ಪಿ.ಚಿದಂಬರಂ ಅರ್ಜಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿದ ಸುಪ್ರೀಂ

ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಬಂಧನಕ್ಕೆ ತಡೆಯಾಜ್ಞೆ ನೀಡಲು ಭಾರತದ ಮುಖ್ಯ ನ್ಯಾಯಮೂರ್ತಿ ಬುಧವಾರದಂದು ನಿರಾಕರಿಸಿದ್ದಾರೆ.ಈಗ ಬಂಧನದ ವಿರುದ್ಧ ರಕ್ಷಣೆ ನೀಡುವಂತೆ ಚಿದಂಬರಂ ಅವರ ಮನವಿಯ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರಕ್ಕೆ ಮುಂದೂಡಲಾಗಿದೆ.

Last Updated : Aug 21, 2019, 08:16 PM IST
ಪಿ.ಚಿದಂಬರಂ ಅರ್ಜಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿದ ಸುಪ್ರೀಂ  title=

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಬಂಧನಕ್ಕೆ ತಡೆಯಾಜ್ಞೆ ನೀಡಲು ಭಾರತದ ಮುಖ್ಯ ನ್ಯಾಯಮೂರ್ತಿ ಬುಧವಾರದಂದು ನಿರಾಕರಿಸಿದ್ದಾರೆ.ಈಗ ಬಂಧನದ ವಿರುದ್ಧ ರಕ್ಷಣೆ ನೀಡುವಂತೆ ಚಿದಂಬರಂ ಅವರ ಮನವಿಯ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರಕ್ಕೆ ಮುಂದೂಡಲಾಗಿದೆ.

ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನಂತರ ಮಾಜಿ ಹಣಕಾಸು ಸಚಿವ ಚಿದಂಬರಂ ನಾಪತ್ತೆಯಾಗಿದ್ದಾರೆ. ಈಗ ಅವರಿಗೆ ಬಂಧನದ ಭೀತಿ ಎದುರಾಗಿದೆ.ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆ ತನಕ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಎರಡು ಪ್ರತ್ಯೇಕ ತಂಡಗಳು ದೆಹಲಿಯ ಜೋರ್ ಬಾಗ್‌ನಲ್ಲಿರುವ ಅವರ ನಿವಾಸಕ್ಕೆ ಹೋಗಿದ್ದವು. ಆದರೆ ಚಿದಂಬರಂ ಅಧಿಕಾರಿಗಳ ಕೈ ಸಿಗದೆ ನಾಪತ್ತೆಯಾಗಿದ್ದಾರೆ.ಈಗ ಅಧಿಕಾರಿಗಳ ಕೈ ಸಿಗದೇ ಇರುವುದರಿಂದ ಅವರ ವಿರುದ್ಧ ಸಿಬಿಐ ಲುಕ್ ಔಟ್ ನೋಟಿಸ್ ನೀಡಿದೆ.

ಈ ಹಿಂದಿನ ದಿನ, ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠವು ಚಿದಂಬರಂ ಅವರ ಮನವಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಉಲ್ಲೇಖಿಸಿ, ಸಿಜೆಐ ಅವರ ಬಂಧನಕ್ಕೆ ತಡೆ ನೀಡಬಹುದು ಎಂದು ತಿಳಿಸಿತ್ತು. ಇದೇ ವೇಳೆ, ಐಎನ್ಎಕ್ಸ್ ಮಾಧ್ಯಮ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ಕೋರಿ ಚಿದಂಬರಂ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಎರಡೂ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಟ್‌ಗಳನ್ನು ಸಲ್ಲಿಸಿವೆ. ಇದನ್ನು ಅನುಸರಿಸಿ, ತನಿಖಾ ಸಂಸ್ಥೆಗಳ ವಿಚಾರಣೆ ಮಾಡದೆ ಸುಪ್ರೀಂಕೋರ್ಟ್ ಚಿದಂಬರಂ ಅವರ ಮನವಿಯ ಮೇಲೆ ಯಾವುದೇ ಆದೇಶವನ್ನು ರವಾನಿಸಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ಇದುವರೆಗೆ ಚಿದಂಬರಂ ಇರುವ ಸ್ಥಳದ ಬಗ್ಗೆ ತನಿಖಾ ಸಂಸ್ಥೆಗಳಿಗೆ ಇನ್ನೂ ಸುಳಿವು ದೊರಕಿಲ್ಲ ಎನ್ನಲಾಗಿದೆ.ಚಿದಂಬರಂ ಮತ್ತು ಅವರ ಮಗ ಕಾರ್ತಿ ಚಿದಂಬರಂ ಅವರನ್ನು ಇಡಿ ಮತ್ತು ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತನಿಖೆ ನಡೆಸಲಾಗುತ್ತಿದೆ. ಇನ್ನೊಂದೆಡೆ ಚಿದಂಬರ್ ನಾಪತ್ತೆಯಾಗಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸದಿರುವ ಮೂಲಕ ಚಿದಂಬರಂ ಅವರು ವಿಜಯ್ ಮಲ್ಯ, ನೀರವ್ ಮೋದಿ ಅವರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದೆ.

Trending News