ನವದೆಹಲಿ: ಐದು ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ವಿಜಯಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಮಾತನಾಡಲಾಗುತ್ತಿದೆ. ಇದೆಲ್ಲದರ ನಡುವೆ ಭಾರತಕ್ಕೆ ಪ್ರಮುಖವಾಗಿ ಬೇಕಿರುವ ಓರ್ವ ವ್ಯಕ್ತಿಯು ವಿಜಯಕ್ಕಾಗಿ ಸಚಿನ್ ಪೈಲಟ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಅಭಿನಂದಿಸಿದ್ದಾರೆ.
ಮದ್ಯದ ದೊರೆ ವಿಜಯ ಮಲ್ಯ ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಚುನಾವಣೆಯ ಗೆಲುವಿಗಾಗಿ ಸಚಿನ್ ಪೈಲಟ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಅಭಿನಂದಿಸಿದ್ದಾರೆ.
ಫಲಿತಾಂಶ ಘೋಷಣೆಯ ಒಂದು ದಿನದ ಬಳಿಕ ಅಭಿನಂದನೆ:
ವಿಜಯ್ ಮಲ್ಯ ತನ್ನ ಟ್ವಿಟ್ಟರ್ ಖಾತೆಯಲ್ಲಿ "ಯುವ ಚಾಂಪಿಯನ್, ಸಚಿನ್ ಪೈಲಟ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾಗೆ ಅಭಿನಂದನೆಗಳು" ಎಂದು ಬರೆದಿದ್ದಾರೆ. ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ಒಂದು ದಿನದ ಬಳಿಕ ಮಲ್ಯ ಈ ಟ್ವೀಟ್ ಮಾಡಿದ್ದಾರೆ. ಸಚಿನ್ ಪೈಲಟ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಹೆಸರು ಮುಖ್ಯಮಂತ್ರಿ ರೇಸ್ ನಲ್ಲಿ ಕೇಳಿಬರುತ್ತಿರುವ ಈ ಸಮಯದಲ್ಲಿ ಮಲ್ಯ ಟ್ವೀಟ್ ಬಂದಿದೆ.
Young Champions @SachinPilot and @JM_Scindia Many congratulations.
— Vijay Mallya (@TheVijayMallya) December 13, 2018
ಭಾರತೀಯ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಪಲಾಯನ ಮಾಡಿದ್ದ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಿ ಲಂಡನ್ನಿನ ವೆಸ್ಟ್ ಮಿನಿಸ್ಟರ್ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.
ವಿಜಯ್ ಮಲ್ಯ ಗಡಿಪಾರು ವಿಷಯಕ್ಕೆ ಸಂಬಂಧಿಸಿದಂತೆ ಡಿ. 10ರಂದು ವಿಚಾರಣೆ ನಡೆಸಿದ ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್, ಹಣಕಾಸಿನ ವಿಚಾರದಲ್ಲಿ ಹಾಗೂ ವಂಚನೆಗೆ ಸಂಬಂಧಪಟ್ಟಂತೆ ಮಲ್ಯ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಗಳಿದ್ದು ಗಡಿಪಾರು ಮಾಡಲು ಆದೇಶ ನೀಡಿದೆ.
ತೀರ್ಪು ಪ್ರಶ್ನಿಸಿ ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ತಿಳಿಸಿದ್ದಾರೆ. ವಿಜಯ್ ಮಲ್ಯ ಅವರು ಕೆಲ ದಿನಗಳ ಹಿಂದಷ್ಟೇ ಬ್ಯಾಂಕ್ ಸಾಲದ ಶೇ.100 ಅಸಲು ಮೊತ್ತವನ್ನು ಮರುಪಾವತಿಸಲು ಸಿದ್ಧ ಎಂದು ಹೇಳಿಕೆ ನೀಡಿದ್ದರು. ಆದಾಗ್ಯೂ, ಲಂಡನ್ನ ವೆಸ್ಟ್ ಮಿನ್ಸ್ಟರ್ ಕೋರ್ಟ್ ಮಲ್ಯ ಗಡೀಪಾರಿಗೆ ಆದೇಶಿಸಿರುವುದು ಮಹತ್ತರ ಬೆಳವಣಿಗೆಯಾಗಿದೆ.