ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ತಿಹಾರ್ ಜೈಲಿನಲ್ಲಿ ಬಂಧನದಲ್ಲಿರಿಸಲಾಗಿದೆ.
ನ್ಯಾಯಾಂಗ ಬಂಧನದ ಮೊದಲ ದಿನವಾದ ಗುರುವಾರ ರಾತ್ರಿ ಪಿ. ಚಿದಂಬರಂ ಅವರಿಗೆ ತಿನ್ನಲು ಚಪಾತಿ ಮತ್ತು ದಾಲ್ ನೀಡಲಾಗಿದ್ದು, ಸಾಮಾನ್ಯ ಕೈದಿಗಳಿಗೆ ನೀಡುವಂತೆ ದಿಂಬು, ಹೊದಿಗೆ ನೀಡಿ ನೆಲದ ಮೇಲೆ ಮಲಗಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸಿಡು ಅವರಿಗೆ ಇದೆಲ್ಲಾ ಅಭ್ಯಾಸವಿಲ್ಲದ ಕಾರಣ ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು ಎಂದು ಮೂಲಗಳು ತಿಳಿಸಿವೆ.
600 ರಿಂದ 700 ಕೈದಿಗಳನ್ನು ಹೊಂದಿರುವ ತಿಹಾರ್ನ ಜೈಲಿನ ಸಂಖ್ಯೆ 7ರ 2ನೇ ವಾರ್ಡಿನ 15ನೇ ಸೆಲ್ನಲ್ಲಿ ಚಿದಂಬರಂ ಅವರನ್ನು ಇರಿಸಲಾಗಿದೆ. ಈ ಹಿಂದೆ ಚಿದು ಪುತ್ರ ಕಾರ್ತಿ ಚಿದಂಬರಂ ಅವರನ್ನೂ ಸಹ ಇದೇ ಜೈಲಿನಲ್ಲಿರಿಸಲಾಗಿತ್ತು. ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸೋದರಳಿಯ ರತುಲ್ ಪುರಿ ಮತ್ತು ಅಗುಸ್ಟಾವೆಸ್ಟ್ಲ್ಯಾಂಡ್ ವಿವಿಐಪಿ ಚಾಪರ್ ಪ್ರಕರಣದ ಆರೋಪಿ ಕ್ರಿಶ್ಚಿಯನ್ ಮೈಕೆಲ್ ಅವರನ್ನೂ ಸಹ ಇಲ್ಲೇ ಬಂಧನಕ್ಕೊಳಪಡಿಸಲಾಗಿತ್ತು.
ಶುಕ್ರವಾರ ಬೆಳಿಗ್ಗೆ ಚಿದಂಬರಂ ಅವರಿಗೆ ಚಹಾ ಮತ್ತು ಬಿಸ್ಕತ್ತು ನೀಡಲಾಗಿದ್ದು, ಮಧ್ಯಾಹ್ನದ ಉಟಕ್ಕೆ ಚಪಾತಿ, ತರಕಾರಿ, ದಾಲ್ ಮತ್ತು ಅನ್ನವನ್ನು ಕೊಡಲಾಗುವುದು. ಮಧ್ಯಾಹ್ನ 3: 30 ರ ನಂತರ ಅವರು ಸೆಲ್ ನಿಂದ ಹೊರ ಬಂದು ಗ್ರಂಥಾಲಯ ಸೇವೆ ಪಡೆಯಬಹುದು ಅಥವಾ ಇತರ ಕೈದಿಗಳೊಂದಿಗೆ ಆಟವಾಡಬಹುದು. ಸಂಜೆ 6.45ಕ್ಕೆ ರಾತ್ರಿ ಊಟ ನೀಡಿ, ರಾತ್ರಿ 9 ಗಂಟೆಯವರೆಗೆ ಟಿವಿ ವೀಕ್ಷಣೆಗೆ ಅನುಮತಿ ನೀಡಲಾಗಿದೆ. ಬಳಿಕ ಮತ್ತೆ ಅವರ ಸೆಲ್ ಗೆ ತೆರಳಬೇಕಾಗುತ್ತದೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 19ರವರೆಗೆ ಚಿದಂಬರಂ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೀಗಾಗಿ ಸೆಪ್ಟೆಂಬರ್ 16ರಂದು ಚಿದಂಬರಂ ಅವರ 74 ಹುಟ್ಟುಹಬ್ಬ ಇದ್ದರೂ ಅವರು ಆ ದಿನವನ್ನು ಜೈಲಿನೊಳಗೇ ಕಳೆಯಬೇಕಿದೆ.