ಮಾರ್ಚ್ 4ರಿಂದ 'ಏಕತಾಮೂರ್ತಿ' ಸ್ಥಳಕ್ಕೆ ವಿಶೇಷ ರೈಲು ಸಂಪರ್ಕ

2018ರ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು  ಸರ್ದಾರ್ ಪಟೇಲ್ ರ ಜನ್ಮದಿನದ ನಿಮಿತ್ತ ವಿಶ್ವದಲ್ಲೇ ಅತಿ ಎತ್ತರದ 182 ಮೀಟರ್  'ಏಕತೆಯ ಪ್ರತಿಮೆ'ಯನ್ನು ಲೋಕಾರ್ಪಣೆಗೊಳಿಸಿದ್ದರು. 

Last Updated : Feb 23, 2019, 12:44 PM IST
ಮಾರ್ಚ್ 4ರಿಂದ 'ಏಕತಾಮೂರ್ತಿ' ಸ್ಥಳಕ್ಕೆ ವಿಶೇಷ ರೈಲು ಸಂಪರ್ಕ  title=

ನವದೆಹಲಿ: ವಿಶ್ವದ ಅತಿ ಎತ್ತರದ 'ಏಕತಾಮೂರ್ತಿ' ನೋಡಲು ತೆರಳುವ ಪ್ರವಾಸಿಗರಿಗಾಗಿ ಭಾರತೀಯ ರೈಲ್ವೆ ಮಾರ್ಚ್ 4 ರಿಂದ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಲಿದೆ.  

ಸರ್ಕಾರದ 'ಭಾರತ್ ದರ್ಶನ್' ಯೋಜನೆ ಅಡಿಯಲ್ಲಿ ಮಾರ್ಚ್ 4 ರಿಂದ ಚಂಡೀಗಢದಿಂದ ಆರಂಭವಾಗುವ ಏಳು ರಾತ್ರಿ ಮತ್ತು ಎಂಟು ದಿನಗಳ ಪ್ರವಾಸ ಪ್ಯಾಕೇಜ್ ನಲ್ಲಿ ಈ ರೈಲು ಚಲಿಸಲಿದೆ.

ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಮಧ್ಯಪ್ರದೇಶ, ಇಂಧೋರ್ ಬಳಿಯಿರುವ ಓಂಕಾರೇಶ್ವರ ಜ್ಯೋತಿರ್ಲಿಂಗ, ಶಿರಡಿ ಸಾಯಿ ಬಾಬಾ ದರ್ಶನ್, ಮಹಾರಾಷ್ಟ್ರದ ನಾಶಿಕ್ನಲ್ಲಿರುವ ಟ್ರೈಂಬಕೇಶ್ವರ ಮತ್ತು ಔರಂಗಾಬಾದ್ನಲ್ಲಿರುವ ಘೃಷ್ಣೇಶ್ವರ ಜ್ಯೋತಿರ್ಲಿಂಗದಂತಹ ಪವಿತ್ರ ಸ್ಥಳಗಳನ್ನು ಸಹ ಈ ಪ್ರಯಾಣವು ಒಳಗೊಂಡಿದೆ.

ಈ ಪ್ರವಾಸ ಪ್ಯಾಕೇಜ್ ನಲ್ಲಿ ಪ್ರತಿ ವ್ಯಕ್ತಿಗೆ 7,560 ರೂ. ವೆಚ್ಚ ಭರಿಸಬೇಕಿದ್ದು, ಅನೇಕ ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ಕೇಂದ್ರಗಳನ್ನು ಹೊಂದಿದೆ. ಅವುಗಳೆಂದರೆ ಚಂಡೀಗಢ, ಅಂಬಾಲಾ, ಕುರುಕ್ಷೇತ್ರ, ಕರ್ನಾಲ್, ಪಾಣಿಪತ್, ದೆಹಲಿ ಕ್ಯಾಂಟ್, ರೆವಾರಿ, ಅಲ್ವಾರ್ ಮತ್ತು ಜೈಪುರ್.

"ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಲು ಈ ವಿನ್ಯಾಸ ಮಾಡಲಾಗಿದೆ. ವಡೋದರಾ ನಿಲ್ದಾಣದಲ್ಲಿ ರೈಲು ನಿಲ್ಲಿಸಿ ಪ್ರಯಾಣಿಕರನ್ನು ಬಸ್ ಮೂಲಕ 'ಏಕತಾ ಪ್ರತಿಮೆಯ' ಬಳಿ ಕರೆದೊಯ್ಯಲಾಗುವುದು" ಎನ್ನಲಾಗಿದೆ.

ಗುಜರಾತಿನ ನರ್ಮದಾ ನದಿ ತೀರದಲ್ಲಿ ನಿರ್ಮಾಣವಾಗಿರುವ ವಿಶ್ವದಲ್ಲೇ ಅತಿ ಎತ್ತರದ 182 ಮೀಟರ್  'ಏಕತೆಯ ಪ್ರತಿಮೆ'ಯನ್ನು 2018ರ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು  ಸರ್ದಾರ್ ಪಟೇಲ್ ರ ಜನ್ಮದಿನದ ನಿಮಿತ್ತ ಲೋಕಾರ್ಪಣೆಗೊಳಿಸಿದ್ದರು. 

Trending News