ನವದೆಹಲಿ: ಇದೇ ಮೊದಲ ಬಾರಿಗೆ ವಿವಿಪ್ಯಾಟ್ ಪರಿಶೀಲಿಸಿದ ಕಾಗದದ ಸ್ಲಿಪ್ ಎಣಿಕೆಯಿಂದಾಗಿ ಲೋಕಸಭಾ ಫಲಿತಾಂಶದಲ್ಲಿ ವಿಳಂಬವಾಗಲಿದೆ ಎನ್ನಲಾಗಿದೆ.
ಸುಮಾರು 8 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿದ್ದು, 542 ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ.ಈಗಾಗಲೇ ಏಳು ಹಂತದ ಚುನಾವಣೆ ಮುಗಿದಿದ್ದು 90.99 ಕೋಟಿ ಮತದಾರರ ಪೈಕಿ ಶೇ 67.11 ರಷ್ಟು ಜನರು ಮತ ಚಲಾಯಿಸಿದ್ದಾರೆ. ಇದು ಇದುವರೆಗಿನ ಸಂಸತ್ತಿನ ಚುನಾವಣೆಯಲ್ಲಿಯೇ ಅಧಿಕ ಪ್ರಮಾಣದ ಮತದಾನ ಎಂದು ಹೇಳಲಾಗಿದೆ.
ಪ್ರತಿ ವಿಧಾನಸಭೆ ಕೇಂದ್ರದ ಐದು ಮತದಾನ ಕೇಂದ್ರದಲ್ಲಿ ವಿವಿಪ್ಯಾಟ್ ತುಲನೆ ಮಾಡಲಾಗುತ್ತದೆ. ಸುಮಾರು 10.3 ಲಕ್ಷ ಮತದಾನ ಕೇಂದ್ರಗಳಲ್ಲಿ ಒಟ್ಟು 20,600 ಇ.ವಿ.ಎಂ.-ವಿವಿಪ್ಯಾಟ್ತು ಕೇಂದ್ರಗಳಲ್ಲಿ ತುಲನೆಯನ್ನು ಮಾಡಲಾಗುತ್ತದೆ ಎನ್ನಲಾಗಿದೆ. ನಾಳೆ ಮತ ಎಣಿಕೆ ಸಂದರ್ಭದಲ್ಲಿ ಎಂದಿನಂತೆ ಪೋಸ್ಟಲ್ ಮತಪತ್ರಗಳನ್ನು ಎಣಿಸಲಾಗುತ್ತದೆ.ಸುಮಾರು 18 ಲಕ್ಷದಷ್ಟು ಪೋಸ್ಟಲ್ ಮತಗಳಿವೆ ಇದರಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿ, ಕೇಂದ್ರೀಯ ಪೊಲೀಸ್ ಪಡೆ ಸಿಬ್ಬಂದಿ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಗಳಿದ್ದಾರೆ.
ವಿದೇಶದಲ್ಲಿ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ಮತ ಚಲಾಯಿಸುವ ಸಿಬ್ಬಂದಿಯನ್ನು ಕೂಡ ಸೇವಾ ಮತದಾರರು ಎಂದು ಕರೆಯಲಾಗುತ್ತದೆ.18 ಲಕ್ಷ ಮತದಾರರಲ್ಲಿ ಒಟ್ಟು 16.49 ಲಕ್ಷ ಮಂದಿ ಮೇ 17 ರಂದು ಪೋಸ್ಟಲ್ ಮತ ಚಲಾಯಿಸಿದ್ದಾರೆ.