ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಜೋತಾ ಎಕ್ಸ್ಪ್ರೆಸ್ ರೈಲು ಸಂಚಾರ ಮಾರ್ಚ್ 3 ರಿಂದ ಮತ್ತೆ ಆರಂಭವಾಗಲಿದೆ ಎಂದು ಭಾರತೀಯ ರೈಲ್ವೆ ಶನಿವಾರದಂದು ಘೋಷಿಸಿದೆ.
ಸುದ್ದಿ ಸಂಸ್ಥೆ ANI ಪ್ರಕಾರ ರೈಲು ಸಂಚಾರ ಭಾನುವಾರ (ಮಾರ್ಚ್ 3) ಭಾರತದಿಂದ ಆರಂಭವಾಗಲಿದೆ ಎನ್ನಲಾಗಿದೆ.ಎರಡು ದೇಶಗಳು ಮತ್ತೆ ರೈಲ್ವೆ ಸೇವೆಯನ್ನು ಪ್ರಾರಂಭಿಸಲು ಒಪ್ಪಿದ ಬಳಿಕ ಈ ಘೋಷಣೆಯನ್ನು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನವು ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಬಿಡುಗಡೆ ಮಾಡಿದ ನಂತರ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.ಭಾರತೀಯ ವಾಯುಪಡೆಯು ವಾಯುದಾಳಿ ನಡೆಸಿದ ಬಳಿಕ ಪಾಕಿಸ್ತಾನ ತನ್ನ ಸೇವೆಗಳನ್ನು ಸ್ಥಗಿತಗೊಳಿಸಿತ್ತು, ಇದಾದ ನಂತರ ಭಾರತವು ಸಹಿತ ಫೆಬ್ರವರಿ 28 ರಂದು ಸಂಜೋತಾ ಎಕ್ಸ್ಪ್ರೆಸ್ ಕಾರ್ಯಾಚರಣೆಯನ್ನು ರದ್ದುಗೊಳಿಸಿತು.
Samjhauta Express services to resume from India from March 3. pic.twitter.com/jVCpJsMtK1
— ANI (@ANI) March 2, 2019
ಈಗ ಸಂಜೋತಾ ಎಕ್ಸ್ ಪ್ರೆಸ್ ರೈಲು ಭಾನುವಾರದಂದು ಭಾರತದಿಂದ ಹೊರಡಲಿದೆ,ಅತ್ತ ಕಡೆ ಪಾಕ್ ನ ಲಾಹೋರ್ ನಿಂದ ಸೋಮವಾರ ಭಾರತದ ಕಡೆ ಪ್ರಯಾಣ ಬೆಳೆಸಲಿದೆ ಎನ್ನಲಾಗಿದೆ.ಭಾರತದ ಕಡೆ ರೈಲು ದೆಹಲಿಯಿಂದ ಅತ್ತಾರಿಯವರೆಗೆ ಸಾಗುತ್ತದೆ. ಅತ್ತ ಪಾಕಿಸ್ತಾನದ ಕಡೆ ಲಾಹೋರ್ನಿಂದ ವಾಘಾದ ವರೆಗೆ ರೈಲು ಸಾಗಲಿದೆ. ಪುಲ್ವಾಮಾ ದಾಳಿಯ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡು ಬಂದಿತ್ತು ಇದಾದ ಬೆನ್ನಲ್ಲಿ ರೈಲ್ವೆ ಕಾರ್ಯಾಚರಣೆಯನ್ನು ಎರಡು ದೇಶಗಳು ಸ್ಥಗಿತಗೊಳಿಸಿದ್ದವು.