ನವದೆಹಲಿ: ಕೊರೊನಾ 3ನೇ ಅಲೆ(COVID-19 3rd Wave ) ಮನೆಯ ಬಾಗಿಲು ತಟ್ಟುತ್ತಿದೆ. ಇದು ಎಚ್ಚರಿಕೆ ಗಂಟೆ. ಇದನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ದೇಶದಲ್ಲಿ ಮತ್ತೆ ದೊಡ್ಡ ದುರಂತ ನಡೆಯುವ ಮುನ್ಸೂಚನೆ ಇದೆ. ಹೌದು, ಇಡೀ ದೇಶದ ಜನತೇ ಇದೀಗ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿ ಮುಳುಗಿದೆ. ಹಬ್ಬದ ಖರೀದಿ ಭರಾಟೆ ಜೋರಾಗಿಯೇ ನಡೆಯುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಜನವೋ ಜನ. ಈ ರೀತಿ ಜನರು ಗುಂಪುಗೂಡಿ ದೀಪಾವಳಿ ಹಬ್ಬದ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.
ಹಬ್ಬದ ಖರೀದಿಯ ಭರಾಟೆಯಲ್ಲಿ ಜನರು ಕೊರೊನಾವೈರಸ್(CoronaVirus) ಎಂಬ ಮಹಾಮಾರಿಯನ್ನೇ ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ. ದೇಶದಲ್ಲಿ ಈಗಾಗಲೇ ಕೋವಿಡ್-19ನ ಎರಡು ಅಲೆಗಳು ಸೃಷ್ಟಿಸಿದ ಅವಾಂತರದ ನೆನಪು ಇನ್ನೂ ಮಾಸಿಲ್ಲ. ಆದರೆ ಜನರು ಕೋವಿಡ್-19 ಪ್ರೋಟೋಕಾಲ್ ಗಳನ್ನು ಪಾಲನೆ ಮಾಡದೆ ಹಬ್ಬದ ಖರೀದಿಯಲ್ಲಿ ತೋಡಗಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಸೇರುವ ಜನರು ಸಾಮಾಜಿಕ ಅಂತರವನ್ನು ಮರೆತಿದ್ದಾರೆ. ಕಡ್ಡಾಯ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದನ್ನು ಮರೆತಿದ್ದಾರೆ.
ಇದನ್ನೂ ಓದಿ: Change Bank Branch: ಈ ವಿಧಾನವನ್ನು ಅನುಸರಿಸಿ ಕುಳಿತಲ್ಲೇ ಬ್ಯಾಂಕ್ ಬ್ರಾಂಚ್ ಬದಲಾಯಿಸಬಹುದು
ಭಾರತದಲ್ಲಿ COVID-19 ಪರಿಸ್ಥಿತಿ
ಎಲ್ಲೆಂದರಲ್ಲಿ ಗುಂಪು ಸೇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು(Social distancing) ಅನೇಕ ರಾಜ್ಯಗಳಲ್ಲಿ ಕೊರೊನಾ ವೈರಸ್ ಹರಡುವ ಭಯ ಮೂಡಿಸಿದೆ. ಜನರು ಮಾರಕ ವೈರಸ್ ಬಗ್ಗೆ ನಿರ್ಲಕ್ಷ್ಯ ಮನೋಭಾವನೆ ಹೊಂದಿದ್ದು, ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಲಕ್ಷಣ ಗೋಚರಿಸುತ್ತಿದೆ. ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿವೆ. ಇದು ಹೀಗೆ ಮುಂದುವರಿದರೆ 3ನೇ ಅಲೆಯ ಹೊಡೆತಕ್ಕೆ ದೇಶ ಸಿಲುಕುವ ಸಾಧ್ಯತೆ ಇದೆ.
ಜನರಿಂದ ಕಿಕ್ಕಿರಿದ ಮಾರುಕಟ್ಟೆಗಳು ಮತ್ತು ನಾಗರಿಕರ ಬೇಜವಾಬ್ದಾರಿ ವರ್ತನೆಯ ಜೊತೆಗೆ ಹೆಚ್ಚಿನ ಜನರು ಲಸಿಕೆ(Corona Vaccine) ಹಾಕಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದು ಸರ್ಕಾರಗಳಿಗೆ ದೊಡ್ಡ ತಲೆನೋವಾಗಿದೆ. ಇತ್ತೀಚೆಗೆ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಇಳಿಕೆಯಾಗುತ್ತಿದೆ. ಜನರೇ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳದಿದ್ದರೆ ಸರ್ಕಾರ, ಆರೋಗ್ಯ ಇಲಾಖೆ ಏನು ಮಾಡಬೇಕೆಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: Diwali 2021: ಹಸಿರು ಪಟಾಕಿಗಳು ಯಾವುವು, ಅವು ಸಾಮಾನ್ಯ ಪಟಾಕಿಗಳಿಗಿಂತ ಹೇಗೆ ಭಿನ್ನವಾಗಿವೆ?
3ನೇ ಅಲೆಯನ್ನು ಎದುರಿಸಲು ಸರ್ಕಾರದ ಸಿದ್ಧತೆ
ಕೊರೊನಾವೈರಸ್(CoronaVirus) ಸೋಂಕಿನ ಉಲ್ಬಣವನ್ನು ನಿಭಾಯಿಸಲು ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪ್ರಸ್ತುತ ದೇಶದಲ್ಲಿ COVID-19 ರೋಗಿಗಳಿಗೆ 8.36 ಲಕ್ಷ ಆಸ್ಪತ್ರೆ ಹಾಸಿಗೆಗಳು ಲಭ್ಯವಿದೆ. ಜೊತೆಗೆ ಮೀಸಲಾದ ಆರೈಕೆ ಕೇಂದ್ರಗಳಲ್ಲಿ ಸುಮಾರು 1 ಮಿಲಿಯನ್ ಪ್ರತ್ಯೇಕ ಹಾಸಿಗೆಗಳು ಲಭ್ಯವಿವೆ. 4.86 ಲಕ್ಷ ಆಮ್ಲಜನಕ ಬೆಂಬಲಿತ ಹಾಸಿಗೆಗಳು ಮತ್ತು 1.35 ಲಕ್ಷ ಐಸಿಯು ಹಾಸಿಗೆಗಳು ಲಭ್ಯವಿದೆ ಎಂದು ತಿಳಿದುಬಂದಿದೆ. ‘ನಾವು ಪ್ರತಿದಿನ 4.5 ರಿಂದ 5 ಲಕ್ಷ COVID-19 ಪ್ರಕರಣಗಳನ್ನು ಎದುರಿಸಲು ಸಿದ್ಧರಿದ್ದೇವೆ. ಈಗ ದೇಶದಲ್ಲಿ ಲಸಿಕೆ ಲಭ್ಯತೆಯ ಯಾವುದೇ ಸಮಸ್ಯೆ ಇಲ್ಲ’ವೆಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ