ನವದೆಹಲಿ: ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ 'ಮನ್ ಕೀ ಬಾತ್'' ಕಾರ್ಯಕ್ರಮದ ಮೂಲಕ ದೇಶದ ಜನತೆಯೊಂದಿಗೆ ತಾವು ನಡೆಸುತ್ತಿದ್ದ ಸಂವಾದವನ್ನು ಲೋಕಸಭಾ ಚುನಾವಣೆಯ ಬಳಿಕ ಮತ್ತೆ ಮುಂದುವರೆಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ಪ್ರಸಾರವಾದ 53ನೇ ಸಂಚಿಕೆಯ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. "ಪ್ರಜಾಪ್ರಭುತ್ವದಲ್ಲಿ ಚುನಾವಣೆ ಒಂದು ಉತ್ಸವ ಇದ್ದಂತೆ. ಮುಂದಿನ ಎರಡು ತಿಂಗಳಲ್ಲಿ ಎಲ್ಲರೂ ಆ ಚುನಾವಣೆಯಲ್ಲಿ ಬ್ಯುಸಿ ಆಗುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ನಾನು ನಿಜಕ್ಕೂ ಪ್ರೇಕ್ಷಕನಾಗುವೆ. ಉತ್ತಮ ಪ್ರಜಾತಂತ್ರವನ್ನು ಎದುರುನೋಡುತ್ತಾ ಚುನಾವಣೆ ಬಳಿಕ ಮೇ ತಿಂಗಳ ಕೊನೆಯ ಭಾನುವಾರ ಮುಂದಿನ 'ಮನ್ ಕಿ ಬಾತ್' ನಲ್ಲಿ ಮತ್ತೆ ಬರುತ್ತೇನೆ. ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಸಂವಿಧಾನಬದ್ಧವಾಗಿ ಲಭಿಸಿರುವ ಮತದಾನದ ಹಕ್ಕನ್ನು ಎಲ್ಲರೂ ಉತ್ತಮವಾಗಿ ಬಳಸಿಕೊಳ್ಳಿ ಎಂದು ಮೋದಿ ಕರೆ ನೀಡಿದರು.
ಭಯೋತ್ಪಾದಕರಿಗೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ
ಜಮ್ಮು-ಕಾಶ್ಮೀರದ ಪುಲ್ವಾಮಾ ಧಾಳಿಯ ಬಗ್ಗೆ ಮಾತನಾಡುತ್ತಾ, ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನಮಾಡಿದ ವೀರ ಯೋಧರನ್ನು ನೆನೆದ ಮೋದಿ, ಈ ಯೋಧರ ಸಾವು ದೇಶದಲ್ಲಿ ಭಯೋತ್ಪಾದನೆಯನ್ನು ನಾಶ ಮಾಡಲೇಬೇಕೆಂಬ ಛಲ ಹುಟ್ಟಿಸಿದೆ. ಹೀಗಾಗಿ ಈಗಾಗಲೇ ಭದ್ರತಾ ಪಡೆ ತನ್ನ ಭಾಷೆಯಲ್ಲಿಯೇ ಭಯೋತ್ಪಾದಕರಿಗೆ ಉತ್ತರಿಸಿದೆ ಎಂದರು.
ಯುದ್ಧ ಸ್ಮಾರಕ ಉದ್ಘಾಟನೆ
ಇದೇ ಸಂದರ್ಭದಲ್ಲಿ ತಾವು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ಇಲ್ಲ ಎಂಬ ಸಂಗತಿ ತಿಳಿದು ತುಂಬಾ ಸಂಕಟಪಟ್ಟಿದ್ದಾಗಿ ನರೇಂದ್ರ ಮೋದಿ ಹೇಳಿದರು. ಈ ಹಿನ್ನೆಲೆಯಲ್ಲಿ ಭಾರತದ ಮೊದಲ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಾಪನೆಗೆ ಕ್ರಮ ಕೈಗೊಂಡಿದ್ದಾಗಿ ಹೇಳಿದ ಮೋದಿ, ನವದೆಹಲಿಯ ಇಂಡಿಯಾ ಗೇಟ್ ಸಮೀಪದ ಅಮರ್ ಜವಾನ್ ಜ್ಯೋತಿಗೆ ಹತ್ತಿರದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ಸಿದ್ಧವಾಗಿದೆ. ಇದನ್ನು ಸೋಮವಾರ ಉದ್ಘಾಟಿಸಲಿರುವುದಾಗಿ ಹೇಳಿದರು.
ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಮೋದಿ
ದೇಶಾದ್ಯಂತ ಸದ್ಯದಲ್ಲೇ ನಡೆಯಲಿರುವ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗೆ ವಿದ್ಯಾರ್ಥಿಗಳು ಉತ್ತಮವಾಗಿ ಸಿದ್ಧರಾಗುವಂತೆ ತಿಳಿಸಿದ ಮೋದಿ, ಪರೀಕ್ಷೆ ಬರೆಯಲಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು. ಹಾಗೆಯೇ ಸೈನ್ಯದಲ್ಲಿ ಮುಬರುವ ಯಾವುದೇ ಯುದ್ಧ ಪರೀಕ್ಷೆಗಯಲ್ಲಿ ಯಶಸ್ವಿಯಾಗುವಂತೆ ಭಾರತೀಯ ಸೇನಾ ಪಡೆಗೂ ಮೋದಿ ಹಾರೈಸಿದರು.