿ ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ. ‘ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಮಳೆ ಸಾಮಾನ್ಯವಾಗಿದೆ. ಶಿಮ್ಲಾ, ಹಮೀರ್‌ಪುರ್, ಬಿಲಾಸ್ಪೂರ್, ಸೋಲನ್, ಉನಾ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ’ ಎಂದು ಐಎಂಡಿ ಹಿಮಾಚಲ ಪ್ರದೇಶದ ನಿರ್ದೇಶಕ ಸುರೇಂದರ್ ಪಾಲ್ ತಿಳಿಸಿದ್ದಾರೆ.   

ಇದನ್ನೂ ಓದಿ: ದ್ವಿತೀಯ PUC ವಿದ್ಯಾರ್ಥಿಗಳೇ ಗಮನಿಸಿ : KCET 2021 ರ ಪರೀಕ್ಷೆಯ ಕೀ ಉತ್ತರ ಬಿಡುಗಡೆ : ಹೀಗೆ ಪರಿಶೀಲಿಸಿ

ಗುಜರಾತ್:

ಹವಾಮಾನ ಇಲಾಖೆ ಪ್ರಕಾರ ಗುಜರಾತ್‌ನಲ್ಲಿ ಚಂಡಮಾರುತದ ಪ್ರಭಾವದಿಂದ ವಿವಿಧ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ತಿಳಿದುಬಂದಿದೆ.  

ಆಂಧ್ರ ಪ್ರದೇಶ:

ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಶುಕ್ರವಾರ ಕಾಣಿಸಿಕೊಂಡ ಮತ್ತೊಂದು ಚಂಡಮಾರುತ ಆಂಧ್ರಪ್ರದೇಶದ ಕರಾವಳಿಯಲ್ಲಿ ಕಂಡುಬಂದಿದೆ ಎಂದು ಹವಾಮಾನ ಇಲಾಖೆ ಬಹಿರಂಗಪಡಿಸಿದೆ. ಇದು ಬಹುಶಃ ಈಶಾನ್ಯ ದಿಕ್ಕಿಗೆ ಚಲಿಸಲಿದ್ದು, ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಶನಿವಾರ ಮತ್ತು ಭಾನುವಾರ ಬಲಗೊಳ್ಳುತ್ತದೆ. ಸೋಮವಾರ ಈ ಚಂಡಮಾರುತವು ಒಡಿಶಾ ಕರಾವಳಿಯ ವಾಯುವ್ಯ ಬಂಗಾಳ ಕೊಲ್ಲಿಯತ್ತ ಚಲಿಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ತೆಲಂಗಾಣ:

ನೈಋತ್ಯ ಮುಂಗಾರು ತೆಲಂಗಾಣದಲ್ಲಿ ಸಕ್ರಿಯವಾಗಿದೆ. ನಲ್ಗೊಂಡ, ಯಾದಾದ್ರಿ-ಭೋಂಗೀರ್ ಮತ್ತು ಇತರ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 3ರ ಸಂಜೆ 4 ಗಂಟೆಯಿಂದ ಸೆಪ್ಟೆಂಬರ್ 4ರ ಬೆಳಿಗ್ಗೆ 8.30 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ಅವಧಿಯಲ್ಲಿ ನಿರ್ಮಲ್, ನಿಜಾಮಾಬಾದ್, ಜಗ್ತಿಯಲ್ ಮತ್ತು ಇತರ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಮಳೆಯಾಗಲಿದೆ ಅಂತಾ ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News