ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ವಿವರಣೆ ಕೋರಿ ಕೇಂದ್ರಕ್ಕೆ ನೋಟೀಸ್ ಜಾರಿ ಮಾಡಿದ್ದು, ನೋಟಿಸ್ಗೆ ಇನ್ನು ನಾಲ್ಕು ವಾರಗಳಲ್ಲಿ ವಿವರಣೆ ನೀಡುವಂತೆ ಸೂಚಿಸಿದೆ.
ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲು ಕಲ್ಪಿಸುವ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪರಿಶೀಲಿಸಲಿರುವ ಸುಪ್ರೀಂಕೋರ್ಟ್, ಈ ಬಗೆಗಿನ ಕಾನೂನು ಜಾರಿಗೆ ತಡೆ ನೀಡಲು ನಿರಾಕರಿಸಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10ರಷ್ಟು ಮೀಸಲಾತಿಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ನ ಪೀಠ ಇಂದು ವಿಚಾರಣೆ ನಡೆಸಿತು. ಮೀಸಲು 50% ಕ್ಕಿಂತಲೂ ಹೆಚ್ಚಿರಬಾರದು ಎಂದು ಸುಪ್ರೀಂ ಕೋರ್ಟ್ ಮಿತಿ ವಿಧಿಸಿದೆ. ಆದರೆ, ಸದ್ಯದ ಕಾನೂನಿನಿಂದಾಗಿ ಆ ಮಿತಿ ಮೀರಲಿದೆ. ಅಲ್ಲದೆ, 1992ರ ಮಂಡಲ್ ಆಯೋಗದ ಪ್ರಕಾರ ಮೀಸಲಾತಿಗೆ ಆರ್ಥಿಕ ಸ್ಥಿತಿಗತಿ ಮಾನದಂಡವಲ್ಲ. ಹೀಗಾಗಿ ಈ ಕಾನೂನು ಅಸಾಂವಿಧಾನಿಕ ಎಂಬುದು ಅರ್ಜಿದಾರರ ವಾದವಾಗಿದೆ.
ಮಸೂದೆ ಪ್ರಕಾರ, ಮೀಸಲಾತಿ ಸೂತ್ರ 50% + 10% ಆಗಿರುತ್ತದೆ. 8 ಲಕ್ಷ ವಾರ್ಷಿಕ ಆದಾಯಕ್ಕಿಂತ ಕಡಿಮೆಯಿರುವವರು ಮೀಸಲಾತಿಯ ಲಾಭ ಪಡೆಯುತ್ತಾರೆ. 5 ಎಕರೆ ಭೂಮಿಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ಮೇಲ್ವರ್ಗದವರು ಮೀಸಲಾತಿಯ ಪ್ರಯೋಜನ ಪಡೆಯುತ್ತಾರೆ. ಈ ಮೀಸಲಾತಿಯ ಲಾಭವು 1000 ಚದರ ಅಡಿಗಳಷ್ಟು ಕಡಿಮೆ ವಸತಿ ಭೂಮಿಯನ್ನು ಹೊಂದಿರುವವರಿಗೆ ಲಭ್ಯವಿರುತ್ತದೆ.
ಸೂಚಿಸಲಾದ ಪುರಸಭಾ ಪ್ರದೇಶದ 100 ಗಜಗಳಿಗಿಂತಲೂ ಕಡಿಮೆ ವಸತಿ ಪ್ರದೇಶ ಹೊಂದಿರುವವರು ಈ ಮೀಸಲಾತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೆ, ನಾನ್-ಅಧಿಸೂಚನೆಯ ಪುರಸಭೆಯ ಪ್ರದೇಶದ 200 ಗಜಗಳಿಗಿಂತಲೂ ಕಡಿಮೆ ವಸತಿ ಪ್ರದೇಶವನ್ನು ಹೊಂದಿರುವ ಜನರಿಗೆ ಈ ಮೀಸಲಾತಿಯ ಪ್ರಯೋಜನ ದೊರೆಯುತ್ತದೆ.