ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಡುವ ಸಲುವಾಗಿ ಗುಜರಾತ್ ಹೈಕೋರ್ಟ್ ವಿಧಿಸಿರುವ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
2015ರಲ್ಲಿ ಗುಜರಾತ್‌ನಲ್ಲಿ ಪಾಟೀದಾರ್ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ವೇಳೆ ಮೆಹಸಾನಾದಲ್ಲಿ ನಡೆದ ದೊಂಬಿ ಪ್ರಕರಣದಲ್ಲಿ ಹಾರ್ದಿಕ್‌ಗೆ ಮೆಹಸಾನಾ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿತ್ತು. ಈ ಬಗ್ಗೆ ಹಾರ್ದಿಕ್ ಪಟೇಲ್ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ.ಶಾಂತನಗೌಡರ್ ಮತ್ತು ನವೀನ್ ಸಿನ್ಹಾ ಅವರಿದ್ದ ಪೀಠ "ಅಧೀನ ನ್ಯಾಯಾಲಯ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಷ್ಟೇ ಆದೇಶ ಹೊರಡಿಸಿರುವುದರಿಂದ ತುರ್ತು ವಿಚಾರಣೆಯ ಅಗತ್ಯವಿಲ್ಲ" ಎಂದು ಹೇಳಿದೆ.
Supreme Court declines urgent hearing of Patidar leader Hardik Patel's plea seeking a suspension of his conviction in a 2015 case relating to rioting, so that he can contest the upcoming Lok Sabha elections. (file pic) pic.twitter.com/5AMtzD3SqC
— ANI (@ANI) April 2, 2019
2019ರ ಲೋಕಸಭಾ ಚುನಾವಣೆಗೆ ಜಾಮ್‌ನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಹಾರ್ದಿಕ್ ಪಟೇಲ್, ನ್ಯಾಯಾಲಯದ ಆದೇಶದಿಂದಾಗಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಜಾಮ್ ನಗರದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಏಪ್ರಿಲ್ 4 ಕಡೇ ದಿನವಾಗಿದೆ.