ತಿರುವನಂತಪುರ: ಕೇರಳದ ಆಡಳಿತಾರೂಢ ಸಿಪಿಎಂ ಪೋಸ್ಟರ್’ಗಳಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಭಾವಚಿತ್ರ ಹಾಕಿದ ಘಟನೆಯೊಂದು ಸಂಭವಿಸಿದೆ.
ಇಡುಕ್ಕಿ ಜಿಲ್ಲೆಯ ನೆಡುಂಕದಂ ಎಂಬಲ್ಲಿ ಡಿ.16-17ರಂದು ಯೋಜನೆಗೊಂಡಿದ್ದ ಸಿಪಿಎಂ ಕಾರ್ಯಕ್ರಮವೊಂದಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಸಂಬಂಧ ಹಾಕಲಾಗಿದ್ದ ಪೋಸ್ಟರ್’ನಲ್ಲಿ ಕಿಮ್ ಫೋಟೋ ಹಾಕಲಾಗಿತ್ತು. ಇದನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಬಹಿರಂಗಪಡಿಸಿದ್ದಾರೆ.
`ಜಗತ್ತಿಗೆ ಕಂಟಕರಾಗಿರುವ ಇಂಥ ಸರ್ವಾಧಿಕಾರಿಗಳ ಫೋಟೊವನ್ನು ಸಿಪಿಎಂ ತನ್ನ ಪೋಸ್ಟರ್’ಗಳಲ್ಲಿ ಹಾಕಿದೆ ಎಂದರೆ ಕೇರಳವನ್ನು ಹಿಂದು ಕಾರ್ಯಕರ್ತರ ಹತ್ಯಾಭೂಮಿಯಾಗಿ ಅದು ಪರಿವರ್ತಿಸಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ' ಎಂದು ಕುಟುಕಿದ್ದಾರೆ.
ಅಲ್ಲದೆ, `ಕೇರಳದಲ್ಲಿನ ಆರೆಸ್ಸೆಸ್-ಬಿಜೆಪಿ ಕಚೇರಿಗಳ ಮೇಲೆ ಎಡರಂಗವು ಕ್ಷಿಪಣಿಗಳನ್ನು ಹಾರಿಸುವುದಿಲ್ಲ ಎಂಬ ಭರವಸೆ ಇದೆ' ಎಂದೂ ಟೀಕಿಸಿದ್ದಾರೆ. ಆದರೆ ಈ ಪೋಸ್ಟರ್’ನ ಹಿಂದೆ ಕಿಡಿಗೇಡಿಗಳ ಕುತಂತ್ರವಿದೆ ಎಂದು ಎಡರಂಗ ಪ್ರತಿಕ್ರಿಯಿಸಿದೆ.